ಸಾರಾಂಶ
ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ
ಗದಗ: ಸಂವಿಧಾನದ ಧ್ಯೇಯೋದ್ದೇಶ ಸರಿಯಾಗಿ ಪಾಲನೆಗೊಳ್ಳುವಲ್ಲಿ ಪೊಲೀಸ್ ಇಲಾಖೆ ಪಾತ್ರ ಪ್ರಮುಖವಾಗಿದೆ. ಪೊಲೀಸರ ತ್ಯಾಗ, ಬಲಿದಾನ, ಸಾಹಸ ಸ್ಮರಣೀಯವಾದುದು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ ಹೇಳಿದರು.ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕರ್ತವ್ಯ ಪಾಲನೆಯಲ್ಲಿ ಪ್ರಾಣಾರ್ಪಣೆ ಮಾಡಿದ ಪೊಲೀಸರ ನೆನಪಿಗಾಗಿ ಏರ್ಪಡಿಸಿದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಪ್ರತಿ ಹಂತದ ಅಧಿಕಾರಿ ಸಿಬ್ಬಂದಿಗಳು ಸಹ ಹಗಲಿರುಳೆನ್ನದೇ ನಿರಂತರ ಕರ್ತವ್ಯ ನಿರ್ವಹಿಸುವ ಮೂಲಕ ಶಾಂತಿಯುತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದಂತಹ ಕೊಡುಗೆ ನೀಡಿದ್ದಾರೆ. ಪೊಲೀಸ್ ಇಲಾಖೆ ಜನಸ್ನೇಹಿ ಆಗುವಲ್ಲಿ ದಾಪುಗಾಲಿಟ್ಟಿದೆ. ಕರ್ತವ್ಯ ನಿರ್ವಹಣೆಯಲ್ಲಿ ಪ್ರಾಣಾರ್ಪಣೆ ಮಾಡಿದ ಪೊಲೀಸರ ಸ್ಮರಣೆ ಮಾಡಲು ಪೊಲೀಸ್ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಪ್ರಾಣಾರ್ಪಣೆ ಮಾಡಿದ ಪೊಲೀಸರಿಗೆ ಗೌರವ ಸಲ್ಲಿಸೋಣ ಎಂದರು.ಪೊಲೀಸರಿಲ್ಲದ ಸಮಾಜ ಊಹಿಸಲು ಸಹ ಇಂದು ಅಸಾಧ್ಯ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಜಾರಿಗೊಳಿಸುವಲ್ಲಿ ಹಾಗೂ ವಂಚನೆ, ದರೋಡೆ, ಹಲ್ಲೆ, ಅಪರಾಧ ನಿಯಂತ್ರಣದಲ್ಲಿ ಇಲಾಖೆ ಸದಾ ಮುಂದು ಇದೆ ಎಂದರು.
೨೦೦೧ರಲ್ಲಿ ದೆಹಲಿಯ ಸಂಸತ್ ಭವನದಲ್ಲಿ ನಡೆದ ದಾಳಿಯನ್ನು ಸಮರ್ಥವಾಗಿ ಪೊಲೀಸ್ ಇಲಾಖೆ ತಡೆಯುವಲ್ಲಿ ಯಶಸ್ವಿಯಾಯಿತು. ಅದೇ ರೀತಿ ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಉಗ್ರರ ದಾಳಿ ನಿಯಂತ್ರಿಸುವಲ್ಲಿ ಪೊಲೀಸ್ ಪಾತ್ರ ಅಪಾರವಾಗಿದೆ. ಇತ್ತೀಚೆಗೆ ಜಗತ್ತೇ ದಿಗ್ಭ್ರಾಂತಗೊಳಿಸಿದ ಕೋವಿಡ್ ಸೋಂಕು ನಿಯಂತ್ರಣದಲ್ಲಿಯೂ ಪೊಲೀಸ್ ಇಲಾಖೆ ಸೇವೆ ಮರೆಯಲಾಗದು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಭಾರತ ಚೀನಾ ಗಡಿಯಲ್ಲಿ ಚೀನಾ ಸೇನೆಯಿಂದ ನಡೆದ ದಿನಾಂಕ ೨೧-೧೦-೧೯೫೯ ರಂದು ನಡೆದ ದಾಳಿಯಲ್ಲಿ ಹತ್ತಕ್ಕೂ ಅಧಿಕ ದೇಶದ ಪೊಲೀಸರು ಹುತಾತ್ಮರಾದರು. ಇದರ ನೆನಪಿಗಾಗಿ ಹಾಗೂ ದೇಶದ ಆಂತರಿಕ ಭದ್ರತೆಗಾಗಿ ಪೊಲೀಸ್ ಹುತಾತ್ಮ ದಿನ ಪ್ರತಿ ವರ್ಷ ಆಚರಿಸಲಾಗುತ್ತಿದೆ. ದೇಶದಲ್ಲಿ ೧೮೯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ೨೨೩ರಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿದ್ದು ಇದರಲ್ಲಿ ಗದಗ ಜಿಲ್ಲೆಯ ನಾಲ್ಕು ಪೊಲೀಸರು ಸೇರಿದ್ದಾರೆ ಎಂದರು.
ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ನಿಂಗಪ್ಪ ಹಲವಾಗಲಿ, ಮಹೇಶ ವಸ್ತ್ರದ, ಕೊಟ್ರಪ್ಪ ಬಂಡಗಾರ, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಬಸವರಾಜ ಗುಡ್ಡದ ಅವರು ಕರ್ತವ್ಯಪಾಲನೆಯಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ ಎಂದು ಅವರನ್ನು ಸ್ಮರಿಸಿದರು.ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಹುತಾತ್ಮ ಪೊಲೀಸರಿಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಮರ್ಪಿಸಿದರು. ಡಿಎಸ್‌ಪಿಗಳಾದ ಮಡಿವಾಳಪ್ಪ ಸಂಕದ, ಪ್ರಭುಗೌಡ ತೀರದಳ್ಳಿ, ತಿಮ್ಮರಾಯ ಪಾಟೀಲ, ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.
ಹೋಮ್ ಗಾರ್ಡ ಕಮಾಂಡರ್ ವಿಶ್ವನಾಥ, ಪೊಲೀಸ್ ಇಲಾಖೆಯ ಸಹಾಯಕ ಆಡಳಿತ ಅಧಿಕಾರಿ ಎನ್.ಎ. ಹಿಪ್ಪರಗಿ, ಪೊಲೀಸ್ ಇನ್ಸಪೆಕ್ಟರ್ ಯು.ಎನ್. ಪಾಟೀಲ, ಪಿಎಸ್‌ಐಗಳಾದ ಎನ್.ಕೆ. ಚುಲಕಟ್ಟಿ, ಕೋರಬಾಳ, ಆರ್‌ಎಸ್‌ಐ ಮಾರುತಿ ದಳವಾಯಿ, ಎ.ಎಸ್.ಐ ಎಸ್.ಪಿ. ಕಡುಗಿನ, ಎ.ಆರ್.ಎಸ್.ಐ ಬಿ.ಎಫ್.ಹಳ್ಳಿಗುಡಿ, ಡಿ.ಎಸ್. ಬಾರಕೇರ, ಜೆ.ಬಿ. ಕೋಸಂಬನವರ, ಎಸ್.ವೈ. ಗಾಣಿಗೇರ ಪುಷ್ಪನಮನ ಸಲ್ಲಿಸಿದರು.ನಿವೃತ್ತ ಪೊಲೀಸ್ ಅಧಿಕಾರಿಗಳ ಪರವಾಗಿ ನಿವೃತ್ತ ಆರ್.ಎಸ್.ಐ ಎ.ಬಿ.ಬಸನಗೌಡ ಪತ್ರಿಕಾ ಮಾಧ್ಯಮದ ಪರವಾಗಿ ವಾರ್ತಾಧಿಕಾರಿ ವಸಂತ ಮಡ್ಲೂರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ, ಛಾಯಾಗ್ರಾಹಕ ರಾಮುವಗ್ಗಿ ಅವರಿಗೆ ಗೌರವ ಸಮರ್ಪಿಸಿದರು.
ಸಂಘ ಸಂಸ್ಥೆಗಳ ಸಮುದಾಯಗಳ ಪರವಾಗಿ ಎಸ್.ಎನ್. ಬಳ್ಳಾರಿ, ಚೇಂಬರ್ ಆಫ್ ಕಾಮರ್ಸ ಪರವಾಗಿ ಮುನವಳ್ಳಿ, ಬೀದಿ ಬದಿ ವ್ಯಾಪಾರಸ್ಥರ ಪರವಾಗಿ ಬಾಷಾಸಾಬ ಮಲ್ಲಸಮುದ್ರ, ನಿವೃತ್ತ ಸೈನಿಕರ ಪರವಾಗಿ ಬೆಟ್ಟಪ್ಪ ಕಂಬಾರ, ರೈತ ಸಂಘಟನೆಗಳ ಪರವಾಗಿ ವಿಜಯಕುಮಾರ ಸಂಕದ, ಅಕ್ಬರಸಾಬ ಹಾಗೂ ಜಿಲ್ಲೆಯ ಹುತಾತ್ಮ ಪೊಲೀಸರ ಕುಟುಂಬಸ್ಥರು ಹುತಾತ್ಮ ಪೊಲೀಸರಿಗೆ ಪುಷ್ಪ ಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು.ಪರೇಡ್ ಕಮಾಂಡರ್ ಶಂಕರಗೌಡ ಚೌಧರಿ ಅವರು ಶಿಸ್ತು ಬದ್ಧ ಪೊಲೀಸ ಪರೇಡ್ ನಡೆಸಿಕೊಟ್ಟರು. ಎನ್.ಪಿ.ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಹುತಾತ್ಮ ಪೊಲೀಸರಿಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಮರ್ಪಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))