ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ₹೭೪ ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದು ಅನುಮೋದನೆ ಹಂತದಲ್ಲಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.

ಬುಧವಾರ ಕಾರ್ಖಾನೆಯ ಆವರಣದಲ್ಲಿ ೮೨ ಮತ್ತು ೮೩ನೇ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ೨೦೧೫-೧೬ ಮತ್ತು ೨೦೧೬-೧೭ರ ಎರಡೂ ಸಾಲಿನ ವರದಿಯನ್ನು ಅನುಮೋದಿಸುವ ಸಭೆಯನ್ನು ಯಶಸ್ವಿಯಾಗಿ ಅಂತ್ಯಗೊಳಿಸಿದರು.

೨೦೨೪-೨೫ನೇ ಸಾಲಿನಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸುವ ಸಲುವಾಗಿ ರಾಜ್ಯ ಸರ್ಕಾರ ಘೋಷಿಸಿರುವಂತೆ ಮೈಸೂರು ಸಕ್ಕರೆ ಕಂಪನಿಯ ಬಾಯ್ಲರ್ ಹೌಸ್ ಸ್ಥಾಪನೆಗೆ ಪುಣೆಯ ವಿಎಸ್‌ಐ ಹಾಗೂ ಬೆಳಗಾವಿಯ ಎನ್‌ಎನ್‌ಎಸ್‌ಐ ಇವರಿಂದ ಅಂದಾಜು ₹೬೦ ಕೋಟಿ ವೆಚ್ಚದ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅದಕ್ಕೆ ಅನುಮೋದನೆ ನೀಡುವುದೊಂದೇ ಬಾಕಿ ಇದೆ ಎಂದು ತಿಳಿಸಿದರು.

ಸಭೆಯಲ್ಲಿ ಷೇರುದಾರರು, ರೈತ ಸಂಘದ ಮುಖಂಡರು ಸೇರಿದಂತೆ ಹಲವು ರೈತರು ಕಾರ್ಖಾನೆಯು ಸತತವಾಗಿ ನಷ್ಟ ಅನುಭವಿಸಲು ಕಾರಣ ಯಾರು? ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ಪುನಶ್ಚೇತನಕ್ಕೆ ವಹಿಸಿರುವ ಕ್ರಮಗಳೇನು ಎಂದು ಪ್ರಶ್ನಿಸಿದರು.


ಎಲ್ಲರ ಪ್ರಶ್ನೆಗಳಿಗೂ ಸಮಾಧಾನದಿಂದಲೇ ಉತ್ತರಿಸಿದ ಅಧ್ಯಕ್ಷ ಸಿ.ಡಿ.ಗಂಗಾಧರ್, ೨೦೨೪ರ ಮಾರ್ಚ್‌ನಲ್ಲಿ ಕಾರ್ಖಾನೆ ಅಧ್ಯಕ್ಷನಾಗಿ ರಾಜ್ಯ ಸರ್ಕಾರ ನನ್ನನ್ನು ನೇಮಿಸಿತು. ೨೦೨೩-೨೪ನೇ ಸಾಲಿನಿಂದ ಇಲ್ಲಿಯವರೆಗೆ ಸರ್ಕಾರ ₹೧೧೩ ಕೋಟಿ ಹಣವನ್ನು ನೀಡಿದೆ. ₹೫೩.೫೦ ಕೋಟಿ ವಿದ್ಯುತ್ ಬಿಲ್ ಮನ್ನಾ ಮಾಡಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದರು.

