ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ೧೬ನೇ ಪದವಿ ಪ್ರದಾನ ಸಮಾರಂಭ ಅ.೪ರಂದು ಬೆಳಗ್ಗೆ ೧೧ ಗಂಟೆಗೆ ಕಾಲೇಜಿನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲ ಡಾ.ಎನ್.ಎಲ್.ಮುರಳಿಕೃಷ್ಣ ತಿಳಿಸಿದರು.ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅವರು ಅಧ್ಯಕ್ಷತೆ ವಹಿಸುವರು. ಪಿಇಟಿ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್ ಅವರು ಪದವಿ ಪ್ರಮಾಣ ಪತ್ರ ಪ್ರದಾನ ಮಾಡುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಲೇಜಿನ ಪರೀಕ್ಷಾ ನಿಯಂತ್ರಕ ಡಾ.ಡಿ.ಆರ್.ಉಮೇಶ್ ಮಾತನಾಡಿ, ಪ್ರಸಕ್ತ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ೮೦೧ ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದು, ಈ ಪೈಕಿ ಎಂಟು ವಿಭಾಗಗಳಿಂದ ೬೭೩ ಮಂದಿ ಪದವಿ ವಿದ್ಯಾರ್ಥಿಗಳು ಹಾಗೂ ೧೨೮ ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.ಕಾಲೇಜಿನ ಎಲ್ಲ ವಿಭಾಗಗಳಲ್ಲಿ ಕಲಿಯುತ್ತಿರುವ ಶೇ.೧೦ ರಷ್ಟು ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ರ‍್ಯಾಂಕ್ ನೀಡಲಾಗುತ್ತಿದ್ದು, ಪದವಿ ವಿಭಾಗದಲ್ಲಿ ೫೩ ಮಂದಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿಯಲ್ಲಿ ೧೫ ಮಂದಿ ವಿದ್ಯಾರ್ಥಿಗಳು ಸೇರಿದಂತೆ ೬೮ ಮಂದಿ ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸಿದ್ದಾರೆ ಎಂದರು.
ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಟಾಪರ್ಸ್‌ಳಿಗೂ ಚಿನ್ನದ ಪದಕಗಳನ್ನು ವಿತರಿಸಲಾಗುತ್ತಿದ್ದು, ಇದರಲ್ಲಿ ೬ ಮಂದಿ ಪದವಿ ಹಾಗೂ ೫ ಮಂದಿ ಸ್ನಾತಕೋತ್ತರ ಪದವಿ ಪಡೆದವರಿಗೆ ಚಿನ್ನದ ಪದಕಗಳನ್ನು ವಿತರಿಸಲಾಗುತ್ತಿದೆ ಎಂದರು.ಅತಿ ಹೆಚ್ಚು ಅಂಕ ಗಳಿಸಿದ ೯ ಮಂದಿ ವಿದ್ಯಾರ್ಥಿಗಳಿಗೆ ಕಾಲೇಜಿನ ಅಲ್ಯುಮಿನ ಅಸೋಸಿಯೇಷನ್ ವತಿಯಿಂದ ವಿಶೇಷ ಬಹುಮಾನ ನೀಡುತ್ತಿದ್ದು, ೫ ಸಾವಿರ ನಗದು ಬಹುಮಾನವನ್ನು ನೀಡಲಾಗುತ್ತಿದೆ. ೮೦೧ ವಿದ್ಯಾರ್ಥಿಗಳ ಪೈಕಿ ೪೦ಕ್ಕೂ ಹೆಚ್ಚು ಮಂದಿ ಅಂತಾರಾಜ್ಯ ವಿದ್ಯಾರ್ಥಿಗಳೂ ಇದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉಪ ಪ್ರಾಂಶುಪಾಲ ಡಾ. ವಿನಯ್ ಎಸ್, ಉಪ ಡೀನ್ ಅಕಾಡೆಮಿಕ್ ಡಾ. ಗಿರೀಶ್‌ಬಾಬು, ಮಾಧ್ಯಮ ಅಧಿಕಾರಿ ಡಾ. ಕೋದಂಡರಾಮ ಗೋಷ್ಠಿಯಲ್ಲಿದ್ದರು.