ಕನ್ನಡಪ್ರಭ ವಾರ್ತೆ ಪಾವಗಡ
ಗ್ಯಾರೆಂಟಿ ಯೋಜನೆಗೆ ಹಣ ಹೊಂದಿರುವ ಭರದಲ್ಲಿ ಜನರ ಸಮಸ್ಯೆ ಮರೆತಿರುವ ಸರ್ಕಾರ ಎಂಬ ವಿಪಕ್ಷಗಳ ಆರೋಪಕ್ಕೆ ಸಾಕ್ಷಿ ಎಂಬಂತೆ ಪಟ್ಟಣದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಹಣ ಬಿಡುಗಡೆಯಾಗದೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಪೇಚಿಗೆ ಸಿಲುಕಿರುವ ಘಟನೆಗಳು ನಡೆದಿವೆ.ಪ್ರಸಕ್ತ ಸಾಲಿಗೆ ಭೂಸೇನಾ ನಿಗಮದ ವತಿಯಿಂದ ನಗರ ಹಾಗೂ ಗ್ರಾಮೀಣ ಪ್ರಗತಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಸಿಎಂ ಕೋಟಾದ 17.90 ಕೋಟಿ ರು. ಹಣ ಬಿಡುಗಡೆ ವಿಳಂಬವಾದ ಕಾರಣ ಕಾಮಗಾರಿ ನಿರ್ವಹಣೆಗೆ ತೀವ್ರ ಸಮಸ್ಯೆ ಎದುರಾಗಿದೆ.
ಪ್ರಸಕ್ತ ಸಾಲಿಗೆ ಗ್ರಾಮೀಣ ಹಾಗೂ ನಗರದ ಚರಂಡಿ ಸಿಸಿರಸ್ತೆ ಸಮುದಾಯ ಭವನದ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆ ಹಾಗೂ ಮುಜರಾಯಿ ಇಲಾಖೆಗೆ ಸಂಬಂಧಪಟ್ಟಂತೆ ಒಟ್ಟು 19ಕೋಟಿ ವೆಚ್ಚದ ಪ್ರಗತಿ ಕಾಮಗಾರಿಗಳಿಗೆ ಸಿಎಂ ಕೋಟಾದ ಅನುದಾನ ಮೀಸಲಿಡಲಾಗಿದೆ. ಈ ಸಂಬಂಧ ಕಳೆದ4-5 ತಿಂಗಳ ಹಿಂದೆ ಗ್ರಾಮೀಣ ಹಾಗೂ ನಗರದ ಅಗತ್ಯ ಕಾಮಗಾರಿಗಳ ಮಾಹಿತಿಯ ವಿವರ ಪಡೆದ ಶಾಸಕ ಎಚ್.ವಿ.ವೆಂಕಟೇಶ್ ಸರ್ಕಾರ ಹಾಗೂ ಜಿಲ್ಲಾಧಿಕಾರಿ ಅನುಮೋದನೆ ಮೇರೆಗೆ ಕಾಮಗಾರಿಗಳ ಪ್ರಗತಿ ಚಾಲನೆ ನೀಡಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಕಾಮಗಾರಿಯ ನಿರ್ವಹಣೆಯ ಗುತ್ತಿಗೆಯನ್ನು ಭೂಸೇನಾ ನಿಗಮಕ್ಕೆ ವಹಿಸಿದ್ದು, ನಗರ ಹಾಗೂ ಗ್ರಾಮೀಣ ಗಡಿ ಪ್ರದೇಶಗಳಲ್ಲಿ ಸಿಸಿರಸ್ತೆ, ಚರಂಡಿ ಹಾಗೂ ಸಮುದಾಯ ಭವನ ಸೇರಿದಂತೆ ಅನೇಕ ಕಾಮಗಾರಿಗನ್ನು ಕೈಗೊತ್ತಿಕೊಳ್ಳಲಾಗಿದೆ. ಕಾಮಗಾರಿ ನಿರ್ವಹಣೆ ಭೂ ಸೇನಾ ನಿಗಮದ ಅಧಿಕಾರಿಗಳು ಹೊತ್ತಿದ್ದರೂ ಸ್ಥಳೀಯ ಗುತ್ತಿಗೆದಾರರಿಂದ ಕಾಮಗಾರಿಯ ಕೆಲಸ ನಿರ್ವಹಿಸಲಾಗುತ್ತಿದೆ. ಕಾಮಗಾರಿಯ ಗುಣಮಟ್ಟ ಕುರಿತು ಜನಸಾಮಾನ್ಯರ ಟೀಕೆಗಳ ಮಧ್ಯೆಯು ಪ್ರಗತಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ.ಗ್ರಾಮೀಣ ಪ್ರದೇಶದ 2ಕೋಟಿ ಸೇರಿದಂತೆ ನಗರದಲ್ಲಿ ಕಳೆದ ಮೂರು ತಿಂಗಳಿಂದಲೂ ಸಿಎಂ ನಿಧಿ ಅಡಿಯ 17ಕೋಟಿ ವೆಚ್ಚದ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈಗಾಗಲೇ 6ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ಈಗ ಮುಂದಿನ ಕಾಮಗಾರಿ ನಡೆಸಲು ಹಣವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಕಾಮಗಾರಿ ನಿರ್ವಹಣೆಗೆ ತಂದಿದ್ದ ಸಿಮೆಂಟ್, ಜಲ್ಲಿ, ಇತರೆ ಸಾಮಗ್ರಿ, ಜೆಸಿಬಿ ಬಾಡಿಗೆ ಹಾಗೂ ಕೂಲಿಕಾರರಿಗೆ ನೀಡಲು ಹಣವಿಲ್ಲದಂತಾಗಿದ್ದು, ಹಣಕ್ಕಾಗಿ ಭೂಸೇನಾ ಅಧಿಕಾರಿಗಳ ಹಿಂದೆ ಬಿದ್ದಿದ್ದಾರೆ. ಇನ್ನೂ ಕೂಲಿಕಾರರ ಹಾಗೂ ಸಾಮಗ್ರಿ ವಿತರಿಸಿದವರ ಕಾಟದಿಂದಾಗಿ ಗುತ್ತಿಗೆದಾರರು ಈಗಾಗಲೇ ತಲೆ ಮರೆಸಿಕೊಂಡಿದ್ದು ತಮ್ಮ ಪರವಾಗಿ ಓರ್ವರನ್ನು ಪ್ರತಿ ದಿನ ಕಚೇರಿಗೆ ಕಳುಹಿಸಿ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. .ಕೋಟ್..
ಸಿಎಂ ನಿಧಿ ಅಡಿಯ 19ಕೋಟಿ ವೆಚ್ಚದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಅನುಮೋದನೆಯಂತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ಸುಮಾರು 6 ಕೋಟಿಗಿಂತ ಹೆಚ್ಚಿನ ಕಾಮಗಾರಿ ನಿರ್ವಹಿಸಲಾಗಿದೆ. ಆರ್‌ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆ ಸೇರಿ ಒಟ್ಟು 17.90ಕೋಟಿ ಅನುದಾನ ಸರ್ಕಾರ ಬಿಡುಗಡೆ ಮಾಡಬೇಕು. ಸರ್ಕಾರ ಹಣ ಬಿಡುಗಡೆಯಿಂದ ತ್ವರಿತ ಕಾಮಗಾರಿ ನಿರ್ವಹಣೆಗೆ ಹೆಚ್ಚು ಅನುಕೂಲವಾಗಲಿದೆ. - ಮಹದೇವಪ್ಪ ಎಇ, ಭೂ ಸೇನಾ ನಿಗಮ