ಶಿವಾನಂದ ಗೊಂಬಿ
ಹುಬ್ಬಳ್ಳಿ: ಈ ಸಲವಾದರೂ ವಿಧಾನಪರಿಷತ್ ನಾಮನಿರ್ದೇಶನಕ್ಕೆ ಕಿತ್ತೂರು ಕರ್ನಾಟಕಕ್ಕೆ ಆದ್ಯತೆ ನೀಡುತ್ತದೆಯೇ ಸರ್ಕಾರ? ಈ ಭಾಗದ ಎರಡನೆಯ ಹಂತದ ನಾಯಕರಿಗೆ ಪರಿಷತ್‌ಗೆ ಅವಕಾಶ ಲಭಿಸಲಿದೆಯೇ?ಜು. 21ರಂದು ಅವಧಿ ಪೂರ್ಣಗೊಳಿಸಿದ ಪರಿಷತ್ ಐವರು ಸದಸ್ಯರ ಸ್ಥಾನಗಳಿಗೆ ಸರ್ಕಾರ ನಾಮನಿರ್ದೇಶನ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕಿತ್ತೂರುು ಕರ್ನಾಟಕ ಭಾಗದ ಎರಡನೆಯ ಸ್ತರದ ನಾಯಕರಲ್ಲಿ ಉಂಟಾಗಿರುವ ಪ್ರಶ್ನೆ ಇದು.
ಎಚ್. ವಿಶ್ವನಾಥ, ಭಾರತಿ ಶೆಟ್ಟಿ, ಶಾಂತರಾಮ ಬುಡ್ನ ಸಿದ್ದಿ, ಡಾ. ತಳವಾರ ಸಾಬಣ್ಣ, ರಮೇಶಬಾಬು ಹೀಗೆ ಐವರು ಸದಸ್ಯರ ಅವಧಿ ಜು. 21ಕ್ಕೆ ಪೂರ್ಣಗೊಂಡಿದೆ. ಇದಕ್ಕೆ ಸರ್ಕಾರ ನಾಮನಿರ್ದೇಶನ ಮಾಡಬೇಕಿದೆ. ಹಾಗೆ ನೋಡಿದರೆ ಈಗಾಗಲೇ ನಾಮನಿರ್ದೇಶನ ಮಾಡಬೇಕಿತ್ತು. ಅತ್ತ ಸಚಿವ ಸಂಪುಟ ವಿಸ್ತರಣೆಯ ಗೊಂದಲ, ಇನ್ನು ಜಿರಳೆ ಪಾರ್ಟಿ ಪ್ರತಿಭಟನೆಯಿಂದ ವಿಳಂಬವಾಗಿದೆ. ಇದೀಗ ಜಿರಳೆ ಪ್ರತಿಭಟನೆ ಶಾಂತವಾಗಿದೆ. ಹೀಗಾಗಿ ನಾಮನಿರ್ದೇಶನ ಶೀಘ್ರದಲ್ಲೇ ಆಗಲಿದೆ.ಐದು ಸ್ಥಾನಗಳಲ್ಲಿ ತಮಗೆ ಏನಾದರೂ ಅವಕಾಶ ಸಿಗುತ್ತದೆಯೇ ಎಂಬ ಆಸೆಗಣ್ಣಿನಿಂದ ನೋಡುತ್ತಿದ್ದಾರೆ ಮುಖಂಡರು. ಜತೆಗೆ ತಮ್ಮ ತಮ್ಮ ಮಟ್ಟಿಗೆ ಲಾಬಿಯನ್ನೂ ನಡೆಸಿರುವುದುಂಟು.
ಈ ಹಿಂದೆ ಕಳೆದ ವರ್ಷ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡಿತ್ತು. ಇನ್ನು ಕಳೆದ ತಿಂಗಳು ನಡೆದ ವಿಧಾನಸಭೆಯಿಂದ ಪರಿಷತ್‌ನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲೂ 5 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು. ಈ ಎರಡು ಚುನಾವಣೆಗಳಲ್ಲೂ ಕಿತ್ತೂರು ಕರ್ನಾಟಕ ಭಾಗಕ್ಕೆ ಅವಕಾಶ ಸಿಕ್ಕಿಲ್ಲ. ಇತ್ತೀಚಿಗೆ ಎಫ್.ಎಚ್. ಜಕ್ಕಪ್ಪನವರ ಮಾತ್ರ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಇವರನ್ನು ಹೊರತುಪಡಿಸಿ ಪರಿಷತ್‌ನ ನಾಮನಿರ್ದೇಶನವಿರಲಿ, ಚುನಾವಣೆ ಮೂಲಕ ಆಯ್ಕೆ ಮಾಡುವುದಿರಲಿ, ಈ ಭಾಗದ ಮುಖಂಡರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಲೇ ಇರಲಿಲ್ಲ.
