ಸಾರಾಂಶ
ನುಗ್ಗೇಹಳ್ಳಿ: ತಾಲೂಕಿನ ರೈತರನ್ನು ಉಳಿಸುವ ಸಲುವಾಗಿ ಸುಮಾರು 40ಕ್ಕೂ ಹೆಚ್ಚು ಕೆರೆಕಟ್ಟೆಗಳಿಗೆ ಏತ ನೀರಾವರಿ ಯೋಜನೆಗಳ ಮೂಲಕ ಪೈಪ್‌ಲೈನ್ ಅಳವಡಿಸಿ ಕೆರೆಗಳನ್ನು ತುಂಬಿಸುವ ಸಲುವಾಗಿ ವೈಯಕ್ತಿಕವಾಗಿ ಹಣ ನೀಡಿ ಯೋಜನೆ ರೂಪಿಸಿದ್ದೇನೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಕಲ್ಕೆರೆ ಕೆರೆಯಿಂದ ಅಯ್ಯಾರಹಳ್ಳಿ ಕೆರೆಗೆ ಪೈಪ್ಲೈನ್ ಮೂಲಕ ನೀರು ಹರಿಸುವ ಯೋಜನೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ನಾನು ಈ ಹಿಂದೆ ಕೊಟ್ಟ ಮಾತಿನಂತೆ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಕಲ್ಕೆರೆ ದೇವಿಗೆರೆ ಕೆ ಚೌಡೇನಹಳ್ಳಿ ಕೆರೆಗಳನ್ನು ತುಂಬಿಸಲಾಗಿದೆ. ಕಲ್ಕೆರೆ ಕೆರೆಯಿಂದ ಅಯ್ಯಾರಹಳ್ಳಿ ಕೆರೆಗೆ ಪೈಪ್ಲೈನ್ ಮೂಲಕ ಮೋಟಾರ್ ಅಳವಡಿಸಿ ನೀರು ತುಂಬಿಸುವ ಸಲುವಾಗಿ ಸುಮಾರು 12 ಲಕ್ಷ ರು. ಹಣವನ್ನು ಖರ್ಚು ಮಾಡಿ ಯೋಜನೆಯನ್ನು ರೂಪಿಸಲಾಗಿದೆ ಇಂದು ಅಧಿಕೃತವಾಗಿ ಯೋಜನೆಗೆ ಚಾಲನೆ ನೀಡಲಾಗಿದೆಎಂದರು.ತಾಲೂಕಿನಲ್ಲಿ ರೈತರನ್ನು ಉಳಿಸುವ ಸಲುವಾಗಿ ವೈಯಕ್ತಿಕವಾಗಿ ಈಗಾಗಲೇ 40ಕ್ಕೂ ಹೆಚ್ಚು ಕೆರೆಕಟ್ಟೆಗಳನ್ನು ತುಂಬಿಸಲು ಪೈಪ್‌ಲೈನ್ ಅಳವಡಿಸಿ ಯೋಜನೆ ರೂಪಿಸಲಾಗಿದೆ ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ವಿರೋಧ ಪಕ್ಷಗಳ ನಾಯಕರ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಬೇಕಾಗಿರುವುದು ತಾಲೂಕಿನ ರೈತರ ಹಿತ. ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸವನ್ನು ನನ್ನ ಮೂರು ಶಾಸಕರ ಅವಧಿಯಲ್ಲಿ ಕೆಲಸ ನಿರ್ವಹಿಸುತ್ತಾ ಬಂದಿದ್ದೇನೆ. ಕೆಲವರ ಬಾಲಿಶ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಸಂಪೂರ್ಣವಾಗಿ ಯಶಸ್ವಿಗೊಂಡಿದ್ದು ಕಳೆದ 6 ವರ್ಷಗಳಿಂದ ಈ ಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಈಗ ಸದ್ಯ ಜಂಬೂರ ಕೆರೆಗೆ ನೀರು ಹರಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ನುಗ್ಗೇಹಳ್ಳಿ ಕೆರೆ ಸಂಪೂರ್ಣವಾಗಿ ಭರ್ತಿಗೊಂಡ ಮೇಲೆ ಚನ್ನನಕಟ್ಟೆಕೆರೆ, ತಾವರೆಕೆರೆ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ತಾಲೂಕಿನಲ್ಲಿ ಈಗಾಗಲೇ ಶೇಕಡಾ 85ರಷ್ಟು ನೀರಾವರಿ ಯೋಜನೆಗಳು ಪೂರ್ಣಗೊಂಡು ಯಶಸ್ವಿಯಾಗಿವೆ ಎಂದರು.ಈ ಸಂದರ್ಭದಲ್ಲಿ ಉದ್ಯಮಿ ಅಣತಿ ಯೋಗೀಶ್, ವಿಎನ್ ಮಂಜುನಾಥ್, ಕಲ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಸು, ಕೃಷಿ ಪತ್ತಿನ ಅಧ್ಯಕ್ಷ ಅಶೋಕ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿಕೆ ಹರೀಶ್, ವಕೀಲ ಡಿಬಿ ಬಸವರಾಜ್, ಉಪನ್ಯಾಸಕ ಯೋಗೀಶ್, ಗುತ್ತಿಗೆದಾರ ಕಿರಣ್, ಕೃಷಿ ಪತ್ತಿನ ನಿರ್ದೇಶಕ ರಮೇಶ್, ಮುಖಂಡರಾದ ಕುಮಾರಸ್ವಾಮಿ, ಹನುಮೇಗೌಡ, ಮರಿಲಿಂಗೇಗೌಡ, ಕೃಷ್ಣೇಗೌಡ ಡಿಸಿ, ತಿಮ್ಮಮ್ಮ, ದೇವಗೆರೆ ಶಿವಣ್ಣ, ಹುಲಿಕೆರೆ ಸಂಪತ್ ಕುಮಾರ್, ಹುಲ್ಲೇನಹಳ್ಳಿ ನಾರಾಯಣ್ ಸೇರಿದಂತೆ ಇತರರು ಹಾಜರಿದ್ದರು.