ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ರಾಜ್ಯ ಹಾಗೂ ಪರ ರಾಜ್ಯಗಳಲ್ಲಿಯೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ದೇವರಗುಡ್ಡದ ಮಾಲತೇಶ ದೇವಸ್ಥಾನಕ್ಕೆ ರೋಪ್ ವೇ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ. ಪ್ರವಾಸೋದ್ಯಮ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಕೈಗೆತ್ತಿಕೊಂಡಿರುವ 13 ಪ್ರಮುಖ ರೋಪ್ ವೇ ಯೋಜನೆಗಳಲ್ಲಿ ದೇವರಗುಡ್ಡದ ಯೋಜನೆಯೂ ಒಂದಾಗಿದೆ.

ಏನಿದು ಯೋಜನೆ?: ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರೋಪ್‌ವೇ ನಿರ್ಮಿಸಲಾಗುವುದು. ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್‌ ಎಕನಾಮಿಕ್ ಸರ್ವೀಸ್ ಸಂಸ್ಥೆಯು ಸರ್ಕಾರಕ್ಕೆ ಪ್ರಾಥಮಿಕ ಕಾರ್ಯಸಾಧ್ಯತಾ ವರದಿ ಸಲ್ಲಿಸಿದ್ದು, ಸರಾಸರಿ ₹80ರಿಂದ ₹100 ಕೋಟಿ ವೆಚ್ಚದಲ್ಲಿ ರೋಪ್‌ವೇ ನಿರ್ಮಿಸಲಾಗುವುದು.

ಯೋಜನೆಯ ಪ್ರಮುಖ ಅಂಶಗಳು: ಇತ್ತೀಚಿಗೆ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ದೇವರಗುಡ್ಡ ಸೇರಿದಂತೆ ರಾಜ್ಯದ 13 ರೋಪ್ ವೇ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಅರಣ್ಯ ಇಲಾಖೆ, ಪರಿಸರ ಇಲಾಖೆ ಮತ್ತು ಇತರ ಶಾಸನಬದ್ಧ ಸಂಸ್ಥೆಗಳಿಂದ ಕಡ್ಡಾಯ ಅನುಮತಿಗಳನ್ನು ಪಡೆದ ತಕ್ಷಣವೇ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ.


ಯೋಜನೆಯ ಉದ್ದೇಶ ಮತ್ತು ಪ್ರಯೋಜನಗಳು: ದೇವರಗುಡ್ಡದ ಮಾಲತೇಶ ಸ್ವಾಮಿ ಬೆಟ್ಟವನ್ನು ಹತ್ತಲು ಕಷ್ಟಪಡುವ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳಿಗೆ ಈ ರೋಪ್ ವೇ ಸುಲಭ ಕನೆಕ್ಟಿವಿಟಿ ಕಲ್ಪಿಸಲಿದೆ. ದಸರಾ ಸಮಯದಲ್ಲಿ ನಡೆಯುವ ಪ್ರಸಿದ್ಧ ದೇವರಗುಡ್ಡದ ಕಾರ್ಣಿಕೋತ್ಸವಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ರೋಪ್ ವೇ ನಿರ್ಮಾಣದಿಂದಾಗಿ ವರ್ಷಪೂರ್ತಿ ಪ್ರವಾಸಿಗರ ಹಾಗೂ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಸ್ಥಳೀಯರಿಗೆ ಉದ್ಯೋಗಾವಕಾಶ: ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯ ಜತೆಗೆ ಈ ಯೋಜನೆಯು ರಾಣಿಬೆನ್ನೂರು ಸುತ್ತಮುತ್ತಲಿನ ಸ್ಥಳೀಯ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಕೊಡುಗೆ ನೀಡಲಿದೆ.

ಶಾಸಕರ ಇಚ್ಛಾಶಕ್ತಿ ಕಾರಣ: ದೇವರಗುಡ್ಡಕ್ಕೆ (ಬ್ಯಾಡಗಿ ವಿಧಾನ ಸಭಾ ಕ್ಷೇತ್ರವ್ಯಾಪ್ತಿ) ರೋಪ್‌ವೇ ನಿರ್ಮಿಸಲು ಶಾಸಕ ಬಸವರಾಜ ಶಿವಣ್ಣನವರ ಇಚ್ಛಾಶಕ್ತಿ ಪ್ರಮುಖ ಕಾರಣವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೇ ರೋಪ್‌ವೇ ನಿರ್ಮಿಸಲು ಅವರು ಸಾಕಷ್ಟು ಮುತುವರ್ಜಿ ವಹಿಸಿದ್ದರು. ಇದೀಗ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾದ ಮೇಲೆ ಯೋಜನೆಗೆ ಕೊನೆಗೂ ಚಾಲನೆ ದೊರೆತಂತಾಗಿದೆ.

