- ಮೋತಿ ವೀರಪ್ಪ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮ ।

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಇತರ ದೇಶಗಳಂತೆ ಕಠಿಣ ನಿಯಮಗಳನ್ನು ಹೇರಲು ಸಾಧ್ಯವಿಲ್ಲ. ಆದ್ದರಿಂದ ಸಾರ್ವಜನಿಕರೇ ಸ್ವಯಂ ಜವಾಬ್ದಾರಿಯಿಂದ ಜನಸಂಖ್ಯಾ ಸ್ಫೋಟವನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀರಂಗೇಗೌಡ ತಿಳಿಸಿದರು.

ಶುಕ್ರವಾರ ಮೋತಿ ವೀರಪ್ಪ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ-2026 ಕಾರ್ಯಕ್ರಮವನ್ನು ಉದ್ಪಾಟಿಸಿ ಅವರು ಮಾತನಾಡಿದರು.


ಕೇವಲ ಖನಿಜ ಅಥವಾ ನೈಸರ್ಗಿಕ ಸಂಪತ್ತು ಮಾತ್ರ ದೇಶದ ಆಸ್ತಿಯಲ್ಲ. ಯಾವುದೇ ನೈಸರ್ಗಿಕ ಸಂಪತ್ತನ್ನು ಅಂತಿಮ ಉತ್ಪನ್ನವಾಗಿ ಮಾರ್ಪಡಿಸಲು ತಂತ್ರಜ್ಞಾನ ಅಥವಾ ರೋಬೋಟ್‌ಗಳಿದ್ದರೂ, ಮಾನವ ಸಂಪನ್ಮೂಲ ಇರಲೇಬೇಕು. ಆದರೆ, ಅನಾರೋಗ್ಯ ಪೀಡಿತ ಅಥವಾ ಇನ್ನೊಬ್ಬರ ಮೇಲೆ ಅವಲಂಬಿತರಾದ ಜನಸಂಖ್ಯೆ ದೇಶದ ಆಸ್ತಿಯಾಗಲು ಸಾಧ್ಯವಿಲ್ಲ. ಸೂಕ್ತ ವಿದ್ಯಾಹರ್ತೆ ಹಾಗೂ ದೈಹಿಕ ಕ್ಷಮತೆ ಹೊಂದಿರುವ ಸದೃಢ ಮಹಿಳೆಯರು ಮತ್ತು ಪುರುಷರು ತಮ್ಮ ಶ್ರಮದ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಹೆಣ್ಣುಮಕ್ಕಳು ಕೇವಲ ಪೋಷಕರ ಒತ್ತಾಯಕ್ಕೆ ಮಣಿಯದೇ, ಮೊದಲು ಉತ್ತಮ ಶಿಕ್ಷಣ ಪಡೆದು ಯಾವುದಾದರೊಂದು ಗೌರವಾನ್ವಿತ ಹುದ್ದೆ ಅಲಂಕರಿಸಬೇಕು. ಇತ್ತೀಚಿನ ದಿನಗಳಲ್ಲಿ ಉದ್ಯೋಗಸ್ಥರು ಕೆಲಸದ ಒತ್ತಡದಿಂದ ತಡವಾಗಿ ವಿವಾಹವಾಗುತ್ತಿದ್ದಾರೆ. ಮದುವೆಯಾದ ತಕ್ಷಣವೇ ಮಕ್ಕಳು ಬೇಡ ಎಂಬ ತೀರ್ಮಾನದಿಂದಾಗಿ, ವಯಸ್ಸಾದ ನಂತರ ನೈಸರ್ಗಿಕವಾಗಿ ಗರ್ಭಧಾರಣೆಯಾಗಲು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಪುರುಷರಲ್ಲಿ ವೀರ್ಯಾಣುಗಳ ಕೊರತೆ ಮತ್ತು ಮಹಿಳೆಯರಲ್ಲಿ ಅಂಡಾಣುಗಳ ಗುಣಮಟ್ಟ ಕುಸಿಯುತ್ತಿರುವುದು ವರದಿಯಾಗಿದೆ ಎಂದರು.

