ವಾಹನಗಳಿಗೆ ಹೆದರಿ ಮನೆಗಳಿಗೆ ತಡೆಗೋಡೆ ನಿರ್ಮಾಣ

| Published : Oct 22 2023, 01:00 AM IST

ವಾಹನಗಳಿಗೆ ಹೆದರಿ ಮನೆಗಳಿಗೆ ತಡೆಗೋಡೆ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ವಾಹನಗಳಿಗೆ ಹೆದರಿ ಮನೆಗಳಿಗೆ ತಡೆಗೋಡೆ ನಿರ್ಮಾಣ, ಹೆದ್ದಾರಿಯಲ್ಲಿ ಸಾಗುವ ವಾಹನಗಳು ಮನೆಗಳಿಗೆ ನುಗ್ಗುವ ಭಯ,ಸುರಕ್ಷತೆ ದೃಷ್ಟಿಯಿಂದ ಮನೆ ಮಾಲೀಕರಿಂದ ಎತ್ತರದ ತಡೆಗೋಡೆ
- ಹೆದ್ದಾರಿಯಲ್ಲಿ ಸಾಗುವ ವಾಹನಗಳು ಮನೆಗಳಿಗೆ ನುಗ್ಗುವ ಭಯ - ಸುರಕ್ಷತೆ ದೃಷ್ಟಿಯಿಂದ ಮನೆ ಮಾಲೀಕರಿಂದ ಎತ್ತರದ ತಡೆಗೋಡೆ ಮಂಡ್ಯ ಮಂಜುನಾಥ ಕನ್ನಡಪ್ರಭ ವಾರ್ತೆ ಮಂಡ್ಯ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಅಕ್ಕ-ಪಕ್ಕದಲ್ಲಿ ನಿರ್ಮಾಣಗೊಂಡಿರುವ ಮನೆಯ ಮಾಲೀಕರು ವಾಹನಗಳಿಗೆ ಹೆದರಿ ಸುರಕ್ಷತೆ ದೃಷ್ಟಿಯಿಂದ ತಡೆಗೋಡೆಗಳನ್ನು ನಿರ್ಮಿಸಿಕೊಳ್ಳಲು ಆರಂಭಿಸಿದ್ದಾರೆ. ಮನೆಯ ಪಕ್ಕದಲ್ಲೇ ರಸ್ತೆ ಹಾದುಹೋಗಿರುವುದರಿಂದ ವೇಗವಾಗಿ ಬರುವ ವಾಹನಗಳು ನಿಯಂತ್ರಣತಪ್ಪಿ ಮನೆಗೆ ನುಗ್ಗಬಹುದೆಂಬ ಆತಂಕದಿಂದ ಜನರು ಎತ್ತರದ ತಡೆಗೋಡೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಹೆದ್ದಾರಿ ನಿರ್ಮಾಣದ ಬಳಿಕ ಎಕ್ಸ್‌ಪ್ರೆಸ್- ವೇನಲ್ಲಿ ಸಾಗುವ ವಾಹನಗಳಿಗಿಂತ ಸರ್ವೀಸ್ ರಸ್ತೆಯಲ್ಲೇ ವಾಹನಗಳ ದಟ್ಟಣೆ ಹೆಚ್ಚಿದೆ. ಕೆಲವೆಡೆ ಆಗಮನ- ನಿರ್ಗಮನ (ಎಂಟ್ರಿ-ಎಕ್ಸಿಟ್) ಬಂದ್ ಮಾಡಿರುವುದರಿಂದ ಅನೇಕ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸಲಾರಂಭಿಸಿವೆ. ಎಡಬಿಡದೆ ನಿರಂತರವಾಗಿ ಬಸ್ಸು, ಲಾರಿ, ಕಾರು, ಟೆಂಪೋಗಳು ಸೇರಿದಂತೆ ಅನೇಕ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆ ಪಕ್ಕದ ನಿವಾಸಿಗಳು ಭಯದಲ್ಲೇ ಜೀವನ ನಡೆಸುವಂತಾಗಿದೆ. ರಸ್ತೆ ಹೊಂದಿಕೊಂಡಂತೆ ಮನೆಗಳು ಇರುವುದರಿಂದ ಜೀವಭಯ ಸಹಜವಾಗಿಯೇ ನಿವಾಸಿಗಳನ್ನು ಕಾಡುತ್ತಿದೆ. ಮನೆಗಳಿಗೆ ನುಗ್ಗುವ ಭಯ: ತೂಬಿನಕೆರೆ, ರಾಗಿಮುದ್ದನಹಳ್ಳಿ, ಇಂಡುವಾಳು, ಸುಂಡಹಳ್ಳಿ, ಯಲಿಯೂರು ಸೇರಿದಂತೆ ಹಲವಾರು ಗ್ರಾಮಗಳ ಬಳಿ ರಸ್ತೆಗೆ ಹೊಂದಿಕೊಂಡಂತೆ ಹಲವಾರು ಮನೆಗಳಿವೆ. ರಸ್ತೆಯಲ್ಲಿ ಸಾಗುವ ವಾಹನಗಳು ಸ್ವಲ್ಪ ನಿಯಂತ್ರಣ ತಪ್ಪಿದರೂ ನೇರವಾಗಿ ಮನೆಗಳಿಗೇ ನುಗ್ಗುತ್ತವೆ. ರಸ್ತೆ ಇರುವ ಜಾಗದಿಂದ ಮನೆಗಳಿಗೆ ಕೊಂಚವೂ ಫುಟ್‌ಪಾತ್ ಇಲ್ಲ. ಆದ ಕಾರಣ ಮನೆಯ ಮಾಲೀಕರೇ ಕುಟುಂಬ ಸದಸ್ಯರ ಸುರಕ್ಷತೆ ದೃಷ್ಟಿಯಿಂದ ತಡೆಗೋಡೆಗಳನ್ನು ನಿರ್ಮಿಸಿಕೊಳ್ಳಲಾರಂಭಿಸಿದ್ದಾರೆ. ಹೆದ್ದಾರಿ ರಸ್ತೆಗೂ ಜನವಸತಿ ಇರುವ ಜಾಗಕ್ಕೂ ನಿರ್ದಿಷ್ಟ ಅಂತರವಿಲ್ಲ. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಒಮ್ಮೆ ಎಕ್ಸ್‌ಪ್ರೆಸ್- ವೇನಲ್ಲಿ ಅಪಘಾತ ಸಂಭವಿಸಿ ಕೆಳಗೆ ವಾಹನಗಳು ಬಿದ್ದರೂ ಅವೂ ಮನೆಯೊಳಗೆ ಬರಬಹುದೆಂಬ ಭೀತಿ ರಸ್ತೆ ಬದಿಯ ಮನೆಗಳ ಮಾಲೀಕರಲ್ಲಿದೆ. ವಾಹನಗಳಿಗೆ ಹೆದರಿ ಮನೆ ಬಿಟ್ಟು ಹೋಗುವಂತೆಯೂ ಇಲ್ಲ. ಅಲ್ಲೇ ಉಳಿಯಬೇಕೆಂದರೆ ತಡೆಗೋಡೆ ನಿರ್ಮಿಸಿಕೊಂಡು ಸುರಕ್ಷತೆ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ದಪ್ಪಗೋಡೆ ನಿರ್ಮಾಣ: ಹೆದ್ದಾರಿ ಪಕ್ಕದಲ್ಲಿ ಪ್ರಾಧಿಕಾರದವರು ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಜೋಡಿಸಿಟ್ಟಿದ್ದರೂ ಅವುಗಳು ಬಿಗಿಯಿಲ್ಲ. ವೇಗವಾಗಿ ಬರುವ ಭಾರೀ ವಾಹನಗಳು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದರೆ ಅವುಗಳಿಗೆ ತಡೆಯುವ ಶಕ್ತಿ ಇಲ್ಲ. ಹಾಗಾಗಿ ಮನೆಯವರು ಕಬ್ಬಿಣವನ್ನು ಬಳಸಿ ಅರ್ಧ ಅಡಿ ದಪ್ಪ ಹಾಗೂ ಎಂಟು ಅಡಿ ಎತ್ತರದ ಸುಭದ್ರ ಗೋಡೆಯನ್ನು ಮನೆಯ ಅರ್ಧ ಸುತ್ತಳತೆಗೆ ನಿರ್ಮಿಸಿಕೊಂಡಿದ್ದಾರೆ. ಸರ್ವೀಸ್ ರಸ್ತೆ ಸಾಗಿರುವ ಮಾರ್ಗದಲ್ಲಿ ಏರು ಮುಖಕ್ಕೆ ಸಮನಾಂತರವಾಗಿ ಮನೆಗಳಿದ್ದು ಅಲ್ಲಿಯೂ ಜನರು