ಎಸ್ಸಿ ಮೀಸಲಾತಿ ವರ್ಗೀಕರಣ ಸಮೀಕ್ಷೆ ಯಾವ ಕುಟುಂಬ ಹೊರಗುಳಿಯದಿರಲಿ

| Published : Apr 28 2025, 11:49 PM IST

ಎಸ್ಸಿ ಮೀಸಲಾತಿ ವರ್ಗೀಕರಣ ಸಮೀಕ್ಷೆ ಯಾವ ಕುಟುಂಬ ಹೊರಗುಳಿಯದಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗತಿಗಳಿಗಾಗಿ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆಯು ಅತ್ಯವಶ್ಯಕ.

ಕೊಪ್ಪಳ:

ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆಯಿಂದ ಒಂದೇ ಒಂದು ಕುಟುಂಬವು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಲಿನ ಅತುಲ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತು ಕ್ರಮವಹಿಸಲು ಸರ್ಕಾರದಿಂದ ನಡೆಸಲಾಗುತ್ತಿರುವ ಸಮೀಕ್ಷೆ ಕುರಿತು ಜಿಲ್ಲಾಮಟ್ಟದ ಮಾಸ್ಟ‌ರ್ ಟ್ರೈನರ್‌ಗಳಿಂದ ತಾಲೂಕು ಮಟ್ಟದ ಮಾಸ್ಟ‌ರ್ ಟ್ರೈನರ್‌ಗೆ ಜರುಗಿದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗತಿಗಳಿಗಾಗಿ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆಯು ಅತ್ಯವಶ್ಯಕ. ಈ ಸಮೀಕ್ಷೆಯು ಒಟ್ಟು ಮೂರು ಹಂತದಲ್ಲಿ ನಡೆಯಲ್ಲಿದೆ. ತಾಲೂಕು ಮಟ್ಟದ ಮಾಸ್ಟ‌ರ್ ತರಬೇತುದಾರರು ತಮ್ಮ ತಾಲೂಕು ವ್ಯಾಪ್ತಿಯ ಮತಗಟ್ಟೆವಾರು ಪ್ರತಿಯೊಂದು ಮನೆಗೆ ತೆರಳಿ, ಜಾಗರೂಕತೆಯಿಂದ ಸಮೀಕ್ಷೆ ನಡಸಬೇಕು ಎಂದರು.

ಸಮೀಕ್ಷೆಯಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಯನ್ನು ಭರ್ತಿ ಮಾಡಬಾರದು. ಮನೆ-ಮನೆಗೆ ಭೇಟಿ ನೀಡಿದಾಗ ಅಲ್ಲಿನ ಕುಟುಂಬ ಸದಸ್ಯರೊಂದಿಗೆ ಸೌಜನ್ಯಯಿಂದ ವರ್ತಿಸಬೇಕು. ಮಾಹಿತಿಯನ್ನು ಮನೆಯ ಮುಖ್ಯಸ್ಥರಿಂದ ಪಡೆದುಕೊಂಡು ಸಮೀಕ್ಷೆಯ ಪ್ರಶ್ನೆಗಳಿಗೆ ಕುಟುಂಬದ ಸದಸ್ಯರು ನೀಡಿದಂತಹ ಮಾಹಿತಿಯನ್ನು ಮಾತ್ರ ಭರ್ತಿ ಮಾಡಬೇಕು. ಈ ಸಮೀಕ್ಷೆಯಲ್ಲಿ ಯಾವುದೇ ಮಧ್ಯವರ್ತಿ, ಸಂಘ-ಸಂಸ್ಥೆಗಳು ಮತ್ತು ಮಕ್ಕಳಿಂದ ಮಾಹಿತಿ ಭರ್ತಿ ಮಾಡುವಂತಿಲ್ಲ. ಸಮೀಕ್ಷೆಯಲ್ಲಿನ ಎಲ್ಲ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಸರಿಯಾದ ಮಾಹಿತಿ ಸಂಗ್ರಹಿಸಿ ಮೊಬೈಲ್ ಆ್ಯಪ್ ಮೂಲಕವೇ ಸಮೀಕ್ಷೆ ಕೈಗೊಳ್ಳಬೇಕು ಎಂದು ಹೇಳಿದರು.

ಸಮೀಕ್ಷೆಯ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಆಧಾರ್ ಮತ್ತು ರೇಷನ್ ಕಾರ್ಡ್‌ನ್ನು ಸಮೀಕ್ಷೆಗಾರರ ಮುಂದೆ ಹಾಜರುಪಡಿಸಬೇಕು ಎಂದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆಯು 3 ಹಂತಗಳಲ್ಲಿ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆದಾರರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆಯನ್ನು ಮೇ 5ರಿಂದ ಮೇ 17ರ ವರೆಗೆ ಬೆಳಗ್ಗೆ 8ರಿಂದ ಸಂಜೆ 6.30ರ ವರೆಗೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ಕೈಗೊಳ್ಳಬೇಕು. ಸಮೀಕ್ಷೆ ಬ್ಲಾಕ್‌ಗಳಲ್ಲಿ ವಿಶೇಷ ಶಿಬಿರ ಕೈಗೊಂಡು, ಮನೆ-ಮನೆ ಭೇಟಿ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಮೇ 19 ರಿಂದ ಮೇ 21ರ ವರೆಗೆ ಸಂಗ್ರಹಿಸಬೇಕು. ಮೇ 19ರಿಂದ ಮೇ 23ರ ವರೆಗೆ ಕಡ್ಡಾಯವಾಗಿ ಆಧಾರ್ ನಂಬರ್ ಹಾಗೂ ರೇಷನ ಕಾರ್ಡ್ ನಂಬರ್‌ನೊಂದಿಗೆ ಸ್ವಯಂ ಘೋಷಣೆ (ಆನ್‌ಲೈನ್‌)ಯನ್ನು ಸಲ್ಲಿಸಬೇಕು ಎಂದರು.

ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಹಾಗೂ ಅಧಿಕಾರಿ ವರ್ಗದವರಿದ್ದರು.ತರಬೇತಿ ಕಾರ್ಯಾಗಾರ

ತರಬೇತಿ ಕಾರ್ಯಾಗಾರದಲ್ಲಿ ಯಲಬುರ್ಗಾ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ, ಎಡಿಸಿಎಸ್ ಕೊಪ್ಪಳದ ಡಿಪಿಎಂ ಮಲ್ಲಿಕಾರ್ಜುನ ಪಲ್ಲೇದ್ ಹಾಗೂ ಜಿಲ್ಲಾ ಪಂಚಾಯಿತಿಯ ಪಿಎಂಆರ್ ರಾಜೇಶ ಡಿ. ತರಬೇತಿ ನೀಡಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಮಾಸ್ಟ‌ರ್ ಟ್ರೈನರ್‌ಗಳು ಪಾಲ್ಗೊಂಡಿದ್ದರು.