ಸಾರಾಂಶ
ಮೇ 19 ರಿಂದ 21ರ ವರೆಗೆ 2ನೇ ಹಂತದಲ್ಲಿ ಸಮೀಕ್ಷೆಯಲ್ಲಿ ಉಳಿದವರಿಗಾಗಿ ಮತಗಟ್ಟೆ ಮಟ್ಟದಲ್ಲಿ ಸಮೀಕ್ಷೆದಾರರು ವಿಶೇಷ ಶಿಬಿರ ಆಯೋಜಿಸಿ ಮಾಹಿತಿ ಸಂಗ್ರಹಿಸಿ, ದಾಖಲಿಸುತ್ತಾರೆ.
ಧಾರವಾಡ: ನ್ಯಾಯಮೂರ್ತಿ ಡಾ. ಎಚ್.ಎಸ್. ನಾಗಮೋಹನದಾಸ ಏಕಸದಸ್ಯ ವಿಚಾರಣಾ ಆಯೋಗದ ಸೂಚನೆ ಪ್ರಕಾರ ಈಗಾಗಲೇ ಗುರುತಿಸಿರುವ 101 ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಡಿ, ಉಪ ಜಾತಿಗಳ ಸಮೀಕ್ಷೆ ಮೇ 5 ರಿಂದ ಆರಂಭವಾಗಲಿದೆ. ಸಮೀಕ್ಷೆದಾರರು ಯಾವುದೇ ಒತ್ತಡ, ಪ್ರಭಾವಗಳಿಗೆ ಒಳಗಾಗದೇ, ಅಗತ್ಯ ದಾಖಲೆಗಳ ಅನುಸಾರ ಕರಾರುವಕ್ಕಾಗಿ ಮತ್ತು ನಿಯಮಗಳ ಅನುಸಾರ ಸಮೀಕ್ಷೆ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಸಮೀಕ್ಷೆದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಅಡಿ, ಉಪಜಾತಿಗಳ ಸಮೀಕ್ಷೆಯನ್ನು ಸರ್ಕಾರ ಅಭಿವೃದ್ಧಿಪಡಿಸಿರುವ ಆ್ಯಪ್ ಮೂಲಕ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕರಿಂದ ಮೂರು ಹಂತಗಳಲ್ಲಿ ಮಾಡಲು ಸೂಚಿಸಲಾಗಿದೆ. ಮೇ 5 ರಿಂದ 17ರ ವರೆಗೆ ಮೊದಲ ಹಂತದಲ್ಲಿ ಸಮೀಕ್ಷೆದಾರರು ಮನೆ ಮನೆ ಭೇಟಿ ಮೂಲಕ ಸಮೀಕ್ಷೆ ಮಾಡಿ, ಮಾಹಿತಿ ದಾಖಲಿಸಲಿದ್ದಾರೆ ಎಂದರು.
ಮೇ 19 ರಿಂದ 21ರ ವರೆಗೆ 2ನೇ ಹಂತದಲ್ಲಿ ಸಮೀಕ್ಷೆಯಲ್ಲಿ ಉಳಿದವರಿಗಾಗಿ ಮತಗಟ್ಟೆ ಮಟ್ಟದಲ್ಲಿ ಸಮೀಕ್ಷೆದಾರರು ವಿಶೇಷ ಶಿಬಿರ ಆಯೋಜಿಸಿ ಮಾಹಿತಿ ಸಂಗ್ರಹಿಸಿ, ದಾಖಲಿಸುತ್ತಾರೆ. 3ನೇ ಹಂತದಲ್ಲಿ ಮೇ 19 ರಿಂದ 23ರ ವರೆಗೆ ಸಮೀಕ್ಷೆಯಲ್ಲಿ ಹಾಜರಾಗದ, ಬಿಟ್ಟು ಹೋದ ಪರಿಶಿಷ್ಟ ಜಾತಿಯ ಜನರು ಸ್ವತಃ ತಾವೇ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಕಂಟ್ರೋಲ್ ರೂಮ್: ಸಮೀಕ್ಷೆಯು ನಿಗದಿತ ಅವಧಿಯೊಳಗೆ ಮಾಡಬೇಕಿದ್ದು, ಕ್ಷೇತ್ರಮಟ್ಟದಲ್ಲಿ ಸಮೀಕ್ಷೆದಾರರಿಗೆ ಉಂಟಾಗುವ ಗೊಂದಲ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಸ್ಪಂಧಿಸಿ, ಬಗೆ ಹರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಅಲ್ಲಿನ ಸಹಾಯವಾಣಿಗೆ ಕರೆ ಮಾಡಿ, ಸಮೀಕ್ಷೆದಾರರು ಸಹಾಯ ಪಡೆಯಬಹುದು ಎಂದು ಹೇಳಿದರು.
ಈ ಸಮೀಕ್ಷೆಯು ಮೂಲ ದತ್ತಾಂಶಗಳನ್ನು ಸಂಗ್ರಹಿಸುವದಾಗಿರುವುದರಿಂದ ಅತೀ ಮುಖ್ಯವಾಗಿದೆ. ಪಾರದರ್ಶಕವಾಗಿ, ಸಮರ್ಪಕವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ತರಬೇತಿ ಪೂರ್ಣಪ್ರಮಾಣದಲ್ಲಿ ಆಗಬೇಕು ಎಂದರು.ಜಿಪಂ ಸಿಇಓ ಭುವನೇಶ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ ವೇದಿಕೆಯಲ್ಲಿದ್ದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಸ್ವಾಗತಿಸಿದರು. ತಹಸೀಲ್ದಾರರು, ಶಿಶು ಅಭಿವೃದ್ಧಿ ಅಧಿಕಾರಿಗಳು, ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯಿಂದ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡವರು ಭಾಗವಹಿಸಿದ್ದರು.