ಪ್ರಯತ್ನ ಯಾರ್‍ಯಾರದು?
ಕಿತ್ತೂರು ಕರ್ನಾಟಕ ಭಾಗದ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಿಗೆ ಈ ಸಲ ನಾಮನಿರ್ದೇಶನದಲ್ಲಿ ಆದ್ಯತೆ ನೀಡಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ. ಅದರಲ್ಲಿ ಧಾರವಾಡ ಜಿಲ್ಲೆಯಿಂದ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ, ಹಾವೇರಿ ಜಿಲ್ಲೆಯ ಪ್ರಕಾಶಗೌಡ ಪಾಟೀಲ, ಸಂಜೀವ ನೀರಲಗಿ, ಅತ್ತ ಗದಗ ಜಿಲ್ಲೆಯಿಂದ ರಾಮಣ್ಣ ಲಮಾಣಿ, ಉತ್ತರ ಕನ್ನಡ ಜಿಲ್ಲೆಯ ಸಾಯಿ ಗಾಂವಕರ್ ಮತ್ತಿತರರು ಪರಿಷತ್ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ.ಘೋಷಣೆಗಷ್ಟೇ ಸೀಮಿತವೇ?
ಈ ಭಾಗದ ಎರಡನೆಯ ಸ್ತರದ ಮುಖಂಡರೆಂದರೆ ಯಾರಾದರೂ ಮುಖಂಡರು ಬಂದರೆ ಅದ್ಧೂರಿಯಾಗಿ ಸ್ವಾಗತಿಸಿ ಜಯಘೋಷ ಹಾಕಲಷ್ಟೇ ಸೀಮಿತವೆಂಬಂತಾಗಿದೆ. ಅಧಿಕಾರ ಎನ್ನುವುದು ಕನಸಿನ ಮಾತೇ ಆಗಿದೆ ಎಂಬ ಅಸಮಾಧಾನದ ಮಾತುಗಳು ನಿರಂತರವಾಗಿ ಕೇಳಿ ಬರುತ್ತಿವೆ. ಎಂಎಲ್‌ಎ ಟಿಕೆಟ್ ವಂಚಿತರು, ನಿರಂತರವಾಗಿ ಕೆಲಸ ನಿರ್ವಹಿಸುತ್ತ ಬಂದು ಯಾವುದೇ ಸ್ಥಾನಮಾನ ಸಿಗದವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಬೇಕು. ಈ ಮೂಲಕ ಸಮಾಧಾನ ಪಡಿಸಬೇಕು ಎಂಬುದು ಕಾರ್ಯಕರ್ತರ ಅಂಬೋಣ.ಯಾರಿಗಾದರೂ ಆಗಲಿ ಒಬ್ಬರು ಅಥವಾ ಇಬ್ಬರಿಗೆ ಈ ಸಲ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕು ಎಂಬ ಬೇಡಿಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಸಹ ಬರೀ ದಕ್ಷಿಣ ಕರ್ನಾಟಕದವರಿಗೆ ಆದ್ಯತೆ ನೀಡದೇ ಕಿತ್ತೂರು ಕರ್ನಾಟಕಕ್ಕೂ ಆದ್ಯತೆ ನೀಡಬೇಕು. ಕನಿಷ್ಠ ಎರಡು ಸ್ಥಾನಗಳಿಗೆ ಇಲ್ಲಿನ ಜಿಲ್ಲೆಗಳ ಮುಖಂಡರಿಗೆ ಆದ್ಯತೆ ನೀಡಬೇಕು ಎಂಬುದು ಒಕ್ಕೊರಲಿನ ಆಗ್ರಹ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!