ನಗರ ವ್ಯಾಪ್ತಿಯಲ್ಲಿ 25 ಉದ್ಯಾನವನಗಳ ನಿರ್ಮಾಣ

| Published : Oct 06 2023, 12:06 PM IST

ಸಾರಾಂಶ

ರಾಮನಗರ: ನಗರ ವ್ಯಾಪ್ತಿಯಲ್ಲಿ ಪ್ರಮುಖ ಬಡಾವಣೆಗಳು ಸೇರಿದಂತೆ ಹಲವೆಡೆ 25 ಉದ್ಯಾನವನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ರಾಮನಗರ: ನಗರ ವ್ಯಾಪ್ತಿಯಲ್ಲಿ ಪ್ರಮುಖ ಬಡಾವಣೆಗಳು ಸೇರಿದಂತೆ ಹಲವೆಡೆ 25 ಉದ್ಯಾನವನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು. ನಗರದ ಶಿವಲಿಂಗಯ್ಯ ಲೇಔಟ್‌ ಮತ್ತು ಬಾಲಾಜಿ ಲೇಔಟ್‌ ನಲ್ಲಿ ನಿರ್ಮಾಣ ಮಾಡಿರುವ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದೇನೆ. ಅದರಂತೆ ಉದ್ಯಾನವನ ನಿರ್ಮಾಣ ಕಾರ್ಯವೂ ನಡೆಯುತ್ತಿದೆ ಎಂದರು. ಶಿವಲಿಂಗಯ್ಯ ಲೇಔಟ್‌ ಮತ್ತು ಬಾಲಾಜಿ ಲೇಔಟ್‌ ನಲ್ಲಿನ ಉದ್ಯಾನವನವನ್ನು ತಲಾ 50 ಲಕ್ಷ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಉದ್ಯಾನವನದ ಕಾಮಗಾರಿ ಗುಣಮಟ್ಟ ಹಾಗೂ ಅಳವಡಿಸಿರುವ ಜಿಮ್‌ ಸಾಧನಗಳನ್ನು ಪರಿಶೀಲಿಸಿದ್ದೇನೆ. ಇನ್ನೂ ಹೆಚ್ಚಿನ ಜಿಮ್‌ ಸಾಧನಗಳನ್ನು ಅಳವಡಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಜನರು ಆರೋಗ್ಯವಾಗಿ ಇರಬೇಕೆಂದರೆ ವ್ಯಾಯಾಮ ಮತ್ತು ವಾಯು ವಿಹಾರ ಮಾಡಬೇಕು. ಬೆಳಗ್ಗೆ ಮತ್ತು ಸಂಜೆ ವಾಕ್‌ ಮಾಡಬೇಕು ಎಂಬುದು ಎಲ್ಲರ ಆಸೆ ಅಭಿಲಾಷೆಯಾಗಿದೆ. ಇದಕ್ಕಾಗಿ ನಗರ ವ್ಯಾಪ್ತಿಯಲ್ಲಿ ಉದ್ಯಾನವನಗಳ ಅವಶ್ಯಕತೆ ಹೆಚ್ಚಾಗಿದ್ದು, ನಗರದಲ್ಲಿ ಒಟ್ಟು 25 ಉದ್ಯಾನವನಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಉದ್ಯಾನವನಗಳ ನಿರ್ಮಾಣ ಮಾತ್ರವಲ್ಲದೆ ಅವುಗಳ ನಿರ್ವಹಣೆಯೂ ಆಗಬೇಕಿದೆ. ಇದಕ್ಕಾಗಿ ನಗರಸಭೆಯವರು ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ಉದ್ಯಾನವನಗಳಿಗೆ ನಿಯೋಜನೆ ಮಾಡಿ ನಿರ್ವಹಣೆ ಮಾಡಬೇಕು. ಈ ಬಗ್ಗೆ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು. ನಗರದಲ್ಲಿ ಕುಡಿಯುವ ನೀರಿನ ಪೈಪ್‌ ಲೈನ್‌ ಗಳ ಅವಳಡಿಕೆ ಕಾರ್ಯ ಶೇ.95ರಷ್ಟು ಮುಗಿದಿದ್ದು, ಒಂದೂವರೆ ಕಿ.ಮೀ. ಪೈಪ್ ಲೈನ್‌ ಅಳವಡಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಅದರ ಜೊತೆಗೆ ಸ್ಯಾನಿಟರಿ ಪೈಪ್‌ ಲೈನ್‌ ಅಳವಡಿಸುವ ಮೂಲಕ ಶಾಶ್ವತವಾದ ಕೆಲಸ ಮಾಡಲಾಗುತ್ತಿದೆ. ಅದೆಲ್ಲ ಪೂರ್ಣಗೊಂಡ ಮೇಲೆ ರಸ್ತೆಗಳ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಪೊಲೀಸ್ ಭವನ ವೃತ್ತದಿಂದ ಹುಣಸನಹಳ್ಳಿವರೆಗೆ ಹೈಟೆಕ್‌ ರಸ್ತೆ ನಿರ್ಮಾಣವಾಗಲಿದೆ. ಅಲ್ಲದೆ, ನಗರದ ರಸ್ತೆಗಳ ಡಾಂಬರೀಕರಣಕ್ಕಾಗಿ 550 ಕೋಟಿ ರುಪಾಯಿಗಳ ಎಸ್ಟಿಮೆಂಟ್‌ ಅನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಶಾಸಕರ ಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ವಿವರಿಸಿ ವಿಶೇಷ ಅನುದಾನಕ್ಕಾಗಿ ಮನವಿ ಮಾಡಿದ್ದೇನೆ. ಅದರಂತೆ ಮುಖ್ಯಮಂತ್ರಿಗಳು ನಗರದ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದ್ದು, ಡಿಸೆಂಬರ್‌ ನಲ್ಲಿ 300 ಕೋಟಿ ಬಿಡುಗಡೆಯಾಗುವ ವಿಶ್ವಾಸವಿದೆ. ಬೇರೆ ಸಚಿವರು ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸೋಮಶೇಖರ್ (ಮಣಿ), ಸ್ಥಾಯಿ ಸಮಿತಿ ಅಧ್ಯಕ್ಷ ಅಜ್ಮತ್ , ಸದಸ್ಯರಾದ ನಿಜಾಮುದ್ದೀನ್ ಷರೀಫ್, ಆರೀಫ್ , ಮಂಜುನಾಥ್ , ಆಯಿಷಾ ಬಾನು, ಆಯುಕ್ತ ನಾಗೇಶ್ , ಮತ್ತಿತರರು ಭಾಗವಹಿಸಿದ್ದರು. 5ಕೆಆರ್ ಎಂಎನ್‌ 4.ಜೆಪಿಜಿ ರಾಮನಗರದ ಶಿವಲಿಂಗಯ್ಯ ಲೇಔಟ್‌ ನಲ್ಲಿ ಉದ್ಯಾನವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು. ---------------------