ಕನ್ನಡಪ್ರಭ ವಾರ್ತೆ, ತುಮಕೂರು
ರಾಜ್ಯದಲ್ಲಿ ತಲೆದೋರಿರುವ ಬರಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಉಪ ಮುಖ್ಯಮಂತ್ರಿ, ಕಂದಾಯ, ಯುವಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಬರಪರಿಸ್ಥಿತಿ ಕುರಿತು ವಿಶೇಷ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರಪರಿಸ್ಥಿತಿ ಎದುರಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಹಾಗೂ ತಾವು ವಿಭಾಗಾವಾರು ಪರಿಶೀಲನಾ ಸಭೆ ನಡೆಸಿದ್ದೇವೆ. ಅಂತೆಯೇ ರಾಜ್ಯದಲ್ಲಿ ತಲೆದೋರಿರುವ ಬರಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪರಿಹಾರ ನೀಡುವಂತೆ ಹಾಗೂ ಬರ ಘೋಷಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ನಿಯಮಗಳನ್ನು ಸಡಿಲಗೊಳಿಸುವಂತೆ ಹಾಗೂ ಬರ ನಿರ್ವಹಣೆಗಾಗಿ ಪರಿಹಾರವನ್ನು ನೀಡುವಂತೆ ಮುಖ್ಯಮಂತ್ರಿ ಅವರು ಹಾಗೂ ತಾವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದರು. ಬರಪರಿಸ್ಥಿತಿಯ ನೆರವಿಗಾಗಿ ರೈತರಿಗೆ ಸಹಾಯಧನ ನೀಡುವುದು ಸೇರಿದಂತೆ ಜಿಲ್ಲೆಯ ಶಾಸಕರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಬರನಿರ್ವಹಣೆ ಕುರಿತು ಬೆಳಗಾವಿ ವಿಭಾಗದಲ್ಲಿ ಈಗಾಗಲೇ ಮುಖ್ಯಮಂತ್ರಿಗಳು ಪರಿಶೀಲನಾ ಸಭೆ ನಡೆಸಿದ್ದು, ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಜುಲೈ 25ರಂದು ಪರಿಶೀಲನಾ ಸಭೆ ನಡೆಸಲಿದ್ದಾರೆ. ನಂತರ ಮೈಸೂರಿನಲ್ಲಿ ಪರಿಶೀಲನಾ ಸಭೆ ನಡೆಸುವರು ಎಂದರು. ಇದಕ್ಕೂ ಮುನ್ನ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಎದುರಾಗಿರುವ ಬರಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಫೆಸಿಫಿಕ್ ಮೇಲ್ಮೈ ಉಷ್ಣತೆಯಲ್ಲಿ ವ್ಯತ್ಯಾಸ, ಸೂಪರ್ ಎಲ್ನಿನೋ ಪರಿಣಾಮದಿಂದ ಪ್ರಕೃತಿ ವಿಕೋಪ ಉಂಟಾಗಿ ಭಾರತದಲ್ಲಿ ಭೀಕರ ಪರಿಸ್ಥಿತಿ ಎದುರಾಗಿದೆಯಲ್ಲದೆ, ಮಳೆ ಪ್ರಮಾಣ ಕಡಿಮೆಯಾಗಿದೆ. 150 ವರ್ಷಗಳ ಹಿಂದೆ 1876ರಲ್ಲಿ ಪ್ರಕೃತಿ ವಿಕೋಪ ಎಲ್ನಿನೋ ಉಂಟಾಗಿತ್ತು. ಈ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಿರುವ ಅಂತಾರಾಷ್ಟ್ರೀಯ ಮಟ್ಟದ ತಜ್ಞರು ಇದನ್ನು ಸೂಪರ್ ಎಲ್ನಿನೋ ಎಂದು ಹೇಳಿದ್ದಾರೆ. ಪ್ರಕೃತಿ ವಿಕೋಪದಿಂದ ಇಡೀ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದರು.
