ತ್ಯಾಜ್ಯ, ವ್ಯಾಜ್ಯಮುಕ್ತ ಗ್ರಾಮಕ್ಕೆ ಸಹಕರಿಸಿ: ನ್ಯಾ. ಮಂಜುನಾಥ

| Published : Oct 03 2024, 01:19 AM IST

ತ್ಯಾಜ್ಯ, ವ್ಯಾಜ್ಯಮುಕ್ತ ಗ್ರಾಮಕ್ಕೆ ಸಹಕರಿಸಿ: ನ್ಯಾ. ಮಂಜುನಾಥ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಜಿ ಬೆಂಚಮಟ್ಟಿ ಗ್ರಾಮವನ್ನು ತ್ಯಾಜ್ಯ ಹಾಗೂ ವ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಮಾಡಲು ತಾಲೂಕಾಡಳಿತ ಪಣ ತೊಟ್ಟಿದ್ದು ಗ್ರಾಮಸ್ಥರು ಸಹಕಾರ ನೀಡಬೇಕು.

ದತ್ತು ಗ್ರಾಮದ ಉದ್ಘಾಟನೆ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ಜಿ ಬೆಂಚಮಟ್ಟಿ ಗ್ರಾಮವನ್ನು ತ್ಯಾಜ್ಯ ಹಾಗೂ ವ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಮಾಡಲು ತಾಲೂಕಾಡಳಿತ ಪಣ ತೊಟ್ಟಿದ್ದು ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶ ಆರ್. ಮಂಜುನಾಥ ಹೇಳಿದರು.

ತಾಲೂಕಿನ ಜಿ ಬೆಂಚಮಟ್ಟಿ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ ಹಾಗೂ ವಕೀಲರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿ ನಿಮಿತ್ತ ನಡೆದ ದತ್ತು ಗ್ರಾಮದ ಉದ್ಘಾಟನೆ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಕನಸು ನನಸಾಗಬೇಕಾದರೆ ಎಲ್ಲ ಗ್ರಾಮಗಳು ಸ್ವಚ್ಛತೆಯಿಂದ ಕೂಡಿರಬೇಕು. ಅಂದಾಗ ಮಾತ್ರ ಅವರ ಕನಸು ನನಸಾಗುತ್ತದೆ. ಈಗ ನಡೆಯುತ್ತಿರುವ ಸ್ವಚ್ಛತಾ ಅಭಿಯಾನದ ಕಾರ್ಯಕ್ರಮವೂ ಒಂದೇ ದಿನಕ್ಕೆ ಸೀಮಿತವಾಗದೆ ದಿನನಿತ್ಯವೂ ಸಹಿತ ಗ್ರಾಮಸ್ಥರೆಲ್ಲರೂ ತಮ್ಮ ಮನೆಯ ಜೊತೆಗೆ ಸುತ್ತಮುತ್ತಲು ಸ್ವಚ್ಛಗೊಳಿಸುವ ಮೂಲಕ ರೋಗ ಮುಕ್ತ ಗ್ರಾಮ ಮಾಡುವಲ್ಲಿ ಮುಂದಾಗಬೇಕು ಎಂದರು.

ಈ ಗ್ರಾಮವನ್ನು ದತ್ತು ಪಡೆದುಕೊಂಡಿದ್ದು ಇಲ್ಲಿಯ ತ್ಯಾಜ್ಯ ಮುಕ್ತವಾಗಬೇಕು ಹಾಗೂ ಇಲ್ಲಿರುವ ಸಣ್ಣಪುಟ್ಟ ವ್ಯಾಜ್ಯಗಳು ಸಹಿತ ಬಗೆಹರಿಸಿಕೊಳ್ಳಬೇಕು. ಇದರ ಸಲುವಾಗಿ ತಾಲೂಕಾಡಳಿತವೂ ಈ ಗ್ರಾಮದ ಅಭಿವೃದ್ಧಿಗಾಗಿ ಮುಂದಾಗಿದ್ದು, ತಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಇತ್ಯರ್ಥಗೊಳಿಸಬೇಕು. ಒಟ್ಟಿನಲ್ಲಿ ಈ ಗ್ರಾಮವನ್ನು ತ್ಯಾಜ್ಯ, ವ್ಯಾಜ್ಯಮುಕ್ತ ಗ್ರಾಮವನ್ನಾಗಿ ನಿರ್ಮಿಸಲು ಅಧಿಕಾರಿಗಳೊಂದಿಗೆ ಕೈ ಜೋಡಿಸುವ ಕೆಲಸ ಮಾಡಬೇಕು ಎಂದರು.

ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ಗ್ರಾಮದಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕು, ಅನಕ್ಷರತೆ ತೊಲಗಬೇಕು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಮುಂದಾಗಬೇಕು. ಸಾರ್ವಜನಿಕರು ಹೆಸರಿಗೆ ಮಾತ್ರ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದು, ಅದನ್ನು ಸದುಪಯೋಗ ಮಾಡುತ್ತಿಲ್ಲ. ಈಗಲೂ ಸಹಿತ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದು, ಇದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ, ವಾತಾವರಣ ಮಲೀನವಾಗುತ್ತದೆ. ಬಯಲಿಗೆ ಹೋಗುವ ಬದಲಿಗೆ ನಿರ್ಮಿಸಿಕೊಂಡ ಶೌಚಾಲಯಗಳನ್ನು ಬಳಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಗ್ರಾಮದ ಅಭಿವೃದ್ಧಿಗಾಗಿ ತಾಲೂಕಾಡಳಿತವು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಂಡು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.

ಈ ಸಂದರ್ಭ ತಾಲೂಕು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ, ಬಿಇಒ ಸುರೇಂದ್ರ ಕಾಂಬಳೆ, ಸಿಡಿಪಿಒ ಯಲ್ಲಮ್ಮ ಹಂಡಿ, ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ, ಪಿಡಿಒ ದಸ್ತಗೀರಸಾಬ ಬಡಿಗೇರ, ಎನ್ಎಸ್ಎಸ್ ಅಧಿಕಾರಿ ಡಾ. ನಾಗರಾಜ ಹೀರಾ, ವಕೀಲರಾದ ಎಚ್.ಬಿ ಕುರಿ, ಅಯ್ಯಪ್ಪ ಪಲ್ಲೇದ, ಪರಸಪ್ಪ ಗುಜಮಾಗಡಿ, ರಾಯನಗೌಡ ಎಲ್., ಮಹಾಂತೇಶ ನಾಯಕ, ಆನಂದ ಡೊಳ್ಳಿನ, ಎಎಸೈ ತಾಯಪ್ಪ ಸೇರಿದಂತೆ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ, ಬೆಂಚಮಟ್ಟಿ ಗ್ರಾಮಸ್ಥರು ಇದ್ದರು. ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಸ್ವಚ್ಛತಾ ಆಂದೋಲನದ ಪ್ರಮಾಣ ವಚನ ಬೋಧಿಸಿದರು. ಸುರೇಶ ಜರಕುಂಟಿ ಸ್ವಾಗತಿಸಿದರು.