ಸಾರಾಂಶ
ಪೆಂಡಿಂಗ್ ಇರುವಂತಹ 20294 ಅರ್ಜಿದಾರರ ಮನೆ ಮನೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ತೆರಳಿ ಅರ್ಜಿಯಲ್ಲಿನ ದೋಷ ವಿವರಿಸುತ್ತಾರೆ. ಜತೆಗೆ ಪರಿಹಾರವನ್ನೂ ಸೂಚಿಸುವ ಕೆಲಸ ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿದ್ದಾರೆ.
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಗೃಹಲಕ್ಷ್ಮಿ ಯೋಜನೆಗೆ ಸಲ್ಲಿಸಿದ ಅರ್ಜಿಗಳ ಪೈಕಿ ಕೆಲವರಿಗೆ ಅರ್ಜಿಗಳಲ್ಲಿನ ಸಮಸ್ಯೆಗಳಿಂದಾಗಿ ಹಣ ಬಂದಿಲ್ಲ. ಫಲಾನುಭವಿಗಳಿಗೆ ಆಗಿರುವ ಸಮಸ್ಯೆ ತಿಳಿಸಿ, ಮರು ಅರ್ಜಿ ಸಲ್ಲಿಸುವ ಜವಾಬ್ದಾರಿ ಇದೀಗ ಅಂಗನವಾಡಿ ಕಾರ್ಯಕರ್ತೆಯರು, ಅಧಿಕಾರಿ ವರ್ಗ ಮಾಡುತ್ತಿದೆ.
ಆಗಿರುವುದೇನು?ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಹರಿರುವವರ ಸಂಖ್ಯೆ 4,44,848 ಜನರು. ಅದರಲ್ಲಿ ಈವರೆಗೆ 348984 ಜನ ಅರ್ಜಿ ನೋಂದಾಯಿಸಿದ್ದಾರೆ. ಇದರಲ್ಲಿ 3,28,690 ಜನರಿಗೆ ಸೆಪ್ಟೆಂಬರ್ ತಿಂಗಳಿನ ದುಡ್ಡು ಬರಲಿದೆ. ಈ ಪೈಕಿ 223668 ಜನರಿಗೆ ಮೊದಲ ಕಂತು ಇನ್ನೊಂದು ವಾರದಲ್ಲಿ ಬರಲಿದೆ. ಇನ್ನುಳಿದ 105022 ಜನರಿಗೆ ಎರಡನೆಯ ಕಂತಿನಲ್ಲಿ ಹಣ ಬರಲಿದೆ.
ಆದರೆ 20294 ಜನರ ಅರ್ಜಿಗಳ ಕೆಲವೊಂದಿಷ್ಟು ಅಪೂರ್ಣ ಮಾಹಿತಿ, ಇಕೆವೈಸಿ, ಆಧಾರ್ ಕಾರ್ಡ್ ಲಿಂಕ್, ಹೆಸರು ಬದಲಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ಹಣ ಬರುತ್ತಿಲ್ಲ. ಇಂಥವರ ಅರ್ಜಿ ಪೆಂಡಿಂಗ್ ಎಂದು ತೋರಿಸುತ್ತಿರುತ್ತದೆ.ಅಂಗನವಾಡಿಗೆ ಜವಾಬ್ದಾರಿ:
ಹೀಗೆ ಪೆಂಡಿಂಗ್ ಇರುವಂತಹ 20294 ಅರ್ಜಿದಾರರ ಮನೆ ಮನೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ತೆರಳಿ ನಿಮ್ಮ ಅರ್ಜಿ ಯಾವ ಕಾರಣಕ್ಕಾಗಿ ಪೆಂಡಿಂಗ್ ಇದೆ ಎಂದು ಅವರಿಗೆ ಸಮಸ್ಯೆ ತಿಳಿಸುತ್ತಾರೆ. ಹಣ ಬಾರದಿರುವುದಕ್ಕೆ ಕಾರಣ ತಿಳಿಸುತ್ತಾರೆ. ಅವರ ಅರ್ಜಿಯಲ್ಲಿನ ದೋಷ ವಿವರಿಸುತ್ತಾರೆ. ಜತೆಗೆ ಪರಿಹಾರವನ್ನೂ ಸೂಚಿಸುವ ಕೆಲಸ ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಉದಾಹರಣೆಗೆ ಇ- ಕೆವೈಸಿ ನವೀಕರಿಸದಿದ್ದರೆ ನವೀಕರಿಸುವಂತೆ ಸಲಹೆ ಮಾಡುತ್ತಾರೆ. ಅದನ್ನು ಯಾವ ರೀತಿ ನವೀಕರಿಸಬೇಕು. ಎಲ್ಲಿಗೆ ಹೋಗಬೇಕು ಎಂದೆಲ್ಲ ತಿಳಿಹೇಳಿ ಅರ್ಜಿಯನ್ನು ಮರಳಿ ನೋಂದಾವಣಿ ಮಾಡಿಸುತ್ತಿದ್ದಾರೆ.ಪೋನ್ ಕಾಲ್:
ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ದೋಷಗಳ ಮಾಹಿತಿ ನೀಡಿದರೆ, ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವರ್ಗ ಮೊಬೈಲ್ ಮೂಲಕವೂ ಅರ್ಜಿದಾರರಿಗೆ ಕರೆ ಮಾಡಿ ಆಗಿರುವ ದೋಷ ಸರಿಪಡಿಸುವಂತೆ, ಅದನ್ನು ಯಾವ ರೀತಿ ಮಾಡಬೇಕು ಎಂಬುದರ ಮಾಹಿತಿಯನ್ನೂ ನೀಡಲಾಗುತ್ತಿದ್ದಾರೆ. ಈ ರೀತಿ ಅತ್ತ ಅಂಗನವಾಡಿ ಕಾರ್ಯಕರ್ತೆಯರು, ಇತ್ತ ಇಲಾಖೆ ಸಿಬ್ಬಂದಿ ವರ್ಗ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ.ಆಗಸ್ಟ್‌ನಲ್ಲಿ ಎಷ್ಟು ಬಂದಿತ್ತು:
ಯೋಜನೆ ಪ್ರಾರಂಭವಾದ ಮೊದಲ ತಿಂಗಳು ಜಿಲ್ಲೆಯಲ್ಲಿ 3,30,456 ಅರ್ಜಿ ನೋಂದಾವಣಿ ಮಾಡಿಸಿಕೊಂಡಿದ್ದರು. ಅದರಲ್ಲಿ 2.92 ಲಕ್ಷ ಜನರಿಗೆ ಯೋಜನೆಯ ದುಡ್ಡು ಬಂದಿದೆ. ಒಂದೇ ಕಂತಿನಲ್ಲಿ ಬಂದಿರಲಿಲ್ಲ. ಹಂತ ಹಂತವಾಗಿ ದೋಷ ಸರಿಪಡಿಸಿದ ಮೇಲೆಯೇ 2.92 ಲಕ್ಷ ಜನರಿಗೆ ಹಣ ಬಂದಿತ್ತು. ಸೆಪ್ಟೆಂಬರ್‌ನಲ್ಲಿ ಅದೇ ರೀತಿ ಆಗಲಿದೆ. ಹಂತ ಹಂತವಾಗಿ ಬರಲಿದೆ. ಆದರೆ ಎಲ್ಲರಿಗೂ ದುಡ್ಡು ಬರುವುದು ಖಚಿತ ಎಂದು ಇಲಾಖೆ ತಿಳಿಸುತ್ತದೆ.ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಾರಂಭದಲ್ಲಿ ಕೆಲವೊಂದಿಷ್ಟು ಗೊಂದಲ ಎದುರಾಗಿತ್ತು. ಆದರೆ, ಅದರಲ್ಲಿನ ದೋಷ ಸರಿಪಡಿಸಿ ಎಲ್ಲರಿಗೂ ದುಡ್ಡು ಸಿಗುವಂತೆ ಮಾಡುತ್ತಿರುವುದಕ್ಕೆ ಫಲಾನುಭವಿಗಳಲ್ಲಿ ಸಂತಸವನ್ನುಂಟು ಮಾಡಿದೆ.
ಸೆಪ್ಟೆಂಬರ್ ತಿಂಗಳಿನ ₹2 ಸಾವಿರ ದುಡ್ಡು ಇನ್ನೊಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಕೆಲವರ ಅರ್ಜಿ ಪೆಂಡಿಂಗ್ ಎಂಬುದು ಇದೆ. ಅಂತಹ ಪೆಂಡಿಂಗ್‌ಗೆ ಕಾರಣವೇನು? ಅವರೇನು ಮಾಡಬೇಕು? ದೋಷ ಸರಿಪಡಿಸುವುದು ಹೇಗೆ ಎಂಬುದನ್ನು ತಿಳಿಸಲು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳುತ್ತಿದ್ದಾರೆ. ಜತೆಗೆ ಇಲಾಖೆ ಸಿಬ್ಬಂದಿ ಕೂಡ ಮೊಬೈಲ್ ಮೂಲಕ ತಿಳಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. ಉಪನಿರ್ದೇಶಕಿ ಪದ್ಮಾವತಿ ತಿಳಿಸಿದ್ದಾರೆ.