ಪ್ರಸ್ತುತ ಕಾರ್ಖಾನೆಗೆ ಆಗಿರುವ ನಷ್ಟವನ್ನು ಸರಿಪಡಿಸುವುದು. ಕಾರ್ಖಾನೆಯ ಆಸ್ತಿ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ಈ ಹಿಂದೆ ನಾಗರಾಜಪ್ಪ ಕಾರ್ಖಾನೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾರ್ಖಾನೆಗೆ ಸುಮಾರು ₹೧೨೭ ಕೋಟಿ ನಷ್ಟವಾಗಿದೆ. ಆ ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿಸಿ ಕಾನೂನು ಹೋರಾಟ ನಡೆಸಿದ ಪರಿಣಾಮ ನ್ಯಾಯಾಲಯ ನಾಗರಾಜಪ್ಪ ಆಸ್ತಿ ಜಪ್ತಿಗೆ ಆದೇಶ ಹೊರಡಿಸಿದೆ. ಸರ್ಕಾರದಿಂದ ಆದೇಶ ಹೊರಬೀಳುವುದು ಬಾಕಿ ಇದ್ದು, ನಂತರದಲ್ಲಿ ಕಾರ್ಖಾನೆಯ ಮಾಜಿ ಅಧ್ಯಕ್ಷ ನಾಗರಾಜಪ್ಪ ವಿರುದ್ಧ ಜಿಲ್ಲಾಧಿಕಾರಿಯವರು ಆಸ್ತಿ ಜಪ್ತಿಗೆ ಕ್ರಮ ವಹಿಸುವರು ಎಂದು ತಿಳಿಸಿದರು.

ರೈತ ಸಂಘದ ಮುಖಂಡರೊಬ್ಬರು ಕಾರ್ಖಾನೆಯ ಷೇರುದಾರರು ಎಷ್ಟು ಮಂದಿ ಇದ್ದಾರೆ? ಸಂಗ್ರಹವಾಗಿರುವ ಹಣವೆಷ್ಟು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು ೧೪,೦೦೦ ಷೇರುದಾರರಿದ್ದು, ₹೮.೭೩ ಕೋಟಿ ಸರ್ಕಾರದಲ್ಲಿದೆ ಎಂದು ಉತ್ತರಿಸಿದರು.

ಈ ವೇಳೆ ರೈತಸಂಘದ ಕೆ.ಬೋರಯ್ಯ, ಸಿಐಟಿಯುನ ಸಿ.ಕುಮಾರಿ ಮತ್ತಿತರರು ೨೦೧೬-೧೭ನೇ ಸಾಲಿನಲ್ಲಿ ಕಾರ್ಖಾನೆ ನಷ್ಟಕ್ಕೊಳಗಾಗಲು ಕಾರಣ ಯಾರು? ಏತಕ್ಕಾಗಿ ಖಾಸಗಿಗೆ ವಹಿಸಲು ಮುಂದಾಗಿದ್ದರು? ಕಬ್ಬು ಕಟಾವಿನ ₹೫ ಲಕ್ಷ ಏನಾಯಿತು? ಮುಂತಾದ ಪ್ರಶ್ನೆಗಳನ್ನು ಮುಂದಿಟ್ಟರು.

ಮೈಷುಗರ್ ಕಂಪನಿಯು ಕಳೆದ ೮೫ ವರ್ಷಗಳಿಂದ ಸಾಕಷ್ಟು ಬಂಡವಾಳ ಮತ್ತು ಸಂಪನ್ಮೂಲಗಳೊಂದಿಗೆ ಅಪಾರ ನಿವ್ವಳ ಮೌಲ್ಯದ ಆಸ್ತಿ ಹೊಂದಿದೆ. ಪ್ರಸ್ತುತ ಸಾಮಾನ್ಯ ಮಾರುಕಟ್ಟೆಗೆ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಬಂಧವಿದ್ದ ಕಾರಣ ಹಣಕಾಸಿನ ವಿಷಯಗಳ ಮೇಲಿನ ಅತಿಯಾದ ಹೊರೆಯಿಂದ ಕಂಪನಿಯು ೨೦೧೬-೧೭ನೇ ಹಣಕಾಸು ವರ್ಷದಿಂದ ಸಾಕಷ್ಟು ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ ಎಂದು ಸಿ.ಡಿ.ಗಂಗಾಧರ್ ಉತ್ತರಿಸಿದರು.

ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್, ಕಾಯದರ್ಶಿ ಪ್ರಸನ್ನಬೇಡಿ ಸೇರಿದಂತೆ ಕಾರ್ಖಾನೆಯ ಅಧಿಕಾರಿಗಳು ಇದ್ದರು.

---

ಅಧ್ಯಕ್ಷರು ದಾಖಲಿಸಿದ ಮಾಹಿತಿಗಳು

* ೨೦೨೪-೨೫ನೇ ಸಾಲಿನಲ್ಲಿ ೧,೫೭,೩೦,೦೦೦ ಯೂನಿಟ್ ವಿದ್ಯುತ್ತನ್ನು ಉತ್ಪಾದಿಸಿ ೬,೬೩,೯೬೦ ಯೂನಿಟನ್ನು ಕಾರ್ಖಾನೆಗೆ ಬಳಸಿಕೊಂಡು ೭೧,೮೩,೪೪೦ ಯೂನಿಟ್‌ನ್ನು ಚೆಸ್ಕಾಂಗೆ ಯೂನಿಟ್‌ಗೆ ₹೬.೭೦ ನಂತೆ ಮಾರಿ ಕಾರ್ಖಾನೆ ಪಾವತಿಸಬೇಕಿದ್ದ ವಿದ್ಯುತ್ ಬಿಲ್‌ನಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.

* ಕಳೆದ ೭೦ ವರ್ಷಗಳಿಂದ ಅಕ್ರಮವಾಗಿ ಕಾರ್ಖಾನೆಯ ಜಮೀನನ್ನು ಬಳಸುತ್ತಿದ್ದ ೨೭ ಎಕರೆ ಜಮೀನುಗಳನ್ನು ಕಾರ್ಖಾನೆಯ ವಶಕ್ಕೆ ಪಡೆಯಲಾಗಿದೆ. ಸುಮಾರು ₹೨೭೦ ಕೋಟಿ ಮೌಲ್ಯದ ಆಸ್ತಿ ಮೈಷುಗರ್‌ನ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿದೆ.

* ೨೦೨೬-೨೭ನೇ ಸಾಲಿನಲ್ಲಿ ಕಬ್ಬು ನುರಿಸಲು ಈಗಾಗಲೇ ೫.೮೦ ಲಕ್ಷ ಮೆ.ಟನ್ ಕಬ್ಬನ್ನು ರೈತರಿಂದ ಒಪ್ಪಿಗೆ ಮಾಡಿಸಲಾಗಿದೆ.

* ಹಿಂದಿನ ಅಧ್ಯಕ್ಷ ನಾಗರಾಜಪ್ಪ ಪ್ರಕರಣವು ಲೋಕಾಯುಕ್ತ ಆದೇಶವಾಗಿದ್ದ ₹೧೨೭ ಕೊಟಿ ವಸೂಲಾತಿಗೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ನುರಿತ ವಕೀಲರನ್ನು ನೇಮಿಸಿ ವಾದ ಮಂಡಿಸಿದ ಬಳಿಕ ತಡೆಯಾಜ್ಞೆ ತೆರವುಗೊಳಿಸಿ ವಸೂಲಾತಿಗೆ ಆದೇಶಿಸಿದೆ. ಜಿಲ್ಲಾಧಿಕಾರಿಗಳು ಅದನ್ನು ನಿರ್ವಹಿಸಲಿದ್ದಾರೆ

----------

ರೈತರು, ಷೇರುದಾರರ ಬೇಡಿಕೆಗಳು

* ಕಬ್ಬಿನ ತೂಕದಲ್ಲಿ ರೈತರಿಗೆ ಆಗುವ ಮೋಸ ತಪ್ಪಿಸಲು ಖಾಸಗಿ ಕಾರ್ಖಾನೆಗಳಲ್ಲೂ ಸರ್ಕಾರದಿಂದಲೇ ತೂಕದ ಮಾಪಕ ಯಂತ್ರ ಅಳವಡಿಸುವುದು.

