ಗದಗ: ವಿದ್ಯಾರ್ಥಿಗಳು ಅಂಕಗಳ ಜತೆಗೆ ಕೌಶಲ್ಯವನ್ನೂ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಡಾ. ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.
ನಗರದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಭಾನುವಾರ ಏರ್ಪಡಿಸಿದ್ದ ಬಿ.ಜಿ. ಅಣ್ಣಿಗೇರಿ ಗುರುಗಳ 96ನೇ ಜಯಂತ್ಯುತ್ಸವ ಹಾಗೂ 12ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಅಣ್ಣಿಗೇರಿ ಗುರುಗಳು ತಮ್ಮ ಸಂಪೂರ್ಣ ಬದುಕನ್ನು ಬಡ ಮಕ್ಕಳ ಶಿಕ್ಷಣ ಮತ್ತು ಸಮಾಜಸೇವೆಗೆ ಸಮರ್ಪಿಸಿದ ಅಪರೂಪದ ತ್ಯಾಗಜೀವಿ, ತಮ್ಮ ವೇತನ ಹಾಗೂ ನಿವೃತ್ತಿಯ ನಂತರದ ಪಿಂಚಣಿಯನ್ನೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿನಿಯೋಗಿಸಿದ ಅಣ್ಣಿಗೇರಿ ಗುರುಗಳ ಆದರ್ಶ ಇಂದಿಗೂ ಆಶ್ರಮದ ಸೇವಾಕಾರ್ಯಗಳಲ್ಲಿ ಜೀವಂತವಾಗಿದೆ. ಆಶ್ರಮವು ಉಚಿತ ಶಿಕ್ಷಣ, ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಾಸದ ಮೂಲಕ ನೂರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗುತ್ತಿದ್ದು, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳಿಂದಲ್ಲ, ತಮ್ಮ ಕೌಶಲ್ಯದಿಂದ ಗುರುತಿಸಿಕೊಳ್ಳಬೇಕು. ಹೈಸ್ಕೂಲ್ ವಿದ್ಯಾರ್ಥಿಗಳ ಭವಿಷ್ಯದ ಭದ್ರ ಅಡಿಪಾಯವಾಗಿದ್ದು, ಈ ಹಂತದಲ್ಲಿ ಶಿಸ್ತು, ಪರಿಶ್ರಮ ಮತ್ತು ಸ್ಪಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು.ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಕಳೆದ 12 ವರ್ಷಗಳಿಂದ ಈ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಕಳೆದ 4 ವರ್ಷಗಳಿಂದ ಗ್ರಾಮೀಣ ಪ್ರದೇಶದ ಆಯಾ ಶಾಲೆಗಳಲ್ಲಿಯೇ ನಗದು ಬಹುಮಾನ, ಪ್ರಮಾಣ ಪತ್ರ, ಕಾಲೇಜ್ ಬ್ಯಾಗ್‌ದೊಂದಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ. ಆಶ್ರಮದಲ್ಲಿ ಟ್ಯೂಶನ್ ಪಡೆದ ಪ್ರತಿಭಾನ್ವಿತ 70 ವಿದ್ಯಾರ್ಥಿಗಳಿಗೂ ಸಹ ಈ ಪುರಸ್ಕಾರ ನೀಡಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಗೋಪಾಲ ಅಗರವಾಲ್, ಲಕ್ಷ್ಮಣ ಜೋಗದಂಡಕರ, ಸಂತೋಷ ಪುಣೇಕರ, ನೇಹಾ ಖಟವಟೆ ಆಗಮಿಸಿದ್ದರು. ಆಂಜನೇಯ ಕಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ತುಮ್ಮರಮಟ್ಟಿ ನಿರೂಪಿಸಿದರು. ಶಿವಪ್ಪ ಕತ್ತಿ ವಂದಿಸಿದರು. ಸಮಾರಂಭದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು, ಪಾಲಕ ಪೋಷಕರು, ಗಣ್ಯರು, ವಿದ್ಯಾರ್ಥಿಗಳಿದ್ದರು.