ಸಾರಾಂಶ
ಕೇಂದ್ರ ಸರ್ಕಾರದಿಂದ ತುಮಕೂರು ಜಿಲ್ಲೆಯಲ್ಲಿ ಹಲವಾರು ರೈಲ್ವೆ ಯೋಜನೆಗಳ ಮಂಜೂರಾತಿಗೆ ಸಹಕರಿಸಿರುವ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತುಮಕೂರು ನಗರದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ 100 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲು ಸಂಕಲ್ಪ ತೊಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು
ಕೇಂದ್ರ ಸರ್ಕಾರದಿಂದ ತುಮಕೂರು ಜಿಲ್ಲೆಯಲ್ಲಿ ಹಲವಾರು ರೈಲ್ವೆ ಯೋಜನೆಗಳ ಮಂಜೂರಾತಿಗೆ ಸಹಕರಿಸಿರುವ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತುಮಕೂರು ನಗರದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ 100 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲು ಸಂಕಲ್ಪ ತೊಟ್ಟಿದ್ದಾರೆ.ಸ್ಥಳೀಯ ವಾಸ್ತುಶಿಲ್ಪ ಅನುಸರಿಸಿ ಸಿದ್ಧಗಂಗಾ ಮಠದ ಮಾದರಿಯಲ್ಲಿ ನಗರದ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹಕಾರದಿಂದ ಸಚಿವ ವಿ.ಸೋಮಣ್ಣ ವಿವಿಧ ರೈಲ್ವೆ ಯೋಜನೆಗಳ ಅನುಷ್ಟಾನಕ್ಕೆ ಮುಂದಾಗಿದ್ದಾರೆ.ತುಮಕೂರು ರೈಲು ನಿಲ್ದಾಣವನ್ನು ಪ್ರಯಾಣಿಕರ ಸ್ನೇಹಿ ಸೌಕರ್ಯಗಳೊಂದಿಗೆ ನವೀಕರಣಗೊಂಡು ಬಹು ಹಂತದ ಪಾರ್ಕಿಂಗ್ ವ್ಯವಸ್ಥೆ, ಪ್ರಯಾಣಿಕರ ಆಧುನಿಕ ಲಾಂಜ್‌ಗಳು, ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಒಳಗೊಂಡಿರುತ್ತದೆ. ಬೆಳೆಯುತ್ತಿರುವ ತುಮಕೂರಿನ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ದೊರೆಯಲು ಕಾರ್ಯಪ್ರವೃತ್ತರಾಗುತ್ತಿದ್ದು ಇನ್ನೆರಡು ವರ್ಷಗಳಲ್ಲಿ ಈ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡುವ ಗುರಿ ಹೊಂದಿದ್ದಾರೆ.ಇದಲ್ಲದೆ, ಜಿಲ್ಲೆಯ ವಿವಿಧೆಡೆ ರೈಲ್ವೆ ಗೇಟ್‌ಗಳನ್ನು ಮುಚ್ಚಿ ಅಲ್ಲಿ ಕೆಳ ಸೇತುವೆ, ಮೇಲುಸೇತುವೆ ನಿರ್ಮಾಣಕ್ಕೆಕೇಂದ್ರ ಸರ್ಕಾರ ಅನುಮೋದನೆ ನೀಡಲು ಸಚಿವ ಸೋಮಣ್ಣ ಸಹಕರಿಸಿದ್ದಾರೆ. ಬಟವಾಡಿ ಗೇಟ್, ಬಡ್ಡಿಹಳ್ಳಿ ಗೇಟ್, ಮೈದಾಳ ಗೇಟ್, ಮಲ್ಲಸಂದ್ರಗೇಟ್, ನಿಟ್ಟೂರು ಸೇಷನ್ ಬಳಿ, ಕಳ್ಳಿಪಾಳ್ಯ ಗೇಟ್, ಬೆಂಚಗೆರೆ ಗೇಟ್‌ಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ ಎಂದು ಟಿ.ಆರ್ ಸದಾಶಿವಯ್ಯ ಹೇಳಿದ್ದಾರೆ.