ವಾಸವಾಗಿದ್ದಾರೆ. ವಾಹನಗಳು ಚಲಿಸುವ ರಸ್ತೆಗೂ ಮನೆಗೂ ಕೆಲವೇ ಅಡಿಗಳ ಅಂತರವಿದೆ. ರಸ್ತೆ ಏರು ಮುಖವಾಗಿದ್ದರೆ ಮನೆಗಳು ತಳಮಟ್ಟದಲ್ಲಿವೆ. ಇಂತಹ ಜಾಗಗಳಲ್ಲಿ ಅಪಘಾತಗಳು ಸಂಭವಿಸಿದರೆ ಸಾಕಷ್ಟು ಜೀವಹಾನಿ ಸಂಭವಿಸುವ ಸಾಧ್ಯತೆಗಳಿವೆ. ಇದಕ್ಕೆ ಪ್ರಾಧಿಕಾರದವರು ಸ್ಥಳೀಯ ನಿವಾಸಿಗಳಿಗೆ ಯಾವುದೇ ಸುರಕ್ಷತೆಯನ್ನು ಒದಗಿಸದಿರುವುದು ಸುತ್ತಮುತ್ತಲಿನ ಜನರ ಆಕ್ರೋಶಕ್ಕೂ ಕಾರಣವಾಗಿದೆ. ಮಳೆ ನೀರು ತಡೆಯುವುದಕ್ಕೂ ಸಹಕಾರಿ ಇದರ ಜೊತೆಗೆ ಭಾರೀ ಮಳೆ ಬಿದ್ದಂತಹ ಸಮಯದಲ್ಲಿ ಎತ್ತರದಲ್ಲಿರುವ ರಸ್ತೆಯಲ್ಲಿ ಬಿದ್ದ ನೀರು ಮನೆಯೊಳಗೆ ನುಗ್ಗುವ ಸಾಧ್ಯತೆಗಳಿರುವುದರಿಂದ ಅದರಿಂದಲೂ ಮನೆಯವರು ರಕ್ಷಣೆ ಪಡೆಯಬೇಕಿದೆ. ಮಳೆಯ ನೀರು ಮನೆಗೆ ನುಸುಳದಂತೆ ತಡೆಯುವುದಕ್ಕೆ ತಡೆಗೋಡೆಗಳು ಸಹಕಾರಿಯಾಗಲಿವೆ ಎಂಬ ಕಾರಣದಿಂದಲೂ ಹಲವರು ತಡೆಗೋಡೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಹೆದ್ದಾರಿ ರಸ್ತೆಯನ್ನು ನಿರ್ಮಿಸಿದ್ದರೂ ವೈಜ್ಞಾನಿಕವಾಗಿ ನಿರ್ಮಿಸದೆ ಅವ್ಯವಸ್ಥಿತ ರೀತಿಯಲ್ಲಿ ನಿರ್ಮಾಣ ಮಾಡಿರುವುದರಿಂದ ಹೆದ್ದಾರಿ ರಸ್ತೆ ಹಾದುಹೋಗಿರುವ ಅಕ್ಕ-ಪಕ್ಕದ ನಿವಾಸಿಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮನೆಯ ಬಳಿ ಮಕ್ಕಳು ಆಟವಾಡುವುದಕ್ಕೂ ಹೆದರುವಂತಾಗಿದೆ. ಹೆದ್ದಾರಿ ಏರುಮುಖವಾಗಿರುವುದರಿಂದ ತಗ್ಗು ಪ್ರದೇಶದಲ್ಲಿರುವ ಜನರು ಭಾರೀ ಮಳೆಯಾದ ಸಮಯದಲ್ಲಿ ಮನೆಗಳಿಗೆ ನೀರು ನುಗ್ಗುವ ಆತಂಕವನ್ನು ಎದುರಿಸುತ್ತಿದ್ದಾರೆ. ಹೀಗೆ ಹೆದ್ದಾರಿ ನಿರ್ಮಾಣ ನೂರೆಂಟು ಸಮಸ್ಯೆಗಳನ್ನು ತಂದೊಡ್ಡಿದೆ. ಅವುಗಳಿಗೆ ಪರಿಹಾರ ಹುಡುಕುವ ಕೆಲಸ ಸರ್ಕಾರ, ಜನಪ್ರತಿನಿಧಿಗಳಿಂದ ನಡೆಯುತ್ತಿಲ್ಲ. ಅವರ ಗಮನಸೆಳೆದರೂ ಇದುವರೆಗೆ ಯಾವ ಪ್ರಯೋಜನವೂ ಆಗಿಲ್ಲ. ಹಾಗಾಗಿ ಜನರೇ ಪರಿಹಾರ ಹುಡುಕಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.