ಮೊಬೈಲ್ ಮನರಂಜನೆ ತ್ಯಜಿಸಿ, ಪುಸ್ತಕ ಜ್ಞಾನ ಸಂಪಾದಿಸಿ: ಎಂ.ವಿ.ಪ್ರಕಾಶ್‌

| Published : Oct 03 2025, 01:07 AM IST

ಮೊಬೈಲ್ ಮನರಂಜನೆ ತ್ಯಜಿಸಿ, ಪುಸ್ತಕ ಜ್ಞಾನ ಸಂಪಾದಿಸಿ: ಎಂ.ವಿ.ಪ್ರಕಾಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕ ಮಕ್ಕಳಿಂದ ಯುವಕರವರೆಗೂ ಎಲ್ಲರಿಗೂ ಮೊಬೈಲ್‌ ಗೀಳು ಅಂಟಿಕೊಂಡಿದೆ. ಅದರಲ್ಲೇ ಸಂಪೂರ್ಣವಾಗಿ ಮುಳುಗಿಹೋಗಿದ್ದಾರೆ. ಓದುವ ಹವ್ಯಾಸವಂತೂ ಮರೆತೇಹೋಗಿದ್ದಾರೆ. ಮಹನೀಯರ ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಅವರ ತತ್ವಾದರ್ಶನ ಪಾಲನೆಗೆ ಪ್ರೇರಣೆ ಸಿಗುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆಧುನಿಕ ಯುಗದಲ್ಲಿ ನವಪೀಳಿಗೆ, ಯುವ ಸಮೂಹ ಎಲ್ಲರೂ ಮೊಬೈಲ್‌ ಮನೋರಂಜನೆಯಲ್ಲಿ ಮುಳುಗಿಹೋಗಿದ್ದಾರೆ. ಕೌಟುಂಬಿಕ, ಭಾವನಾತ್ಮಕ ಸಂಬಂಧಗಳನ್ನು ಮರೆತಿದ್ದಾರೆ. ಮನೋರಂಜನಾ ಜ್ಞಾನಕ್ಕೆ ನೀಡುತ್ತಿರುವ ಆಸಕ್ತಿಯನ್ನು ಪುಸ್ತಕ ಜ್ಞಾನ ಸಂಪಾದಿಸುವ ಕಡೆಗೆ ನೀಡುವುದು ಅಗತ್ಯವಾಗಿದೆ ಎಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್‌ (ನಾಗೇಶ್‌) ತಿಳಿಸಿದರು.

ಗುರುವಾರ ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪತಿ ಮಹಾತ್ಮ ಗಾಂಧಿಯವರ 156ನೇ ಜನ್ಮ ದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಚಿಕ್ಕ ಮಕ್ಕಳಿಂದ ಯುವಕರವರೆಗೂ ಎಲ್ಲರಿಗೂ ಮೊಬೈಲ್‌ ಗೀಳು ಅಂಟಿಕೊಂಡಿದೆ. ಅದರಲ್ಲೇ ಸಂಪೂರ್ಣವಾಗಿ ಮುಳುಗಿಹೋಗಿದ್ದಾರೆ. ಓದುವ ಹವ್ಯಾಸವಂತೂ ಮರೆತೇಹೋಗಿದ್ದಾರೆ. ಮಹನೀಯರ ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಅವರ ತತ್ವಾದರ್ಶನ ಪಾಲನೆಗೆ ಪ್ರೇರಣೆ ಸಿಗುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.