ಮಳೆಯ ಕೊರತೆಯಿಂದ ರಾಜ್ಯದ ಎಲ್ಲ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಕರಾವಳಿ ಪ್ರದೇಶದಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ರಾಜ್ಯದ ಕೆಲವು ಜಲಾಶಯಗಳಿಗೆ ನೀರು ಸಂಗ್ರಹವಾಗಿದ್ದರೂ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸರ್ಕಾರವು ಬರ ಪರಿಸ್ಥಿತಿಯನ್ನು ಅವಲೋಕಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲು ರಾಜ್ಯದಾದ್ಯಂತ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಕೇವಲ ಶೇ.9.34ರಷ್ಟು ಬಿತ್ತನೆಯಾಗಿದೆ. ಪಾವಗಡ ತಾಲೂಕು ಹೊರತುಪಡಿಸಿ ಮಳೆ ಪ್ರಮಾಣ ಕಡಿಮೆಯಾಗಿರುವ ಉಳಿದ ತಾಲ್ಲೂಕುಗಳು ಬರಪೀಡಿತ ತಾಲೂಕುಗಳಾಗುವ ಸಾಧ್ಯತೆಯಿದೆ. ಜಾನುವಾರು ಮೇವಿನ ಸಮಸ್ಯೆ, ಕೂಲಿ ಕೆಲಸದ ಸಮಸ್ಯೆಗಳಿಂದ ಜನ-ಜಾನುವಾರುಗಳು ಗುಳೆ ಹೋಗುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಜಾನುವಾರುಗಳ ಮೇವಿಗಾಗಿ ರೈತರಿಗೆ ಮೇವಿನ ಕಿಟ್‌ಗಳನ್ನು ವಿತರಿಸಲಾಗುವುದು. ಜಿಲ್ಲೆಯಲ್ಲಿರುವ ಕೊಳವೆ ಬಾವಿ, ಕೆರೆ-ಕಟ್ಟೆಗಳು ನೀರಿಲ್ಲದೆ ಬತ್ತಿಹೋಗುತ್ತಿರುವುದರಿಂದ ಗಂಭೀರ ಪರಿಸ್ಥಿತಿ ಉಂಟಾಗಿದೆ ಎಂದರು. ಸರ್ಕಾರದಿಂದ ಕುಡಿಯುವ ನೀರಿನ ಕಾಮಗಾರಿಗಳಿಗೆ ಪ್ರತಿ ಜಿಲ್ಲೆಗೆ 5 ಕೋಟಿ ರು.ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ 3.50ಕೋಟಿ ರು.ಗಳ ಅನುದಾನ ಒದಗಿಸಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಈ ಅನುದಾನವನ್ನು ಬಳಸಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ವಾರಕ್ಕೊಮ್ಮೆ ಟಾಸ್ಕ್ ಫೋರ್ಸ್ ಸಭೆ ನಡೆಸಿ ಕೈಗೊಂಡ ನಿರ್ಣಯಗಳ ಸಭಾ ನಡಾವಳಿಯನ್ನು ಜಿಲ್ಲಾ ಟಾಸ್ಕ್ ಫೋರ್ಸ್ ಶಿಫಾರಸ್ಸು ಮಾಡಬೇಕು. ಜಿಲ್ಲಾಧಿಕಾರಿಗಳು ಅದನ್ನು ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸುವಂತೆ ಸೂಚಿಸಲಾಗಿದೆ. ಟಾಸ್ಕ್ ಫೋರ್ಸ್ ನಲ್ಲಿ ಕೈಗೊಂಡ ನಿರ್ಣಯದಂತೆ ಅದರ ಶಿಫಾರಸ್ಸಿನ ಅನ್ವಯ ಸರ್ಕಾರ ಕ್ರಮವಹಿಸಲಿದೆ ಎಂದು ಅವರು ತಿಳಿಸಿದರು. ನೆರೆಯ ಆಂಧ್ರಪ್ರದೇಶ ರಾಜ್ಯ ಅನಂತಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಈಗಾಗಲೇ ಇಬ್ಬರು ಮೃತಪಟ್ಟಿರುವ ವರದಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗಡಿ ಭಾಗಗಳಲ್ಲಿ ಜಿಲ್ಲೆಗೆ ಪ್ರವೇಶಿಸದಂತೆ ಚೆಕ್‌ಪೋಸ್ಟ್ ತೆರೆಯಲಾಗಿದೆ. ಕೋವಿಡ್ ಪ್ರಕರಣಗಳು ವರದಿಯಾದರೆ ಸೋಂಕಿತರನ್ನು ಕ್ವಾರಂಟೈನ್ ಮಾಡಲು ಈಗಾಗಲೇ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿರುವ ಒಟ್ಟು 341 ಮಳೆ ಮಾಪನ ಕೇಂದ್ರಗಳ ಪೈಕಿ 110 ಕೇಂದ್ರಗಳು ಕೆಟ್ಟು ಹೋಗಿವೆ. ದುರಸ್ತಿಯಲ್ಲಿರುವ ಮಳೆ ಮಾಪನ ಕೇಂದ್ರಗಳ ದತ್ತಾಂಶವನ್ನು ನಂಬಲಾಗದು. ಈ ನಿಟ್ಟಿನಲ್ಲಿ ಕೆಟ್ಟು ಹೋಗಿರುವ ಮಳೆ ಮಾಪನ ಕೇಂದ್ರಗಳನ್ನು ಮೊದಲು ದುರಸ್ತಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಮೇವಿನ ಬೀಜಗಳ ವಿತರಣೆಗೆ ಸಲಹೆ :
ನೀರು ಲಭ್ಯವಿರುವ ರೈತರು ಮೇವು ಬೆಳೆದು ಕೊಡುವುದಾದರೆ ಅವರಿಗೆ ಮೇವಿನ ಬೀಜ ವಿತರಿಸಬೇಕು ಎಂದು ಅವರು ಸಲಹೆ ನೀಡಿದರಲ್ಲದೆ, ಕುಡಿಯುವ ನೀರಿನ ಸಮಸ್ಯೆಯನ್ನು ನಿರ್ವಹಿಸಲು ಈಗಾಗಲೇ ಎಲ್ಲ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ವಿಪತ್ತು ನಿರ್ವಹಣೆಗೆ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಅಧಿಕಾರಿಗಳು ಖರ್ಚು ಮಾಡಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಕೊರೆಯುವ ಕೊಳವೆ ಬಾವಿಗಳಿಗೆ ತಕ್ಷಣವೇ ವಿದ್ಯುತ್ ಸಂಪರ್ಕ ನೀಡಬೇಕು. ಆದ್ಯತೆ ಮೇಲೆ ಕೊಳವೆ ಬಾವಿಗಳನ್ನು ಕೊರೆಯಲು ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ಅನುದಾನದ ಸದ್ಬಳಕೆ ಮಾಡಿಕೊಂಡು ಅಗತ್ಯ ಇರುವೆಡೆ ಕೊಳವೆ ಬಾವಿಗಳನ್ನು ಕೊರೆದು ಸಾರ್ವಜನಿಕರಿಗೆ ಕುಡಿಯುವ ನೀರಿನ ಬವಣೆ ಉಂಟಾಗದಂತೆ ನಿಗಾವಹಿಸಬೇಕು ಎಂದು ಖಡಕ್ ಸೂಚನೆ ನೀಡಿದರು.
ಡೆಂಗಿ ಪ್ರಕರಣಗಳ ವರದಿ-ಫೀವರ್ ಕ್ಲಿನಿಕ್ ತೆರೆಯಲು ಸೂಚನೆ :ಜಿಲ್ಲೆಯ ಪಾವಗಡ ಹಾಗೂ ಮಧುಗಿರಿ ತಾಲೂಕುಗಳಲ್ಲಿ ಡೆಂಗಿ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ 3 ಲ್ಯಾಬ್‌ಗಳನ್ನು ಸಜ್ಜುಗೊಳಿಸಿ, ಫೀವರ್ ಕ್ಲಿನಿಕ್‌ಗಳನ್ನು ತೆರೆಯಲು ಕ್ರಮಕೈಗೊಳ್ಳಬೇಕು. ಕಲುಷಿತ ನೀರಿನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಜನರ ಆರೋಗ್ಯದ ದೃಷ್ಟಿಯಿಂದ ಓವರ್ ಹೆಡ್ ಟ್ಯಾಂಕ್‌ಗಳನ್ನು ಶುಚಿಗೊಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಶಾಸಕರಾದ ಸುರೇಶ್ ಬಾಬು, ರಮೇಶ್ ಬಾಬು, ಡಿ.ಟಿ. ಶ್ರೀನಿವಾಸ್, ಡಾ.ರಂಗನಾಥ್, ಬಿಎಂಟಿಸಿ ಉಪಾಧ್ಯಕ್ಷ ನಿಖೇತ್ ರಾಜ್ ಎಂ, ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.