ದೇವರಗುಡ್ಡ ಕ್ಷೇತ್ರ ಮಾಹಿತಿ: ರಾಣಿಬೆನ್ನೂರು ತಾಲೂಕಿನ ಶ್ರೀ ಕ್ಷೇತ್ರ ದೇವರಗುಡ್ಡ (ಗುಡ್ಡಗುಡ್ಡಾಪುರ) ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ ಹಾಗೂ ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ. ಈ ಬೆಟ್ಟದ ಮೇಲೆ ನೆಲೆಸಿರುವ ಪರಶಿವನ ಅವತಾರವಾದ ಶ್ರೀ ಮಾಲತೇಶ ಸ್ವಾಮಿ (ಮೈಲಾರಲಿಂಗೇಶ್ವರ) ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಜಾಗ್ರತ ದೈವವಾಗಿದ್ದಾರೆ.

ಪೌರಾಣಿಕ ಹಿನ್ನೆಲೆ: ಮಲ್ಲಾಸುರ-ಮಣಿಕಾಸುರ ವಧೆ: ಬಹಳ ಹಿಂದೆ ಮಲ್ಲಾಸುರ ಮತ್ತು ಮಣಿಕಾಸುರ ಎಂಬ ರಕ್ಕಸರು ಬ್ರಹ್ಮನಿಂದ ವರ ಪಡೆದು ಋಷಿಮುನಿಗಳಿಗೆ ಹಾಗೂ ಜನರಿಗೆ ತೀವ್ರ ತೊಂದರೆ ಕೊಡುತ್ತಿದ್ದರು. ಇವರ ಉಪಟಳವನ್ನು ತಡೆಯಲು ಶಿವನು ಪಾರ್ವತಿ ದೇವಿಯೊಂದಿಗೆ ಕುದುರೆಯೇರಿ, ಕಂಬಳಿ ಹೊದ್ದು ಮೈಲಾರಲಿಂಗ (ಮಾಲತೇಶ) ರೂಪದಲ್ಲಿ ಧರೆಗೆ ಇಳಿದು ಬಂದನು. ಶಿವನು ತನ್ನ ಏಳು ಕೋಟಿ ಗಣಗಳೊಂದಿಗೆ (ಗೊರವರ ಸೈನ್ಯ) ಧಾವಿಸಿ ಬಂದು ಈ ರಕ್ಕಸರನ್ನು ಸಂಹರಿಸಿದನು. ರಕ್ಕಸರನ್ನು ವಧಿಸಿದ ನಂತರ ಸ್ವಾಮಿ ಮಾಲತೇಶನಾಗಿ ಮತ್ತು ಪಾರ್ವತಿ ದೇವಿ ಮಾಳವ್ವ (ಮಾಲಸಾಂಬ) ದೇವಿಯಾಗಿ ಇಲ್ಲೇ ನೆಲೆಸಿದರು ಎಂಬುದು ಕ್ಷೇತ್ರದ ಮಹಿಮೆಯಾಗಿದೆ. ಶ್ರೀ ಕ್ಷೇತ್ರ ದೇವರಗುಡ್ಡದ ಮಾಲತೇಶ ಸ್ವಾಮಿಯು ಮಹಾರಾಷ್ಟ್ರದಲ್ಲಿ ಖಂಡೋಬಾ, ಆಂಧ್ರಪ್ರದೇಶದಲ್ಲಿ ಮಲ್ಲಣ್ಣ ಎಂದೂ ಪೂಜಿಸಲ್ಪಡುತ್ತಾರೆ. ಭಕ್ತರು ತಮ್ಮ ಕಷ್ಟ ನಿವಾರಣೆಗಾಗಿ ಇಲ್ಲಿಗೆ ಬಂದು ಭಂಡಾರ ಹಚ್ಚಿ ಹರಕೆ ತೀರಿಸುತ್ತಾರೆ.