ಸೇವೆ ಕಾಯಂಗೊಳಿಸಲು ಗುತ್ತಿಗೆ ನೌಕರರ ಆಗ್ರಹ

| Published : Apr 29 2025, 12:47 AM IST

ಸಾರಾಂಶ

ಗುತ್ತಿಗೆ ಸೇವೆಯನ್ನು ಕಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ಏ.11 ರಿಂದ ಪೌರಕಾರ್ಮಿಕರು ಮತ್ತು ನೌಕರರು ನಡೆಸುತ್ತಿರುವ ಅನಿರ್ದಿಷ್ಟ ಕಾಲದ ಮುಷ್ಕರ 15ನೇ ದಿನಕ್ಕೆ ಕಾಲಿಟ್ಟಿದ್ದು, ಅಥಣಿ ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು ನೌಕರರು ಶುಕ್ರವಾರ ಶಾಸಕ ಲಕ್ಷ್ಮಣ ಸವದಿ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ತಮ್ಮ ವಿವಿಧ ಬೇಡಿಕೆಗಳಿಗೆ ಹಕ್ಕೋತ್ತಾಯ ಮಾಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಗುತ್ತಿಗೆ ಸೇವೆಯನ್ನು ಕಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ಏ.11 ರಿಂದ ಪೌರಕಾರ್ಮಿಕರು ಮತ್ತು ನೌಕರರು ನಡೆಸುತ್ತಿರುವ ಅನಿರ್ದಿಷ್ಟ ಕಾಲದ ಮುಷ್ಕರ 15ನೇ ದಿನಕ್ಕೆ ಕಾಲಿಟ್ಟಿದ್ದು, ಅಥಣಿ ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು ನೌಕರರು ಶುಕ್ರವಾರ ಶಾಸಕ ಲಕ್ಷ್ಮಣ ಸವದಿ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ತಮ್ಮ ವಿವಿಧ ಬೇಡಿಕೆಗಳಿಗೆ ಹಕ್ಕೋತ್ತಾಯ ಮಾಡಿದರು.

ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷ ದುಂಡಪ್ಪ ರಂಗಣ್ಣವರ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದಿಂದ ಸರ್ಕಾರಕ್ಕೆ ಅನೇಕ ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದ್ದೇವೆ. ಈ ಮನವಿ ಪತ್ರಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಆದ್ದರಿಂದ ಕಳೆದ ಏ.11 ರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ನಿಟ್ಟಿನಲ್ಲಿ ನಾವು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ಸಹಾಯಕರು, ಟ್ರ್ಯಾಕ್ಟರ್‌ ಚಾಲಕರು, ಬೀದಿ ದೀಪ ಸಹಾಯಕರು ಸೇರಿದಂತೆ ಇನ್ನಿತರ ಹೊರಗುತ್ತಿಗೆ ಪೌರಕಾರ್ಮಿಕರನ್ನು ಸರ್ಕಾರ ಕಾಯಂ ಗೊಳಿಸಬೇಕು ಎಂದು ಅನೇಕ ಬಾರಿ ಮನವಿ ಮಾಡಿದ್ದೇವೆ. ಸರ್ಕಾರ ನಮ್ಮ ಮನವಿಗೆ ಸಕಾರಾತ್ಮಕವಾಗಿ ಇನ್ನುವರಿಗೆ ಸ್ಪಂದಿಸಿಲ್ಲ. ಆದ್ದರಿಂದ ಈ ಹಂತ ಹಂತದ ಹೋರಾಟ ನಮಗೆ ಅನಿವಾರ್ಯವಾಗಿದೆ ಎಂದರು.

ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಅಥಣಿ ತಾಲೂಕು ಪೌರ ನೌಕರರ ಸಂಘದ ಅಧ್ಯಕ್ಷ ಬಸವರಾಜ ಕಾಂಬಳೆ ಮಾತನಾಡಿ, ಸ್ಥಳೀಯ ನಗರ ಸಂಸ್ಥೆಗಳ ಗುತ್ತಿಗೆ ಆಧಾರದ ನೌಕರರನ್ನು ಕಾಯಂಗೊಳಿಸುವುದರ ಜೊತೆಗೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಪಂಚಾಯತ್ ರಾಜ್ ಇಲಾಖೆಯ ನೌಕರರಂತೆ ಸ್ಥಳೀಯ ನಗರ ಸಂಸ್ಥೆಯ ನೌಕರರಿಗೂ ವೇತನ ಸೌಲಭ್ಯ ದೊರಕಬೇಕು. ಅದೇ ರೀತಿ ವಿವಿಧ ಬೇಡಿಕೆಗಳಲ್ಲಿ ಆಗ್ರಹಿಸಿ ಆಗ್ರಹಿಸಿ ಏ.11 ರಿಂದ 45 ದಿನಗಳ ಕಾಲ ಅನಿರ್ದಿಷ್ಟ ಅವಧಿ ಹೋರಾಟ ಕೈಗೊಂಡಿದ್ದೇವೆ. 3ನೇ ಹಂತದ ಈ ಹೋರಾಟವನ್ನು ಶಾಸಕರಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಪಂಜಿನ ಮೆರವಣಿಗೆ, ತಮಟೆ ಚಳುವಳಿ ಮೂಲಕ ಹಕ್ಕೋತ್ತಾಯ ಮಾಡುವುದು ಸೇರಿದಂತೆ ವಿವಿಧ ಸ್ವರೂಪದ ಹೋರಾಟಗಳನ್ನು ಹಂತ ಹಂತವಾಗಿ ಕೈಕೊಳ್ಳಲಾಗುವುದು ಎಂದರು.

ಶಾಸಕ ಲಕ್ಷ್ಮಣ ಸವದಿ ಮನವಿ ಸ್ವೀಕರಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೌರ ನೌಕರ ಸಂಘದ ಉಪಾಧ್ಯಕ್ಷ ಸುಖದೇವ ಶಿಂಧೆ, ರಾವಸಾಬ ಶಿಂದೆ, ಆನಂದ ಕಾಂಬಳೆ, ಕುಮಾರ ಯಳಮಲ್ಲೆ, ಮೆಹಬೂಬ್ ಮೆಹತ, ಅಭಿಜಿತ್ ಮಾಂಡವ್ಕರ, ಸೈದಪ್ಪ ಮಾಂಗ, ದಯಾ ಜೋಶಿ, ಮಹಾವೀರ ಕಲಕೇರಿ, ಕುಮಾರ ಮಾಳಿ, ವಾದಿರಾಜ ವಳವೇಕರ, ಗುರು ಕೆಂಪಸತ್ತಿ, ಚೆನ್ನಪ್ಪ ಜೀರಗ್ಯಾಳ, ಎನ್ ಎ ಘಟಕಾಂಬಳೆ, ಅನಿಲ್ ಘಟಕಾಂಬಳೆ, ಪ್ರಕಾಶ್ ದೂಪ್ ಸೇರಿದಂತೆ ಅನೇಕ ಪೌರಕಾರ್ಮಿಕರು ಮತ್ತು ನೌಕರರು ಉಪಸಿತರಿದ್ದರು.ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಹಾಗೂ ಪೌರ ಗುತ್ತಿಗೆ ನೌಕರರ ನಿಮ್ಮ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು, ಹೊರಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಪಂಚಾಯತ್‌ ರಾಜ್ ಇಲಾಖೆಯ ನೌಕರರಂತೆ ತಮ್ಮ ಸೇವೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ಸದನದಲ್ಲಿ ಚರ್ಚಿಸುತ್ತೇವೆ. ಸಂಬಂಧಪಟ್ಟ ಪೌರಾಡಳಿತ ಸಚಿವರೊಂದಿಗೆ, ಸಿಎಂ ಮತ್ತು ಡಿಸಿಎಂಗಳೊಂದಿಗೆ ಚರ್ಚಿಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂಬರುವ ಅಧಿವೇಶನದಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತುವ ಮೂಲಕ ಪೌರ ನೌಕರರಿಗೆ ನ್ಯಾಯ ಒದಗಿಸಲಾಗುವುದು.

-ಲಕ್ಷ್ಮಣ ಸವದಿ, ಶಾಸಕರು.