ಧಾರವಾಡ:
ತಾಲೂಕಿನ ಹೊಲ್ತಿಕೋಟಿ ಹಾಗೂ ಮಾವಿನಕೊಪ್ಪ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿದ ಕಾರ್ಮಿಕ ಸಚಿವ ಸಂತೋಷ ಲಾಡ್, ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಿದರು.ಹೊಲ್ತಿಕೋಟಿ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂಬ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಚಿವರು, ಒಂದು ತಿಂಗಳೊಳಗೆ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರಿ ಪ್ರೌಢಶಾಲೆಗೆ ಭದ್ರತಾ ಸಿಬ್ಬಂದಿ ನೇಮಿಸುವುದಾಗಿ ತಿಳಿಸಿದರು. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿಗೆ ವೇತನ ಪಾವತಿಯಾಗದಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅರಣ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ತಕ್ಷಣ ವೇತನ ಬಿಡುಗಡೆಗೆ ಸೂಚಿಸಿದರು.
ಗ್ರಾಮದ ಶಿಥಿಲಾವಸ್ಥೆಯಲ್ಲಿರುವ ಮಸೀದಿ ಪುನರ್ನಿರ್ಮಾಣ, ಸ್ಮಶಾನಕ್ಕೆ ಇ-ಸ್ವತ್ತು, ಬೀದಿದೀಪ, ಪ್ರಮುಖ ಬೀದಿಗೆ ಸಿಸಿ ರಸ್ತೆ, ಹೊಲ್ತಿಕೋಟಿ- ನಾಗನೂರ ಸಂಪರ್ಕ ರಸ್ತೆ ದುರಸ್ತಿ, ಆರೋಗ್ಯ ಸೇವೆ ವಿಸ್ತರಣೆ, ಕಾಡುಪ್ರಾಣಿಗಳ ಹಾವಳಿ ನಿಯಂತ್ರಣ ಹಾಗೂ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಗ್ರಾಮಸ್ಥರು ಮುಂದಿಟ್ಟರು. ವಿದ್ಯಾರ್ಥಿನಿಯೊಬ್ಬರಿಗೆ ಹಾಸ್ಟೆಲ್ ವ್ಯವಸ್ಥೆ ಹಾಗೂ ಮತ್ತೊಬ್ಬರಿಗೆ ಲ್ಯಾಪ್ಟಾಪ್ ಒದಗಿಸುವಂತೆ ಮಾಡಿದ ಮನವಿಗೂ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಅಕ್ರಮ ಸಾರಾಯಿ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಈ ವೇಳೆ ಮಾತನಾಡಿದ ಸಚಿವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಸುಮಾರು ₹995 ಕೋಟಿ ವೆಚ್ಚ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 4.04 ಲಕ್ಷ ಮಹಿಳೆಯರಿಗೆ ₹2,345 ಕೋಟಿ ಪಾವತಿಸಲಾಗಿದೆ. ರೈತರಿಗೆ ಉಚಿತ ವಿದ್ಯುತ್ ಸೇರಿದಂತೆ ವಿವಿಧ ಯೋಜನೆಗಳಿಗೆ ಸರ್ಕಾರ ವಾರ್ಷಿಕ ಸುಮಾರು ₹85 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ರಸ್ತೆ, ಚರಂಡಿ, ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಸದಾ ಜನರೊಂದಿಗಿರುವುದಾಗಿ ಹೇಳಿದರು.
ನಂತರ ಹೊಲ್ತಿಕೋಟಿಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಮಕ್ಕಳು ಸಚಿವರಿಗೆ ಆರತಿ ಬೆಳಗಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ದೊಡ್ಡಪ್ಪ ಹೂಗಾರ, ತಾಪಂ ಇಒ ಗಂಗಾಧರ ಕಂದಕೂರ, ರೈತ ಮುಖಂಡ ಮಲ್ಲನಗೌಡ ಪಾಟೀಲ, ಗ್ರಾಮದ ಮುಖಂಡರಾದ ಮಹಾದೇವಪ್ಪ ಬೆಳಿಗಟ್ಟಿ, ಶಂಕ್ರಪ್ಪ ಕೋರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರಿದ್ದರು.