ಪರಿಶಿಷ್ಟ ಜಾತಿಯ ಪ್ರತಿ ಮನೆಗಳಲ್ಲೂ ಜಾತಿ ಗಣತಿ ಸಮೀಕ್ಷೆ ಮಾಡಬೇಕು

| Published : Apr 28 2025, 11:48 PM IST

ಪರಿಶಿಷ್ಟ ಜಾತಿಯ ಪ್ರತಿ ಮನೆಗಳಲ್ಲೂ ಜಾತಿ ಗಣತಿ ಸಮೀಕ್ಷೆ ಮಾಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಮೂರು ಜಾತಿಗಳಿದ್ದು, ಅದರಲ್ಲಿ 101 ಉಪ ಜಾತಿಗಳು ಬರುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ಪರಿಶಿಷ್ಟ ಜಾತಿಯ ಪ್ರತಿ ಮನೆಗಳಲ್ಲಿಯೂ ಜಾತಿ ಗಣತಿ ಸಮೀಕ್ಷೆಯನ್ನು ಮಾಡಬೇಕು. ಪ್ರತಿಯೊಬ್ಬರನ್ನು ಒಳಗೊಂಡತೆ ಸಮೀಕ್ಷೆ ಇರಬೇಕು ಎಂದು ಉಪನ್ಯಾಸಕ ಪಿ.ಎಲ್. ಶಿವಕುಮಾರ್ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಶಿಷ್ಠ ಜಾತಿಗಳ ಸಮಗ್ರ ಸಮೀಕ್ಷೆ ಸಮಿತಿ ತರಬೇತಿಯಲ್ಲಿ ಜಾತಿ ಗಣತಿ ಸಮೀಕ್ಷೆ ಕುರಿತು ಮಾತನಾಡಿದ ಅವರು, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಮೂರು ಜಾತಿಗಳಿದ್ದು, ಅದರಲ್ಲಿ 101 ಉಪ ಜಾತಿಗಳು ಬರುತ್ತವೆ. ಅದರಲ್ಲಿ ಆದಿ ಕರ್ನಾಟಕ ಅಂತ ಬಂದಾಗ ಅವರಲ್ಲಿ 98 ಉಪ ಜಾತಿ ಇರುವುದರಿಂದ 98 ಉಪ ಜಾತಿಗಳಲ್ಲಿ ಯಾವುದಾದರೂ ಒಂದಕ್ಕೆ ಸೇರಿರುತ್ತಾರೆ. ಅದನ್ನು ತಿಳಿದುಕೊಂಡು ಜಾತಿಗಣತಿ ಮಾಡಬೇಕು. 98 ಉಪ ಜಾತಿಯಲ್ಲಿ ಯಾವುದು ಎಂದು ಗೊತ್ತಿಲ್ಲದಾಗ ತಿಳಿದಿಲ್ಲ ಎಂದು ನೋಂದಣಿ ಮಾಡಬೇಕು ಎಂದು ಹೇಳಿದರು.

ಗಣತಿದಾರರು ನಿಖರವಾಗಿ ಮನೆ ಮನೆಗೆ ಹೋಗಿ ಸೌಹಾರ್ದಯುತವಾಗಿ, ನಗು ಮುಖದಿಂದ ನಡೆದುಕೊಳ್ಳಬೇಕು. ಸಮೀಕ್ಷೆ ಮಾಡುವಾಗ ಕುಟುಂಬದಲ್ಲಿ ಇರುವಂತವರಿಂದಲೇ ಮಾಹಿತಿಯನ್ನು ತೆಗೆದುಕೊಳ್ಳಬೇಕು. ಕೆಲವರು ಕುಳಿತಲ್ಲಿಯೇ ಮಾಹಿತಿಯನ್ನು ಸಂಗ್ರಹಿಸುತ್ತಾರೆ ಇದನ್ನ ಮಾಡಬಾರದು. ಆ ಕುಟುಂಬದವರಿಂದಲೇ ಮಾಹಿತಿಯನ್ನು ತೆಗೆದುಕೊಂಡು ಯಾರು ಮಾಹಿತಿ ನೀಡಿರುತ್ತಾರೆ ಅವರ ಭಾವಚಿತ್ರವನ್ನು ತೆಗೆದುಕೊಳ್ಳಬೇಕು. ಇದರಿಂದ ಯಾರು ಮಾಹಿತಿ ಕೊಟ್ಟಿದ್ದಾರೆ ಎಂಬುದು ತಿಳಿಯುತ್ತದೆ ಎಂದರು.

ಗಣತಿಗಾಗಿಯೇ ಆಪ್ ಅನ್ನು ಕ್ರಿಯೇಟ್ ಮಾಡಲಾಗಿದ್ದು, ಆಂಡ್ರಾಯ್ಡ್ ಫೋನ್ ಮೂಲಕ ಡೌನ್ಲೋಡ್ ಮಾಡಿಕೊಂಡು ಅದರಂತೆ ಗಣತಿ ಮಾಡಬೇಕಾಗುತ್ತದೆ. ಗಣತಿದಾರರಿಗೆ ಮಾತ್ರ ಆಪ್ ಅನ್ನು ಕಳಿಸಲಾಗುತ್ತದೆ. ಗಣತಿದಾರರಿಗೆ ಬೆಳಗ್ಗೆ 6.30 ರಿಂದ ಸಂಜೆ 6.30 ರವರೆಗೆ ಸಮಯ ನಿಗಧಿ ಪಡಿಸಲಾಗಿರುತ್ತದೆ. ಲಾಗಿನ್ ಆಗಿದ ನಂತರ ಸಮಯ ಮುಗಿದ ಮೇಲೆ ಅದೇ ಲಾಗ್‌ ಔಟ್ ಆಗುತ್ತದೆ. ಅಲ್ಲಿಯವರೆಗೆ ಸಮೀಕ್ಷೆ ಮಾಡಬೇಕು ಎಂದು ತಿಳಿಸಿದರು.

ಒಬ್ಬ ಗಣತಿದಾರರು 200 ರಿಂದ 300 ಕುಟುಂಬವನ್ನಾದರು ಜವಾಬ್ದಾರಿಯುತವಾಗಿ, ತಾಳ್ಮೆಯಿಂದ ಜಾತಿಗಣತಿ ಮಾಡಬೇಕು. ಗಣತಿದಾರರಿಗೆ ತಾಳ್ಮೆ ಬಹಳ ಮುಖ. ಗಣತಿದಾರಿಗೂ ಮೇಲ್ವಿಚಾರಕರು ನೇಮಕ ಮಾಡಲಾಗಿದ್ದು, ಗಣತಿದಾರರು ಸರಿಯಾಗಿ ಸಮೀಕ್ಷೆ ಮಾಡುತ್ತಿದ್ದಾರಾ ಎಂದು ಮೇಲ್ವಿಚಾರಕರು ಶೇ.10 ರಷ್ಟು ಸಮೀಕ್ಷೆ ಮಾಡಬೇಕು ಎಂದು ಹೇಳಿದರು.

ಜಾತಿ ಗಣತಿಯು ರೇಷನ್ ಕಾರ್ಡ್ ನಂಬರ್ ಮೂಲಕ ಮಾಡಲಾಗುತ್ತದೆ. ರೇಷನ್ ಕಾರ್ಡ್ ಹೊಂದಿಲ್ಲದೆ ಇರುವವರಿಗೆ ಆಧಾರ್ ಕಾರ್ಡ್ ಮೂಲಕ ಅವರ ಮಾಹಿತಿಯನ್ನು ತೆಗೆದುಕೊಳ್ಳಬೇಕು. ಒಂದು ಮನೆಯಲ್ಲಿ ಒಂದು ಬಾರಿ ಮಾತ್ರ ಜಾತಿಗಣತಿ ಮಾಡಬೇಕು. ಕುಟುಂಬದವರಿಂದಲೇ ಮಾಹಿತಿಯನ್ನು ಪಡೆದುಕೊಂಡು ಪ್ರತಿಯೊಂದು ಮನೆಗಳಿಗೂ ಹೋಗಿ ಸಮೀಕ್ಷೆ ಮಾಡಬೇಕು. ಬೇರೆ ಅವರು ಪರಿಶಿಷ್ಟ ಜಾತಿ ಎಂದು ಸುಳ್ಳು ಹೇಳಿ ಮಾಹಿತಿಯನ್ನು ನೀಡುವುದರಿಂದ ಸಮೀಕ್ಷೆಯಲ್ಲಿ ಅವರು ಎಸ್ಸಿ ಎಂದು ತಿಳಿದು ಬಂದರೆ ಮಾತ್ರ ಸಮೀಕ್ಷೆ ಮುಂದುವರಿಸಬೇಕು ಎಂದರು.

ಜಾತಿಯಲ್ಲಿ ತುಂಬಾ ಸೂಕ್ಷ್ಮತೆ ಇರುವುದರಿಂದ ಜಾತಿಗಣತಿ ಸಮೀಕ್ಷೆಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಜಾತಿ ಗಣತಿದಾರರು ಜನರಲ್ಲಿ ಮನವರಿಗೆ ಮಾಡಬೇಕು. ಇದರಿಂದ ಆಗುವ ಅನುಕೂಲದ ಬಗ್ಗೆ ತಿಳಿಸಿ ಮನವೊಲಿಸಿ ಅವರಿಗೆ ಯಾವುದೇ ರೀತಿ ಬೇಜಾರಾಗದ ರೀತಿಯಲ್ಲಿ ನಡೆದುಕೊಂಡು ಈ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು. ಜಾತಿಗಣತಿ ಕೆಲಸ ಹೆಮ್ಮೆಯ ಕೆಲಸ, ರಾಷ್ಟ್ರ ಸೇವೆಯ ಕೆಲಸ ಎಂದು ಭಾವಿಸಿಕೊಂಡು ಪ್ರತಿಯೊಬ್ಬ ಜಾತಿ ಗಣತಿದಾರರು ಸಮೀಕ್ಷೆ ಮಾಡಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ, ಪಾಲಿಕೆಯ ಉಪ ಆಯುಕ್ತರಾದ ಸೋಮಶೇಖರ್, ದಾಸೇಗೌಡ, ಡಿಡಿಪಿಐ ಜವರೇಗೌಡ, ಸೇವಾ ಸಿಂಧು ಪೋರ್ಟಲ್ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಎಂ. ಚೇತನ್, ಉಪನ್ಯಾಸಕ ಮುರುಳಿ ಮೊದಲಾದವರು ಇದ್ದರು.