ಮೋದಿ ಸರ್ಕಾರ ಅಧಿಕಾರಕ್ಕೆ ಬರಲ್ಲ: ಲಾಡ್‌

| Published : Oct 22 2023, 01:00 AM IST

ಸಾರಾಂಶ

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಇಡೀ ದೇಶದ ಲೆಕ್ಕಾಚಾರವೇ ಬದಲಾಗುತ್ತಿದೆ. ಹೀಗಾಗಿ ಬಿಜೆಪಿ ಲೆಕ್ಕಾಚಾರ ಕೂಡ ಉಲ್ಟಾ ಆಗುತ್ತದೆ. ಹಿಂದಿ ಮಾತನಾಡುವ ರಾಜ್ಯಗಳಲ್ಲಿ ನಮ್ಮ ಪಕ್ಷದ ಮೈತ್ರಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಸಚಿವ ಸಂತೋಷ ಲಾಡ್ ನುಡಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

2024ಕ್ಕೆ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲ್ಲ. ಅವರ ಲೆಕ್ಕಾಚಾರ ಈ ಸಲ ನಡೆಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರವೇ ಬರುತ್ತದೆ ಎಂಬ ಲೆಕ್ಕಾಚಾರ ಬಿಜೆಪಿಗಿದೆ. ಆದರೆ ಈ ಸಲ ಅದು ಬುಡಮೇಲಾಗುತ್ತಿದೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಇಡೀ ದೇಶದ ಲೆಕ್ಕಾಚಾರವೇ ಬದಲಾಗುತ್ತಿದೆ. ಹೀಗಾಗಿ ಬಿಜೆಪಿ ಲೆಕ್ಕಾಚಾರ ಕೂಡ ಉಲ್ಟಾ ಆಗುತ್ತದೆ. ಹಿಂದಿ ಮಾತನಾಡುವ ರಾಜ್ಯಗಳಲ್ಲಿ ನಮ್ಮ ಪಕ್ಷದ ಮೈತ್ರಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ನುಡಿದರು.

ನಮ್ಮ ಲೆಕ್ಕಾಚಾರದ ಪ್ರಕಾರ ಮತ್ತೆ 2024ರಲ್ಲಿ ಮೋದಿ ಸರ್ಕಾರ ಬರಲ್ಲ ಎಂಬುದು. ನೋಡೋಣ ಯಾರ ಲೆಕ್ಕಾಚಾರ ನಿಜವಾಗುತ್ತದೆ ಎಂಬುದನ್ನು ಎಂದರು.

ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬಿಜೆಪಿಯ ಕೆಲವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಬಿಜೆಪಿ ಬಿಟ್ಟು ಯಾಕೆ ಬರುತ್ತಿದ್ದಾರೆ ಎಂಬುದನ್ನು ಅವರನ್ನೇ ಕೇಳಿ ಎಂದ ಅವರು, ಲೋಕಸಭೆ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬಿಜೆಪಿಯ ಕರ್ಮಕಾಂಡವನ್ನು ಜನರಿಗೆ ಮುಟ್ಟಿಸುತ್ತೇವೆ ಎಂದರು.

ಹೈಕಮಾಂಡ್ ಲೋಕಸಭೆ ಚುನಾವಣೆಗಾಗಿ ಸಮೀಕ್ಷೆ ಮಾಡುತ್ತಿದ್ದಾರೆ. ನಮಗೆ ಸ್ವಾತಂತ್ರ್ಯ ಬಂದು 70 ಆಯ್ತು. ಕಾಂಗ್ರೆಸ್‌ ಪಕ್ಷದ ಹಣ 700 ಕೋಟಿ. ಬಿಜೆಪಿ ಸರ್ಕಾರದ ಹಣ 8500 ಕೋಟಿ ದಾಟಿದೆ. ಯಾವ ಪಕ್ಷ ಸಾಹುಕಾರ ಎಂಬುದು ಜನರಿಗೆ ಗೊತ್ತಿದೆ ಎಂದರು.

ನಾನು ಐಟಿ ರಿಪೋರ್ಟ್‌ ಓದಿದೀನಿ. ಎಲ್ಲೂ ಕಾಂಗ್ರೆಸ್‌ ನಾಯಕರು ಅಂತ ಉಲ್ಲೇಖ ಮಾಡಿಲ್ಲ. ಇಷ್ಟು ವರ್ಷದಿಂದ ಅವರೇ ತನಿಖೆಯನ್ನು ಜೇಬಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಇಷ್ಟು ವರ್ಷದಲ್ಲಿ ಯಾರಿಗಾದರೂ ಸಜಾ ಆಗಿದೆಯಾ? ಎಂದು ಪ್ರಶ್ನಿಸಿದರು.

ನಮ್ಮ ಪಕ್ಷದಲ್ಲಿ ಯಾವುದು ಅಸಮಾಧಾನವಿಲ್ಲ. ಬಣಗಳೂ ಇಲ್ಲ. ಇಲ್ಲಿ ಇರುವುದು ಕಾಂಗ್ರೆಸ್‌ ಬಣವೊಂದೇ ಎಂದ ಅವರು, ಜಾರಕಿಹೊಳಿ, ಡಿ.ಕೆ. ಶಿವಕುಮಾರ ಮಧ್ಯೆ ಭಿನ್ನಮತ ಇದೆ ಅಂತೇನೂ ನನಗೆ ಅನಸ್ತಾ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.