* ಸಾಮಾನ್ಯ ಸಭೆಗಳಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರು ಹಾಜರಿರಬೇಕು ಎಂದು ಠರಾವು ಹೊರಡಿಸುವುದು.

* ೨೦೧೪ರಿಂದ ೨೦೨೧ರವರೆಗೂ ಕಾರ್ಖಾನೆಯ ನಷ್ಟಕ್ಕೆ ಕಾರಣರಾದವರ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಮುಂದಿನ ಸಭೆಯಲ್ಲಿ ವರದಿ ಮಂಡಿಸುವುದು.

* ರೈತರು, ಷೇರುದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು.

* ವಾರ್ಷಿಕ ಸಭೆಗೂ ಮುನ್ನ ಪ್ರತಿಯೊಬ್ಬ ಷೇರುದಾರರಿಗೂ ವಾರ್ಷಿಕ ವರದಿಯ ಪುಸ್ತಕ ತಲುಪಿಸಬೇಕು.

-------

ಪುಸ್ತಕ ಇದ್ದರೂ ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಆಕ್ರೋಶ

ಸಭೆ ಆರಂಭವಾಗುತ್ತಿದ್ದಂತೆ ರೈತರು ಹಾಗೂ ಷೇರುದಾರರನ್ನು ಸಭೆಗೆ ಒಳಗೆ ಬಿಡಲು ಸಿಬ್ಬಂದಿ ಮೀನಮೇಷ ಎಣಿಸಿದ ಹಿನ್ನೆಲೆಯಲ್ಲಿ ರೈತರು ಹಾಗೂ ಷೇರುದಾರರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆ ಗೇಟ್‌ನಲ್ಲಿ ಪುಸ್ತಕ ಬಂದಿರುವ ಬಗ್ಗೆ ಖಚಿತಪಡಿಸಿಕೊಂಡು ಆಧಾರ್ ಕಾರ್ಡ್ ಪಡೆದುಕೊಂಡು ಒಳಗೆ ಬಿಡಲಾಗುತ್ತಿತ್ತು. ಆದರೆ ಕೆಲವರಿಗೆ ಆಧಾರ್ ಕಾರ್ಡ್ ತರುವ ಬಗ್ಗೆ ಯಾವುದೇ ಮಾಹಿತಿ ಇಲ್ಲದ್ದಿದ್ದರಿಂದ ಸಿಬ್ಬಂದಿ ಒಳಗೆ ಬಿಡಲು ನಿರಾಕರಿಸಿದರು. ಇದರಿಂದ ರೊಚ್ಚಿಗೆದ್ದ ರೈತರು ಹಾಗೂ ಷೇರುದಾರರು ಪೊಲೀಸರ ಭದ್ರತೆಯನ್ನು ಬೇಧಿಸಿ ಗೇಟ್‌ನ ಬಾಗಿಲನ್ನು ತಳ್ಳಿಕೊಂಡು ಒಳನುಗ್ಗಿದರು. ಇದರಿಂದ ಗೊಂದಲ ಉಂಟಾಯಿತು.

ಒಳನುಗ್ಗಿದ ರೈತರು ಏಕಾಏಕಿ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕಿಡಿಕಾರಿದರು. ಕೂಡಲೇ ಎಲ್ಲ ರೈತರು ಹಾಗೂ ಷೇರುದಾರರನ್ನು ಒಳಗೆ ಬಿಡಬೇಕು ಎಂದು ಪಟ್ಟು ಹಿಡಿದರು. ಆಗ ಅಧ್ಯಕ್ಷ ಸಿ.ಡಿ.ಗಂಗಾಧರ್ ಕೂಡಲೇ ಪುಸ್ತಕ ಇರುವವರ ಸಹಿ ಪಡೆದು ಒಳಗೆ ಬಿಡುವಂತೆ ಸೂಚಿಸಿದರು.