ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಬದರಿಕೊಪ್ಪಲಿನ ಸವದತ್ತಿ ಶ್ರೀ ಎಲ್ಲಮ್ಮದೇವಿಯ 25ನೇ ವರ್ಷದ ಜಾತ್ರೆ, 25 ಗ್ರಾಮ ದೇವತೆಗಳ ಉತ್ಸವ ಮೆರವಣಿಗೆ ಹಾಗೂ ರಥೋತ್ಸವವು ಸಹಸ್ರಾರು ಭಕ್ತ ಸಮೂಹದ ನಡುವೆ ಬುಧವಾರ ಬಹಳ ವಿಜೃಂಭಣೆಯಿಂದ ನಡೆಯಿತು.ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಇಡೀ ರಾತ್ರಿ ಶ್ರೀ ಸವದತ್ತಿ ಎಲ್ಲಮ್ಮದೇವಿಗೆ ದೀಪ ಪ್ರಜ್ವಲನಾ, ಅನುಜ್ಞೆ ಗಂಗೆ ಪೂಜೆ, ಮಹಾಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮೃತ್ಯುಂಜಯ ಹೋಮ ಹಾಗೂ ದುರ್ಗಿ ಹೋಮ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮತ್ತು ಜಮದಗ್ನಿ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಬಗೆಯ ಧಾರ್ಮಿಕ ಪೂಜಾ ಕೈಂಕರ್ಯ ಜರುಗಿದವು.
ಬುಧವಾರ ಬೆಳಗ್ಗೆ ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ಗಂಗಾಪೂಜೆ ಹೂ ಹೊಂಬಾಳೆ ನಂತರ ಪಟ್ಟಲದಮ್ಮದೇವಿ ಪೂಜಾ ಕುಣಿತ, ಮಂಗಳವಾದ್ಯ ಮತ್ತು ತಮಟೆ ಮೇಳದೊಂದಿಗೆ ಶ್ರೀ ಸವದತ್ತಿ ಎಲ್ಲಮ್ಮದೇವಿ, ಉಪ್ಪಾರಹಳ್ಳಿ ಆಂಜನೇಯಸ್ವಾಮಿ ಹಾಗೂ ಪಟ್ಟಣದ ಶಕ್ತಿದೇವತೆ ಶ್ರೀ ಬಡಗೂಡಮ್ಮ ಸೇರಿದಂತೆ ಸುತ್ತಮುತ್ತಲ 25 ಗ್ರಾಮದೇವತೆಗಳ ಉತ್ಸವಮೂರ್ತಿಗಳ ಮೆರವಣಿಗೆ ನಡೆಸಲಾಯಿತು.ಪೂರ್ಣಕುಂಭ ಮತ್ತು ತಂಬಿಟ್ಟಿನ ಆರತಿ ಹೊತ್ತಿದ್ದ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದ 25ಗ್ರಾಮ ದೇವತೆಗಳಿಗೆ ಭಕ್ತಿಭಾವ ಸಮರ್ಪಿಸಿದರು. ದೇವರ ಉತ್ಸವ ಮೂರ್ತಿಗಳ ಮೆರವಣಿಗೆ ದೇವಾಲಯದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಶ್ರೀ ಸವದತ್ತಿ ಎಲ್ಲಮ್ಮದೇವಿಯ ಉತ್ಸವ ಮೂರ್ತಿಯನ್ನುಸರ್ವಾಲಂಕೃತ ರಥದ ಪೀಠದಲ್ಲಿರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾಗುತ್ತಿದ್ದ ರಥಕ್ಕೆ ನೆರೆದಿದ್ದ ಭಕ್ತರು ಹಣ್ಣು ಜವನ ಎಸೆದು ತಮ್ಮ ಭಕ್ತಿಭಾವ ಮೆರೆದರು.
ಜಾತ್ರಾ ಮಹೋತ್ಸವಕ್ಕೆ ತಾಲೂಕು, ಜಿಲ್ಲೆ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತರಿಗೆ ಪ್ರಸಾದದ ರೂಪದಲ್ಲಿ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.