ಸಾರಾಂಶ
ಬಿಹಾರದಲ್ಲಿ ಹೈವೋಲ್ಟೇಜ್ ವಿಧಾನಸಭಾ ಚುನಾವಣೆಗೆ ಒಂದೇ ತಿಂಗಳು ಬಾಕಿ ಇರುವ ಹೊತ್ತಿನಲ್ಲೇ, ಪ್ರತಿಪಕ್ಷ ಆರ್‌ಜೆಡಿಯ ಪಾಲಿಗೆ ಹೊಸ ತಲೆನೋವು ಶುರುವಾಗಿದೆ. ಐಆರ್‌ಟಿಸಿ ಹೋಟೆಲ್ ಹಗರಣಕ್ಕೆ ಸಂಬಂಧಿಸಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಸೇರಿ ಲಾಲೂ ಕುಟುಂಬದ ಮೂವರ ವಿರುದ್ಧ ದೋಷಾರೋಪ
ನವದೆಹಲಿ: ಬಿಹಾರದಲ್ಲಿ ಹೈವೋಲ್ಟೇಜ್ ವಿಧಾನಸಭಾ ಚುನಾವಣೆಗೆ ಒಂದೇ ತಿಂಗಳು ಬಾಕಿ ಇರುವ ಹೊತ್ತಿನಲ್ಲೇ, ಪ್ರತಿಪಕ್ಷ ಆರ್‌ಜೆಡಿಯ ಪಾಲಿಗೆ ಹೊಸ ತಲೆನೋವು ಶುರುವಾಗಿದೆ. ಐಆರ್‌ಟಿಸಿ ಹೋಟೆಲ್ ಹಗರಣಕ್ಕೆ ಸಂಬಂಧಿಸಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಸೇರಿ ಲಾಲೂ ಕುಟುಂಬದ ಮೂವರ ವಿರುದ್ಧ ದೆಹಲಿ ಕೋರ್ಟ್ ಶುಕ್ರವಾರ ದೋಷಾರೋಪ ಹೊರಿಸಿದೆ.
ಐಆರ್‌ಸಿಟಿ ಹೋಟೆಲ್‌ಗಳನ್ನು ಅಕ್ರಮವಾಗಿ ಖಾಸಗಿ ಸಂಸ್ಥೆಗೆ ಲೀಸ್‌ಗೆ ನೀಡಿ, ಬದಲಿಗೆ 3 ಎಕರೆ ಭೂಮಿಯನ್ನು ಪಡೆದ ಆರೋಪ ಮಾಜಿ ಮುಖ್ಯಮಂತ್ರಿ ದಂಪತಿಯಾದ ಲಾಲೂ ಹಾಗೂ ರಾಬ್ದಿ ದೇವಿ, ಪುತ್ರ ತೇಜಸ್ವಿ ಯಾದವ್ ಅವರ ಮೇಲಿದೆ. ಇದರ ವಿಚಾರಣೆ ಅಕ್ಟೋಬರ್ ಕೊನೆಯ ವಾರದಿಂದ ಆರಂಭವಾಗುವ ನಿರೀಕ್ಷೆ ಇದೆ.
ಪ್ರಕರಣವೇನು?:
2004 ಮತ್ತು 2014ರ ನಡುವೆ ಪುರಿ ಮತ್ತು ರಾಂಚಿಯಲ್ಲಿರುವ ಭಾರತೀಯ ರೈಲ್ವೆಯ ಬಿಎನ್ಆರ್ ಹೋಟೆಲ್‌ಗಳನ್ನು ಐಆರ್‌ಸಿಟಿಸಿಗೆ ವರ್ಗಾಯಿಸಲಾಯಿತು. ನಂತರ ಇದರ ಕಾರ್ಯಾಚರಣೆ, ನಿರ್ವಹಣೆಯನ್ನು ಲಾಲೂ ಕುಟುಂಬ ಪಟ್ನಾ ಮೂಲದ ಸುಜಾತಾ ಹೋಟೆಲ್ಸ್‌ಗೆ ಅಕ್ರಮವಾಗಿ ಲೀಸ್‌ಗೆ ನೀಡಿತು. ಇದಕ್ಕೆ ಪ್ರತಿಯಾಗಿ 3 ಎಕರೆ ಜಮೀನನ್ನು ಬೇನಾಮಿ ಕಂಪನಿ ಮೂಲಕ ಪಡೆದಿದ್ದರು ಎಂಬುದು ಆರೋಪ. ಈ ಸಂಬಂಧ ಸಿಬಿಐ 2017ರಲ್ಲಿ ಕೇಸ್ ದಾಖಲಿಸಿತ್ತು. ಚಾರ್ಜ್‌ಶೀಟ್‌ನಲ್ಲಿ ಐಆರ್‌ಸಿಟಿಯ ಕೆಲ ಸಿಬ್ಬಂದಿಯ ಹೆಸರನ್ನೂ ಉಲ್ಲೇಖಿಸಲಾಗಿದೆ.
ತೇಜಸ್ವಿ ಕಿಡಿ:
ಪ್ರಕರಣವನ್ನು ರಾಜಕೀಯ ಸೇಡು ಎಂದು ಕರೆದಿರುವ ತೇಜಸ್ವಿ ಯಾದವ್, ‘ಚುನಾವಣೆಗೆ ಮುನ್ನ ಹೀಗೆ ಆಗಲಿದೆ ಎಂದು ನಾವು ಮೊದಲಿಂದಲೂ ಹೇಳುತ್ತಿದ್ದೆವು. ನಾನು ಬದುಕಿರುವ ತನಕ ಬಿಜೆಪಿ ವಿರುದ್ಧ ಹೋತ್ಡುತ್ತಿರುತ್ತೇನೆ’ ಎಂದು ಕಿಡಿ ಕಾರಿದ್ದಾರೆ.