ಸಾರಾಂಶ
ಲೋಕಾಪುರ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದ ಕಾಮಗಾರಿಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಧ್ಯಕ್ಷ ಅಶೋಕ ಹಾರನಹಳ್ಳಿ ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಜನವರಿ ೧೮ ಮತ್ತು ೧೯ ರಂದು ೧೧ನೇ ಬ್ರಾಹ್ಮಣ ಮಹಾಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಎಲ್ಲ ವಿಪ್ರ ಬಾಂಧವರು ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಧ್ಯಕ್ಷ ಅಶೋಕ ಹಾರನಹಳ್ಳಿ ಮನವಿ ಮಾಡಿದರು. ಪಟ್ಟಣದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ಕಲ್ಯಾಣ ಮಂಟಪದ ಕಾಮಗಾರಿ ವೀಕ್ಷಿಸಿ ಮತ್ತು ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ವಿಪ್ರ ಸಮಾಜ ಬಾಂಧವರಿಗೆ ವಿತರಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮಾಜದ ಪ್ರತಿಯೊಬ್ಬರು ಐಕ್ಯಮತ್ಯ ಸಾಧಿಸಿ ಇತರ ಧರ್ಮಗಳಿಗೆ ಮಾದರಿಯಾಗಬೇಕು, ಹಾಗೆಯೇ ಧರ್ಮವನ್ನು ಮೊದಲು ಅರಿತು ಇತರರಿಗೆ ಮಾರ್ಗದರ್ಶನ ಮಾಡುವಂತಾಗಬೇಕು. ಆಗ ಇತರ ಸಮಾಜದವರು ಬ್ರಾಹ್ಮಣರನ್ನು ಕೀಳಾಗಿ ಕಾಣುವ ಪ್ರಮೇಯವೇ ಬರುವುದಿಲ್ಲ, ಅಲ್ಲದೇ ನಮ್ಮನ್ನು ರಕ್ಷಣೆ ಮಾಡಿಕೊಳ್ಳುವುದನ್ನು ಕಲಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ನಂತರ ರಾಘವೇಂದ್ರ ಕಲ್ಯಾಣ ಮಂಟಪದ ಕಾಮಗಾರಿಯನ್ನು ವೀಕ್ಷಿಸಿ ಕಾಮಗಾರಿಗೆ ₹೨ ಲಕ್ಷಗಳ ಅನುದಾನವನ್ನು ನೀಡಲು ಸಮ್ಮತಿಸಿದರು. ಈ ವೇಳೆ ಮಹಾಸಭಾ ವಿಪ್ರ ಸಮಾವೇಶದ ರಾಜ್ಯ ಪ್ರಧಾನ ಸಂಚಾಲಕಾರದ ವಿಜಯೇಂದ್ರ ನಾಡಜೋಶಿ, ಸುಧಾಕರ ಬಾಬು, ಕಾರ್ತಿಕ ಬಾಪಟ, ವೆಂಕಟೇಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಬಿ.ಜಿ.ಜೋಶಿ, ಬಿ.ಎಲ್.ಬಬಲಾದಿ, ಬಿ.ಡಿ.ಚಿನಗುಂಡಿ, ಕೃಷ್ಣಾಜಿ ಕುಲಕರ್ಣಿ, ಪ್ರವೀಣ ಸೋಮಾಪುರ, ಆನಂದಚಾರ್ಯ ಜಂಬಗಿ, ಗೋಪಾಲರಾವ ದೇಶಪಾಂಡೆ, ವಿಪ್ರ ಸಮಾಜಬಾಂಧವರು ಇದ್ದರು.ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಹಾಸಮ್ಮೇಳನದಲ್ಲಿ ಭಾಗವಹಿಸಬೇಕು. ಮಹಾಸಮ್ಮೇಳನಕ್ಕೆ ಬರುವ ವಿಪ್ರ ಸಮಾಜ ಬಾಂಧವರಿಗೆ ಎಲ್ಲ ಸೌಕರ್ಯಗಳನ್ನು ನೀಡಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕು. ಅಶೋಕ ಹಾರನಹಳ್ಳಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಧ್ಯಕ್ಷರು.