ಉಚಿತ ಕಾನೂನು ನೆರವಿನ ವ್ಯವಸ್ಥೆಯು ಕೇವಲ ಜಿಲ್ಲಾ ಮಟ್ಟದಲ್ಲಷ್ಟೇ ಅಲ್ಲದೆ, ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಟ್ಟದ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ, ಹಾಗೂ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ವರೆಗೂ ವಿಸ್ತರಿಸಿದೆ. ಬಡತನದ ಕಾರಣದಿಂದಾಗಿ ಯಾರೂ ಕೂಡ ನ್ಯಾಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಮಾತನಾಡಿ, ಆರೋಗ್ಯಕರ ಸಮಯದಲ್ಲಿ ಗರ್ಭಧಾರಣೆ ಮತ್ತು ಮಕ್ಕಳ ನಡುವಿನ ಆರೋಗ್ಯಕರ ಅಂತರ ಕಾಪಾಡುವುದರಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ಧಿಸುವುದರೊಂದಿಗೆ ಅನಗತ್ಯ ಗರ್ಭಧಾರಣೆಗಳನ್ನು ತಡೆಗಟ್ಟಬಹುದು ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ ಈ ಬಾರಿಯ ವಿಶ್ವ ಜನಸಂಖ್ಯಾ ದಿನಾಚರಣೆ 2026 ನ್ನು ಆಚರಿಸುತ್ತಿದ್ದೇವೆ. ಭಾರತವು 1.45 ಬಿಲಿಯನ್ (ಸುಮಾರು 145 ಕೋಟಿ) ಜನಸಂಖ್ಯೆಯೊಂದಿಗೆ ಚೀನಾವನ್ನು ಹಿಂದಿಕ್ಕಿ ಜಗತ್ತಿನಲ್ಲಿಯೇ ಮೊದಲ ಸ್ಥಾನಕ್ಕೆ ಬಂದು ನಿಂತಿದೆ. ನಮ್ಮ ಕರ್ನಾಟಕ ರಾಜ್ಯದ ಜನಸಂಖ್ಯೆಯೇ ಸುಮಾರು 6 ಕೋಟಿಗೂ ಅಧಿಕವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ವಾಸಿಸಲು ಜಾಗದ ಅಭಾವ ಎದುರಾಗುವ ದಿನಗಳು ದೂರವಿಲ್ಲ ಎಂದು ತಿಳಿಸಿದರು.

ವೈದ್ಯಕೀಯ ಹಾಗೂ ಕಾನೂನು ನಿಯಮಗಳ ಪ್ರಕಾರ, ಮಹಿಳೆಯರಲ್ಲಿ 18 ವರ್ಷಗಳವರೆಗೆ ಸಂತಾನೋತ್ಪತ್ತಿ ವ್ಯವಸ್ಥೆ ಅಭಿವೃದ್ಧಿ ಹೊಂದುತ್ತಿರುತ್ತದೆ. ಆದ್ದರಿಂದ, ಕಾನೂನುಬದ್ಧವಾಗಿ ಮಹಿಳೆಯರಿಗೆ 18 ವರ್ಷ ಹಾಗೂ ಪುರುಷರಿಗೆ 21 ವರ್ಷ ತುಂಬಿದ ನಂತರವೇ ಮದುವೆ ಆಗುವುದು ಸೂಕ್ತವಾದ ಸಮಯವಾಗಿದೆ. "ನಾವಿಬ್ಬರು ನಮಗಿಬ್ಬರು " ಅಥವಾ "ಒಬ್ಬರು " ಎನ್ನುವ ಇಂದಿನ ಸಮಾಜದ ಪ್ರಜ್ಞೆಯನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದು ತಿಳಿಸಿದರು.

ಶಿಕ್ಷಣ ಮುಗಿಯುವವರೆಗೆ ಯಾವುದೇ ಗರ್ಭಧಾರಣೆ ಅಥವಾ ವಿವಾಹದ ಆಲೋಚನೆಗಳಿಂದ ಯುವತಿಯರು ದೂರವಿರಬೇಕು. ಆರೋಗ್ಯವಂತ ವಯಸ್ಸಿನಲ್ಲಿ ಗರ್ಭಧಾರಣೆಯಾದರೆ ಹುಟ್ಟುವ ಮಗುವೂ ಆರೋಗ್ಯವಾಗಿರುತ್ತದೆ. ತಡವಾಗಿ ಅಥವಾ ಅವಧಿಗೆ ಮುನ್ನ ಹೆರಿಗೆಯಾದರೆ ಮಕ್ಕಳಲ್ಲಿ ನ್ಯೂನತೆಗಳು ಕಾಣಿಸಿಕೊಳ್ಳಬಹುದು, ಇದರಿಂದ ತಾಯಂದಿರು ಹೆಚ್ಚಿನ ಕಷ್ಟ ಅನುಭವಿಸಬೇಕಾಗುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಸ್.ಮಧು, ವೈದ್ಯಕೀಯ ಅಧೀಕ್ಷಕ ಡಾ.ಸುದೀಪ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಪಾಟೀಲ್, ಪ್ರಾಂಶುಪಾಲ ಪಿ.ನಾಗಪ್ಪ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- - -

(ಕೋಟ್‌) ಬಾಲ್ಯವಿವಾಹ ಮುಕ್ತ ಸಮಾಜ ಹಾಗೂ ನವಜಾತ ಶಿಶುಗಳ ರಕ್ಷಣೆ ಮತ್ತು ವಿವಾಹಕ್ಕೆ 18 ವರ್ಷ ತುಂಬಿರಬೇಕು ಎಂಬ ಕಾನೂನಿದ್ದರೂ ಗ್ರಾಮೀಣ ಭಾಗಗಳಲ್ಲಿ ಇಂದಿಗೂ 14-15 ವರ್ಷಕ್ಕೆ ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ ಮಾಡುತ್ತಿರುವುದು ವಿಷಾದನೀಯ.

- ಶೀಲವಂತ ಶಿವಕುಮಾರ, ಎಡಿಸಿ, ದಾವಣಗೆರೆ.

- - -

-17ಕೆಡಿವಿಜಿ34:

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಶ್ರೀರಂಗೇಗೌಡ ಉದ್ಘಾಟಿಸಿದರು.