ಮೊಬೈಲ್‌ನಿಂದ ಸೋಮಾರಿತನ ಮತ್ತಷ್ಟು ಹೆಚ್ಚುತ್ತದೆ. ಪುಸ್ತಕ, ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ಬೆಳವಣಿಗೆ ಕಾಣುತ್ತದೆ. ಕ್ರಿಯಾಶೀಲತೆ ಹೆಚ್ಚುತ್ತದೆ. ಓದು ಸಾಧನೆಗೆ ಸ್ಫೂರ್ತಿ ತುಂಬುತ್ತದೆ. ಗಾಂಧೀಜಿ, ಲಾಲ್‌ಬಹದ್ದೂರ್‌ ಶಾಸ್ತ್ರೀ ಅವರ ಸ್ಮರಣೆಯಿಂದ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆ ತಿಳಿಯುತ್ತದೆ. ಅದರಿಂದ ನಾವೂ ಕೂಡ ದೇಶಕ್ಕೆ ಏನಾದರೊಂದು ಕೊಡುಗೆ ನೀಡುವುದಕ್ಕೆ ಸ್ಫೂರ್ತಿ ತುಂಬುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಗಾಂಧೀಜಿ, ಶಾಸ್ತ್ರೀಜಿ ಅವರನ್ನು ನಾವು ಕೇವಲ ಫೋಟೋ, ಪುಸ್ತಕಗಳಿಗೆ ಸೀಮಿತವಾಗಿಡದೆ ಅವರ ಕುರಿತು ನಾವು ಎಷ್ಟು ತಿಳಿದುಕೊಂಡಿದ್ದೇವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು.

ಯುದ್ಧವನ್ನು ಮಾಡದೆ ಶಾಂತಿ, ಸಹನೆ, ಅಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸಿದ ದೇಶವೆಂದರೆ ಅದು ಭಾರತ, ನಮ್ಮ ಮಕ್ಕಳಿಗೆ ಮಹಾತ್ಮ ಗಾಂಧೀಜಿ ಅವರ ಸಾಧನೆಯನ್ನು ತಿಳಿಸಬೇಕು, ಬೇರೆ ಬೇರೆ ದೇಶದ ಜನರು ಗಾಂಧೀಜಿ ಅವರನ್ನು ಮಹಾತ್ಮ ಎಂದು ಕರೆಯುತ್ತಾರೆ. ಭಾರತೀಯರಾದ ನಾವು ಮಹಾತ್ಮ ಗಾಂಧೀಜಿ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ವಿಷಾದಿಸಿದರು

ಹುಟ್ಟಿನಿಂದ ಗಾಂಧೀಜಿ ಮಹಾತ್ಮ ಆಗಲಿಲ್ಲ ಅವರು ಮಾಡಿದ ಸಾಧನೆಗಳಿಂದ ಮಹಾತ್ಮ ಎಂಬ ಬಿರುದು ಪಡೆದರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಬೇಕೆಂದು ಅಂದು ದೇಶದಲ್ಲಿದ್ದ 33 ಕೋಟಿ ಜನರನ್ನು ಸಹ ಅಹಿಂಸಾ ತತ್ವಕ್ಕೆ ಪ್ರೇರೇಪಿಸಿ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಕೀರ್ತಿ ಗಾಂಧೀಜಿ ಅವರಿಗೆ ಸಲ್ಲುತ್ತದೆ. ಅವರನ್ನು ನೆನಪಿಸಿಕೊಳ್ಳುವುದು ಅ.2 ಕ್ಕೆ ಸೀಮಿತವಾಗದೆ ಪ್ರತಿದಿನವೂ ಸ್ಮರಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ದೇಶಕ್ಕೆ ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ ಮಹಾತ್ಮ ಗಾಂಧೀಜಿ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಹೋರಾಟಗಾರರು ಭಾಗವಹಿಸಿದ್ದಾರೆ. ಆದರೂ ಗಾಂಧೀಜಿಯವರನ್ನು ಏಕೆ ನಾವು ಸ್ಮರಿಸುತ್ತೇವೆ ಎಂದರೆ ವಿಭಜನೆಯಾಗಿದ್ದ ಸ್ವಾತಂತ್ರ ಹೋರಾಟಗಾರರನ್ನು ಒಗ್ಗೂಡಿಸಿ ಬ್ರಿಟಿಷರೊಂದಿಗೆ ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಿ ಯಶಸ್ಸು ಕಂಡ ಅಪ್ರತಿಮ ವ್ಯಕ್ತಿ ಎಂದರು.

