ದೇಶದ ಏಕತೆಗೆ ಸಂವಿಧಾನ ಅರಿವು ಅಗತ್ಯ

| Published : Nov 12 2025, 02:00 AM IST

ಸಾರಾಂಶ

ದೇಶವು ಇಷ್ಟು ಸುಭದ್ರವಾಗಿರಲು ಸಂವಿಧಾನವೇ ಕಾರಣ. ಇದರ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅರಿವು ಅತ್ಯಗತ್ಯವಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಮಣಿಕಂಠ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ದೇಶವು ಇಷ್ಟು ಸುಭದ್ರವಾಗಿರಲು ಸಂವಿಧಾನವೇ ಕಾರಣ. ಇದರ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅರಿವು ಅತ್ಯಗತ್ಯವಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಮಣಿಕಂಠ ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತ್ಯದ ವತಿಯಿಂದ ಹಮ್ಮಿಕೊಂಡಿರುವ ನವಂಬರ್ ೧೧ ರಿಂದ ೧೫ರವರೆಗೆ ಚಾಮರಾಜನಗರದಿಂದ ಮೈಸೂರಿನವರೆಗೆ ಸಂವಿಧಾನ ಸಂದೇಶ ಪಾದಯಾತ್ರೆಗೆ ಚಾಲನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ,ಆರ್. ಅಂಬೇಡ್ಕರ್ ಅವರ ಸಮಗ್ರ ಅಧ್ಯಯನದಿಂದ ರಚಿತವಾಗಿರುವ ಭಾರತದ ಸಂವಿಧಾನ ಅತ್ಯಂತ ಉತ್ಕೃಷ್ಟ ಸಂವಿಧಾನವಾಗಿದೆ, ನಮ್ಮ ಸಂವಿಧಾನ ರಚನೆ ಸಂದರ್ಭದಲ್ಲಿ ಅಮೇರಿಕಾ ಸೇರಿದಂತೆ ಹಲವು ದೇಶಗಳು ನಮ್ಮ ಸಂವಿಧಾನ ಪೀಠಿಕೆಯನ್ನು ಮೆಚ್ಚಿ ಶುಭ ಹಾರೈಸಿವೆ ಎಂದರು.

ಸಂವಿಧಾನ ಯಾವುದೇ ಜಾತಿ, ಧರ್ಮಕ್ಕೆ, ವರ್ಗಕ್ಕೆ ಸೀಮಿತವಾಗಿಲ್ಲ, ಇದು ಅಖಂಡ ಭಾರತಕ್ಕೆ ಸಂಬಂಧಿಸಿದ್ದು, ಪ್ರಜಾಸತ್ಮಾತಕವಾದ ಸಂವಿಧಾನ. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ,ಆರ್. ಅಂಬೇಡ್ಕರ್ ಅವರು ಎರಡು ವರ್ಷಗಳ ಸುದೀರ್ಘ ಅಧ್ಯಯನದಿಂದ ರಚನೆಗೊಂಡ ಸಂವಿಧಾನದ ಬಗ್ಗೆ ಪಠ್ಯಗಳಲ್ಲಿ ತಿಳಿದುಕೊಂಡಿದ್ದರೂ, ಇನ್ನು ಸಂವಿಧಾನದ ಬಗ್ಗೆ ಹಕ್ಕುಗಳ ಬಗ್ಗೆ ಅರಿವು ಅಗತ್ಯವಾಗಿದೆ, ನಮ್ಮ ಸಂವಿಧಾನದಲ್ಲಿ ೩೯೫ ವಿಧಿಗಳಿದ್ದು, ಇದನ್ನು ಡಾ.ಬಿ,ಆರ್. ಅಂಬೇಡ್ಕರ್ ಅವರು ಮಾತೃ ಹೃದಯದಿಂದ ರಚಿಸಿಕೊಟ್ಟಿದ್ದಾರೆ ಎಂದರು.

ಇಂತಹ ಸಂವಿಧಾನ ದುಷ್ಟರ ಕೈಗೆ ಸಿಗಬಾರದು, ಒಳ್ಳೆಯ ಆಡಳಿತದಿಂದ ಇದು ಅನುಷ್ಠಾನಗೊಳ್ಳಬೇಕು , ಸಂವಿಧಾನ ಇನ್ನು ಹೆಚ್ಚು ಅರಿವು ಮೂಡಬೇಕು ಎಂಬ ಉದ್ದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತ್ಯದ ವತಿಯಿಂದ ಚಾಮರಾಜನಗರದಿಂದ ಮೈಸೂರಿನವರೆಗೆ ಸಂವಿಧಾನ ಸಂದೇಶ ಪಾದಯಾತ್ರೆ ಹಮ್ಮಿಕೊಂಡಿದೆ, ಇದು ಯಶಸ್ವಿಯಾಗಲಿ ಎಂದರು.

ಸಮಾರಂವನ್ನು ಮಾಜಿ ಸಚಿವ ಹಾಗೂ ಮಾಜಿ ಸಂಸದ ದಿ. ವಿ, ಶ್ರೀನಿವಾಸಪ್ರಸಾದ್ ಅವರ ಧರ್ಮಪತ್ನಿ ಭಾಗ್ಯಲಕ್ಷ್ಮಿ ಶ್ರೀನಿವಾಸಪ್ರಸಾದ್ ಉದ್ಘಾಟಿಸಿ, ಯಾತ್ರೆಗೆ ಶುಭ ಹಾರೈಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತ್ಯದ ಕಾರ್ಯದರ್ಶಿ ಎಚ್. ಕೆ. ಪ್ರವೀಣ್ ಕಳಸ ಮಾತನಾಡಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಸಂವಿಧಾನಕ್ಕೆ ಧಕ್ಕೆಯಾಯಿತು, ಅದರೆ ಇಡೀ ಭಾರತ ಒಂದಾಗಿ ಸಂವಿಧಾನವನ್ನು ಉಳಿಸಿಕೊಂಡಿತು ಎಂದರು.

ನಮ್ಮ ಸಂವಿಧಾನ ರಚನೆಯಾಗಿ ೭೫ ವರ್ಷವಾಗಿದೆ, ಇನ್ನು ನಮ್ಮ ಸಂವಿಧಾನದ ಸಂಪೂರ್ಣ ಅರಿವಿಲ್ಲ, ವಿದ್ಯಾರ್ಥಿಗಳ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿಯೇ ಚಾಮರಾಜನಗರದಿಂದ ಮೈಸೂರಿನವರೆಗೆ ಸುಮಾರು ೭೫ ಕಿ.ಮೀ. ೭೫ ವಿದ್ಯಾರ್ಥಿಗಳಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಪ್ರಾಂತ್ಯದ ಪ್ರಜ್ವಲ್, ನಿರ್ಮಲಾ ಮಾತಾಜೀ ಇದ್ದರು. ಕಾರ್ಯಕ್ರಮದ ನಂತರ ಪಾದಯಾತ್ತೆಗೆ ಚಾಲನೆ ನೀಡಲಾಯಿತು, ನಗರದ ಪ್ರಮುಖ ಬೀದಿಗಳಲ್ಲಿ ಶೋಭಯಾತ್ರೆ ನಡೆಯಿತು. ಬಿಜೆಪಿ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿದ್ದರು, ಸಮಾರೋಪ ಸಮಾರಂಭವು ಮೈಸೂರಿನಲ್ಲಿ ನಡೆಯಲಿದೆ