ಕೆಡಿಸಿಸಿ ಚುನಾವಣೆ; ಮೊದಲ ದಿನ 27 ನಾಮಪತ್ರ

| Published : Oct 14 2025, 01:02 AM IST

ಸಾರಾಂಶ

ಜಿಲ್ಲೆಯಲ್ಲಿ ಬಹಳ ಕುತೂಹಲ ಮೂಡಿಸುತ್ತಿರುವ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ (ಕೆಡಿಸಿಸಿ) ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳ ಚುನಾವಣೆಗೆ ಮೊದಲ ದಿನವೇ 16 ಆಕಾಂಕ್ಷಿಗಳಿಂದ 27 ನಾಮಪತ್ರಿಕೆ ಸಲ್ಲಿಕೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಸಿ

ಜಿಲ್ಲೆಯಲ್ಲಿ ಬಹಳ ಕುತೂಹಲ ಮೂಡಿಸುತ್ತಿರುವ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ (ಕೆಡಿಸಿಸಿ) ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳ ಚುನಾವಣೆಗೆ ಮೊದಲ ದಿನವೇ 16 ಆಕಾಂಕ್ಷಿಗಳಿಂದ 27 ನಾಮಪತ್ರಿಕೆ ಸಲ್ಲಿಕೆ ಮಾಡಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಅ.17 ರವರೆಗೆ ಅವಕಾಶವಿದ್ದು ಅ. 18 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.19 ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶವಿದ್ದು, ಅ.24 ರಂದು ಚುನಾವಣೆ ಜರುಗಲಿದೆ.

ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕ್ಷೇತ್ರದಿಂದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಭಟ್ಕಳ ತಾಲೂಕು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದಿಂದ ಮಂಕಾಳ ಎಸ್. ವೈದ್ಯ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಗಳ ಕ್ಷೇತ್ರದಿಂದ ಗೋಪಾಲಕೃಷ್ಣ ವೈದ್ಯ, ಕಾರವಾರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಪ್ರಕಾಶ ರಾಮ ಗುನಗಿ, ಸುರೇಶ ರಾಮ ಪೇಡ್ನೆಕರ್, ಸಿದ್ದಾಪುರ ತಾಲೂಕು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ವಿವೇಕ ಸುಬ್ರಾಯ ಭಟ್ಟ ಗಡಿಹಿತ್ಲು, ಅಂಕೋಲಾ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಬೀರಣ್ಣ ಬೊಮ್ಮಯ್ಯ ನಾಯಕ, ಕುಮಟಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಗಜಾನನ ನಾಗೇಶ ಪೈ, ರಾಜಗೋಪಾಲ ಮಹಾದೇವ ಅಡಿ, ಶ್ರೀಧರ ರಾಮಚಂದ್ರ ಭಾಗವತ, ಹೊನ್ನಾವರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮತಕ್ಷೇತ್ರದಿಂದ ವಿ.ಕೆ. ವಿಶಾಲ, ಜೊಯಿಡಾ ತಾಲೂಕು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದಿಂದ ಕೃಷ್ಣ ಎಸ್.ದೇಸಾಯಿ, ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕ್ರಣ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ನಿರಂಜನ ಶ್ರೀಧರ ಭಟ್ಟ, ಔದ್ಯೋಗಿಕ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ವಿಶ್ವನಾಥ ಎಸ್. ಭಟ್ಟ, ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರ ಸಂಘಗಳ ಮತಕ್ಷೇತ್ರದಿಂದ ಮೋಹನದಾಸ್ ನಾಯಕ, ಮೋಹನ ನಾರಾಯಣ ನಾಯಕ ನಾಮಪತ್ರ ಸಲ್ಲಿಸಿದ್ದಾರೆ.ಅ.15ರಂದು ಹೆಬ್ಬಾರ ನಾಮಪತ್ರ

ಚುನಾವಣೆ ಘೋಷಣೆಯಾದ ಬಳಿಕ ಕೆಡಿಸಿಸಿ ಬ್ಯಾಂಕ್‌ ಪ್ರಮುಖ ಚರ್ಚಾ ಕೇಂದ್ರವಾಗಿದ್ದು, ಸೋಮವಾರ ಬೆಳಗ್ಗೆಯಿಂದ ತುರುಸಿನಿಂದ ನಡೆಯುತ್ತಿದ್ದು, ಸಚಿವ ಮಂಕಾಳ ವೈದ್ಯ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ವೇಳೆ ಬೆಂಬಲಿಗರಲ್ಲಿ ಉತ್ಸಾಹ ಹೆಚ್ಚಾಯಿತು. ಸಚಿವ ಮಂಕಾಳ ವೈದ್ಯ ಭಟ್ಕಳ ತಾಲೂಕು ಪ್ರಾಥಮಿಕ ಸಹಕಾರಿ ಸಂಘಗಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಮಾಜಿ ಸಚಿವ ಹಾಗೂ ಕೆಡಿಸಿಸಿ ಬ್ಯಾಂಕಿನ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ ಅ.15ರಂದು ನಾಮಪತ್ರ ಸಲ್ಲಿಸಲಿದ್ದಾರೆ.