ಸಾರಾಂಶ
ಬಿಹಾರ ಚುನಾವಣೆ ಹೊಣೆಗಾರಿಕೆಯಲ್ಲದೆ, ಕೆಲ ಸಚಿವರು ಖುದ್ದಾಗಿ ಬಿಹಾರಕ್ಕೆ ತೆರಳಿ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆಗಳಿವೆ. ಸಚಿವರಿಗೆ ನೀಡಿದ ಔತಣ ಕೂಟದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಹೈಕಮಾಂಡ್ ನೀಡಿರುವ ಕೆಲ ಸೂಚನೆಗಳನ್ನು ವಿವರಿಸಿದರು
ಬೆಂಗಳೂರು : ಬಿಹಾರ ಚುನಾವಣೆ ನಿರ್ವಹಣೆ ಹೊಣೆಗಾರಿಕೆಯಲ್ಲದೆ, ಕೆಲ ಸಚಿವರು ಖುದ್ದಾಗಿ ಬಿಹಾರಕ್ಕೆ ತೆರಳಿ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆಗಳಿವೆ.
ಸೋಮವಾರ ಸಚಿವರಿಗೆ ನೀಡಿದ ಔತಣ ಕೂಟದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಹೈಕಮಾಂಡ್ ನೀಡಿರುವ ಕೆಲ ಸೂಚನೆಗಳನ್ನು ವಿವರಿಸಿ, ಕೆಲ ಪ್ರಭಾವಿ ಸಚಿವರು ನೇರವಾಗಿ ಬಿಹಾರಕ್ಕೆ ತೆರಳಿ ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳಬೇಕಾಗುತ್ತದೆ ಎಂದು ಸೂಚಿಸಿದರು ಎನ್ನಲಾಗಿದೆ. ಪಕ್ಷಕ್ಕೆ ಬಿಹಾರ ಚುನಾವಣೆ ಮಹತ್ವದ್ದಾಗಿದ್ದು, ಪಕ್ಷ ಸ್ಪರ್ಧಿಸುತ್ತಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲು ನೀವೂ ಸಹ ಕೃಷಿ ಮಾಡಬೇಕು. ಇದಕ್ಕಾಗಿ ಪಕ್ಷ ನೀಡುವ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂದು ಸೂಚಿಸಿದರು ಎನ್ನಲಾಗಿದೆ.
ಸಚಿವರ ಜತೆ ಸಿಎಂ
ಪ್ರತ್ಯೇಕ ಮಾತುಕತೆ
ಔತಣಕೂಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಬ್ಬ ಸಚಿವರೊಂದಿಗೆ ಪ್ರತ್ಯೇಕವಾಗಿ ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಇಲಾಖೆಯ ವಿಚಾರಗಳು ಮಾತ್ರವಲ್ಲದೆ, ಸಂಪುಟ ಪುನಾರಚನೆ ಹಾಗೂ ಬಿಹಾರ ಚುನಾವಣೆ ಸಂಬಂಧವೂ ಕೆಲ ಸೂಚನೆಗಳನ್ನು ನೀಡಿದರು ಎಂದು ಮೂಲಗಳು ಹೇಳಿವೆ.
ಐದು ಸಚಿವರು ಗೈರು
ಈ ಸಭೆಗೆ ಸಚಿವರಾದ ಜಮೀರ್ ಅಹಮದ್‌ಖಾನ್, ಬೋಸರಾಜು, ಸತೀಶ್ ಜಾರಕಿಹೊಳಿ, ಲಕ್ಷ್ಮೀಹೆಬ್ಬಾಳ್ಕರ್, ಮಂಕಾಳವೈದ್ಯ ಅವರು ಪೂರ್ವಾನುಮತಿ ಪಡೆದು ಗೈರಾಗಿದ್ದರು.