ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ಗವಿಮಠದಲ್ಲಿ ಪ್ರತಿ ವರ್ಷದಂತೆ ನಡೆಯುವ ತೆಪ್ಪೋತ್ಸವ ಹಾಗೂ ಶಮಿಪೂಜೆ ಕಾರ್ಯಕ್ರಮದ ಅಂಗವಾಗಿ ಮಠಕ್ಕೆ ಬರುವ ಭಕ್ತಾದಿಗಳಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಮಠದಿಂದ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದ ಬೆಂಗಳೂರಿನ ವಿಜಯ ಸಂಜೆ ಕಾಲೇಜು ಉಪ ಪ್ರಾಂಶುಪಾಲ ಡಾ.ಶಾಂತರಾಜು ಮಾತನಾಡಿ, ಪ್ರತಿಯೊಬ್ಬರೂ ನಾನು ಎನ್ನುವ ಮನೋಭಾವ ಬಿಟ್ಟು ನಾವೂ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಇಂತಹ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವುದರಿಂದ ಸೇವಾ ಮನೋಭಾವ ಮೂಡುತ್ತದೆ. ಪಟ್ಟಣ ಪ್ರದೇಶಗಳ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆಗೆ ಹೆಚ್ಚು ಹಣ ಖರ್ಚು ಮಾಡುವುದನ್ನು ತಪ್ಪಿಸುವುದಕ್ಕಾಗಿ ಈ ಶಿಬಿರವನ್ನು ನಡೆಸಲಾಗುತ್ತಿದೆ ಎಂದರು.
ಶಿಬಿರದಲ್ಲಿ ಕಣ್ಣಿನ ಪರೀಕ್ಷೆಯನ್ನು ಡಾ.ಅಗರ್ವಾಲ್ಸ್ ಐ ಹಾಸ್ಪಿಟಲ್ ವತಿಯಿಂದ ಸುಮಾರು 80 ಹೆಚ್ಚು ಕಣ್ಣಿನ ತಪಾಸಣೆ ನಡೆಸಲಾಗಿದೆ. ವಾಸವಿ ಆಸ್ಪತ್ರೆ ಬೆಂಗಳೂರು ಇವರಿಂದ ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ . ಇದರಲ್ಲಿ ತೊಂದರೆ ಇದ್ದವರಿಗೆ ಆಸ್ಪತ್ರೆಗೆ ಬರುವಂತೆ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ. ನಾವು ಆಸ್ಪತ್ರೆ ವೈದ್ಯರಲ್ಲಿ ನಮ್ಮ ರೈತರು ನಿಮ್ಮ ಬಳಿ ಬಂದಾಗ ನಿಮ್ಮಿಂದ ಎಷ್ಟು ಸಾಧ್ಯವಾಗುತ್ತದೆ ಅಷ್ಟು ಕಡಿಮೆ ವೆಚ್ಚದಲ್ಲಿ ಅವರಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದೇವೆ ಎಂದರು.ಕಾರ್ಯಕ್ರಮಕ್ಕೆ ಬಂದಿದ್ದ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಗವಿಮಠದ ಷಡಕ್ಷರ ಸ್ವಾಮೀಜಿ ಸೇರಿದಂತೆ ಹಲವು ಮಠದ ಸ್ವಾಮೀಜಿಗಳು ಉಪಸ್ಥಿತರಿದ್ದರು.
ಗ್ರಾಮದೇವಿ ಆಯುಧಗಳ ಪೂಜೆ, ಮೆರವಣಿಗೆಕಿಕ್ಕೇರಿ:
ಪಟ್ಟಣದ ಹೊರವಲಯದ ಕಿಕ್ಕೇರಮ್ಮ ದೇಗುಲದಲ್ಲಿ ದೇವಿಯ ವಾಹನ, ಮತ್ತಿತರ ಆಯುಧಗಳ ಪೂಜೆ, ಶ್ರದ್ಧಾಭಕ್ತಿಯಿಂದ ಮೆರವಣಿಗೆ ಮಾಡಲಾಯಿತು.ದೇವಿಗೆ ಆಯುಧಗಳಿಗೆ ಅರಿಷಿಣ, ಕುಂಕುಮಗಳನ್ನು ಆಭರಣ, ವಾಹನಗಳಿಗೆ ಹಚ್ಚಿದರು. ಪುಷ್ಪಗಳನ್ನು ಇಟ್ಟು ಪುಷ್ಪಾರ್ಚನೆ ಮಾಡಿದರು. ಹಣ್ಣು, ಕಾಯಿ, ನೈವೇದ್ಯ ಅರ್ಪಿಸಲಾಯಿತು.
ದೇವಿಯ ಆಯುಧಗಳಾದ ಕತ್ತಿ, ಗುರಾಣಿ ಮತ್ತಿತರರ ಸಾಮಗ್ರಿ, ಕುದುರೆ ವಾಹನ ಮತ್ತಿತರ ವಸ್ತುಗಳನ್ನು ತೊಟ್ಟಿಲಿನಲ್ಲಿ ಪ್ರತಿಷ್ಟಾಪಿಸಿ ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಹೊಸಬೀದಿ, ರಥಬೀದಿ, ಕೋಟೆಗಣಪತಿ ಬೀದಿ, ಕೆ.ಎಸ್. ನರಸಿಂಹಸ್ವಾಮಿ ಬೀದಿ, ಸುಬ್ಬರಾಯರ ಛತ್ರದ ಬೀದಿಗಳಲ್ಲಿ ಸಾಗಿತು. ಭಕ್ತರು, ಮನೆಮಂದಿಗಳು ತೊಟ್ಟಿಲಿನಲ್ಲಿನ ದೇವಿ ವಾಹನ, ಆಯುಧಗಳಿಗೆ ಪೂಜಿಸಿ ನಮಿಸಿದರು.ಹೋಬಳಿಯಾದ್ಯಂತ ವಿವಿಧ ಅಂಗಡಿಗಳಲ್ಲಿ, ರೈತರು ಕೃಷಿ ಪರಿಕರ, ವಾಹನ ಮಾಲೀಕರು ವಾಹನಗಳನ್ನು ಶುಚಿಗೊಳಿಸಿ ಪೂಜಿಸಿ ಮೆರವಣಿಗೆ ಮಾಡಿದರು. ಸಿಹಿ ಹಂಚಿದರು. ಬೂದು ಗುಂಬಳ ಹೊಡೆದು ದೃಷ್ಟಿಪೂಜೆ ನೆರವೇರಿಸಿದರು.