ದಾಬಸ್‍ಪೇಟೆ: ರಂಗಭೂಮಿ ಜ್ಞಾನ ಹಾಗೂ ಸಂಸ್ಕಾರ ವೃದ್ಧಿಗೆ ಸಹಕಾರಿ ಎಂದು ಚಿತ್ರ ನಟ ವಿನೋದ್ ರಾಜ್ ತಿಳಿಸಿದರು.

ಪಟ್ಟಣದ ವಿಕೇರ್ ಇಂಟರ್ ನ್ಯಾಷನಲ್ ಶಾಲೆ ಹಾಗೂ ಉಲ್ಲಾಸ್ ಮಕ್ಕಳ ರಂಗಭೂಮಿ ಶಾಲೆಯ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಜೂನಿಯರ್ ಡ್ರಾಮಾ ಕ್ಯಾಂಪ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಕಲೆ ಇನ್ನಷ್ಟು ಬೆಳೆಯಬೇಕು. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿದ್ದು ಮಕ್ಕಳಿಗೆ ರಂಗಭೂಮಿಯೇ ಮೆಟ್ಟಿಲು ಇಲ್ಲಿ ಕಲಿತ ಕಲೆ ಮುಂದೆ ಬೆಳ್ಳಿ ತೆರೆ ಹಾಗೂ ಕಿರುತೆರೆ ಮೇಲೆ ರಂಜಿಸುವಂತಾಗಲಿ ಎಂದರು.

ಕರ್ನಾಟಕ ಸಿನಿಮಾ ಹಾಗೂ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್ ಮಾತನಾಡಿ, ಕನ್ನಡ ಸಿನೆಮಾ ರಂಗ ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಸಂಪಾದಿಸಿದ್ದು, ಹೆಸರು ಗಳಿಸಿರುವ ನಟರ ಮೂಲ ರಂಗಭೂಮಿಯೇ ಆಗಿದೆ, ಮಗು ಒಂದು ನಾಟಕವನ್ನು ನೆನಪಿಟ್ಟುಕೊಂಡು ಅಭಿನಯಿಸಿದರೆ ಮುಂದೆ ಶೈಕ್ಷಣಿಕವಾಗಿಯೂ ನೆನಪಿನ ಶಕ್ತಿ ಹೆಚ್ಚಾಗಿ ಜ್ಞಾನವೃದ್ಧಿ ಜೊತೆಗೆ ಕೀಳರಿಮೆ ಹೋಗಲಾಡಿಸಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಇಂತಹ ಕ್ಯಾಂಪ್‍ಗಳು ಸಹಕಾರಿಯಾಗುತ್ತವೆ ಎಂದರು.

ಶಾಲಾ ಸಂಸ್ಥಾಪಕ ಅಂಚೆಮನೆ ರಾಜಶೇಖರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಪಠ್ಯ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ವಿದ್ಯಾರ್ಥಿಗಳು ಆಸಕ್ತಿ ವಹಿಸಲು ವಿಜ್ಞಾನ ವಸ್ತು ಪ್ರದರ್ಶನ, ಕ್ರೀಡೋತ್ಸವದಂತಹ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವಾನಂದ ಸಿಂದಗಿ, ಶಾಲಾ ಕಾರ್ಯದರ್ಶಿ ಸ್ವಣಾಂಬ ರಾಜಶೇಖರ್, ಪ್ರಾಂಶುಪಾಲೆ ಶಿಲ್ಪ ಸೇರಿದಂತೆ ಶಿಕ್ಷಕರು, ಪೋಷಕರು ಇದ್ದರು.