ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆಯು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಚುನಾವಣೆಗಾಗಿ ಸಿದ್ಧತೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

 ಬೆಂಗಳೂರು : ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆಯು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಚುನಾವಣೆಗಾಗಿ ಸಿದ್ಧತೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ ರಾತ್ರಿ ತಮ್ಮ ಅಧಿಕೃತ ನಿವಾಸದಲ್ಲಿ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದ ಸಿದ್ದರಾಮಯ್ಯ ಅವರು, ಮುಂದಿನ ಚುನಾವಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಲವು ವರ್ಷಗಳಿಂದ ಜಿಪಂ, ತಾಪಂ, ಚುನಾವಣೆ ನಡೆದಿಲ್ಲ. ಜಿಬಿಎ ರಚನೆ ಹಿನ್ನೆಲೆಯಲ್ಲಿ ಬೆಂಗಳೂರು ಪಾಲಿಕೆ ಚುನಾವಣೆಯೂ ವಿಳಂಬವಾಗಿದೆ. ಈಗ ಐದು ನೂತನ ಪಾಲಿಕೆಗಳು ರಚನೆಯಾಗಿದ್ದು, ಐದು ಪಾಲಿಕೆಗಳನ್ನೂ ಗೆಲ್ಲಬೇಕಾದ ಸವಾಲು ನಮ್ಮ ಮುಂದಿದೆ. ಈ ಬಗ್ಗೆ ಈಗಿನಿಂದಲೇ ಸಿದ್ಧತೆ ನಡೆಸಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಸರ್ಕಾರದ ಸಾಧನೆ ಜನರಿಗೆ ತಲುಪಿಸಿ:

ಮುಂಬರುವ ಚುನಾವಣೆ ಗೆಲ್ಲಲು ಹೆಚ್ಚು ಪ್ರಚಾರ ನಡೆಸುವ ಅಗತ್ಯವಿಲ್ಲ. ನೀವೆಲ್ಲರೂ ಗ್ಯಾರಂಟಿ ಸಾಧನೆ ಸೇರಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಳ್ಳಬೇಕು. ಇದಾದರೆ ಚುನಾವಣೆಗಳನ್ನು ಗೆಲ್ಲುವುದು ಕಷ್ಟವಲ್ಲ. ಆದರೆ ಇದನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ಚುನಾವಣೆಗೆ ಸಜ್ಜಾಗಿ ಎಂದಿದ್ದಾರೆ-ರಾಮಲಿಂಗಾರೆಡ್ಡಿ:

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ ನಡೆಯಲಿದೆ. ಅದೇ ವೇಳೆ ಜಿಪಂ, ತಾಪಂ ಚುನಾವಣೆಯೂ ನಡೆಯಲಿದೆ. ಈ ಕುರಿತು ಸಿದ್ಧತೆ ನಡೆಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.