ಸ್ವಾತಂತ್ರದ ನಂತರ ಅನೇಕ ಪ್ರಧಾನ ಮಂತ್ರಿಗಳನ್ನು ನೋಡಿದ್ದೇವೆ. ಎಲ್ಲ ಪ್ರಧಾನ ಮಂತ್ರಿಗಳಿಗಿಂತ ವಿಭಿನ್ನವಾಗಿ ನಿಲ್ಲುವವರು ಲಾಲ್ ಬಹದ್ದೂರ್ ಶಾಸ್ತ್ರಿ. ಸ್ವಾತಂತ್ರ ಹೋರಾಟದಲ್ಲೂ ಸಹ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಗುರುತಿಸಿಕೊಂಡಿದ್ದರು, ಜವಹರ್ ಲಾಲ್ ನೆಹರು ಕಾಲವಾದ ನಂತರ ದೇಶವನ್ನು ಮುನ್ನಡೆಸುವ ಮುಂದಾಳತ್ವ ವಹಿಸಿ ಪಾಕಿಸ್ತಾನದ ದಾಳಿಯನ್ನು ಎದುರಿಸಿ, ಹಲವಾರು ತುರ್ತು ಸಂದರ್ಭದಲ್ಲಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುದರು ಎಂದರು.

ನಂತರ ವಿವಿಧ ಧರ್ಮಗಳ ಧರ್ಮಗುರುಗಳಾದ ಧರಣೇಂದ್ರಯ್ಯ, ಪದ್ಮನಾಭ‌, ಫಾದರ್ ಜೋಯಿಸನ್, ತನ್ವೀರ್ ಮಾನ್ಸರ್ ಅವುಗಳು ಸರ್ವಧರ್ಮ ಪ್ರಾರ್ಥನೆ ಮಾಡಿದರು. ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಜಿಲ್ಲಾ ವಾರ್ತಾಧಿಕಾರಿ ನಿರ್ಮಲಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್, ಮೇರಾ ಯುವ ಭಾರತ್ ಅಧಿಕಾರಿ ಶೃತಿ, ಪದ್ಮನಾಭ, ಧರಣೀಂದ್ರಯ್ಯ, ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉಸ್ತುವಾರಿ ಸಮಿತಿ ಸದಸ್ಯ ಟಿ.ಸಿ.ಗುರಪ್ಪ ಇತರರಿದ್ದರು.

ವಿಜೇತರ ಪಟ್ಟಿ

ಪ್ರೌಢಶಾಲಾ ವಿಭಾಗ

ಪಾಂಡವಪುರ ತಾಲ್ಲೂಕಿನ ಟಿ.ಎಸ್. ಛತ್ರ ಸರ್ಕಾರಿ ಪ್ರೌಢಶಾಲೆಯ ಮಹಾಲಕ್ಷ್ಮೀ ಪ್ರಥಮ, ಮಂಡ್ಯ ಗ್ಲೋಬಲ್ ಪಬ್ಲಿಕ್ ಶಾಲೆಯ ಕೆ.ಎಸ್‌.ದೀಪ್ತಿಶ್ರೀ ದ್ವಿತೀಯ, ಮದ್ದೂರು ತಾಲ್ಲೂಕಿನ ಪೂರ್ಣಪ್ರಜ್ಞಾ ಶಾಲೆಯ ಎಸ್‌.ಪಿ.ಚಂದನಾ ತೃತೀಯ.

ಪದವಿ ಪೂರ್ವ ಶಿಕ್ಷಣ ವಿಭಾಗ

ಮಂಡ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಮಾಜಿ ಪುರಸಭೆ) ಲಕ್ಷ್ಮೀ ಪ್ರಥಮ, ಮಂಡ್ಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಕಲ್ಲುಕಟ್ಟಡ) ನಿಸರ್ಗ ದ್ವಿತೀಯ, ಕೆ.ಆರ್. ಪೇಟೆ ತಾಲ್ಲೂಕಿನ ಹರಿಹರಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಛಾಯಾವತಿ ತೃತೀಯ.

ಪದವಿ-ಸ್ನಾತಕೋತ್ತರ ಪದವಿ ವಿಭಾಗ

ನಾಗಮಂಗಲ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಕಾಲೇಜಿನ ಬಿ.ಎಸ್‌.ನೇತ್ರಾ ಪ್ರಥಮ, ಮಂಡ್ಯ ಸರ್ಕಾರಿ ಮಹಿಳಾ ಕಾಲೇಜಿನ (ಸ್ವಾಯತ್ತ) ಎಸ್‌.ಯುಕ್ತಿ ದ್ವಿತೀಯ, ಮದ್ದೂರು ತಾಲ್ಲೂಕಿನ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎ.ಎಸ್‌.ಭವಾನಿ ತೃತೀಯ