ಕೃಷಿಕರ ಬದುಕು ಗಟ್ಟಿಗೊಳಿಸುವಲ್ಲಿ ಸಹಕಾರಿ ಸಂಘಗಳ ಪಾತ್ರ ಹಿರಿದು

| Published : Sep 15 2025, 01:00 AM IST

ಕೃಷಿಕರ ಬದುಕು ಗಟ್ಟಿಗೊಳಿಸುವಲ್ಲಿ ಸಹಕಾರಿ ಸಂಘಗಳ ಪಾತ್ರ ಹಿರಿದು
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಕರ ಬದುಕನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸಿದ್ದು, ಸರ್ಕಾರದಿಂದ ನಿರ್ವಹಿಸಲಾಗದ ಬಹುತೇಕ ಕೆಲಸಗಳು ಸಹಕಾರಿ ವ್ಯವಸ್ಥೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದು ಗಮನಾರ್ಹವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ತೀರ್ಥಹಳ್ಳಿ: ಕೃಷಿಕರ ಬದುಕನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸಿದ್ದು, ಸರ್ಕಾರದಿಂದ ನಿರ್ವಹಿಸಲಾಗದ ಬಹುತೇಕ ಕೆಲಸಗಳು ಸಹಕಾರಿ ವ್ಯವಸ್ಥೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದು ಗಮನಾರ್ಹವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.ತೀರ್ಥಹಳ್ಳಿ ತಾಲೂಕಿನ ಶತಮಾನೋತ್ಸವ ವರ್ಷವನ್ನು ಪೂರೈಸಿರುವ ಬಸವಾನಿ ಕೃಷಿ ಪತ್ತಿನ ಸಹಕಾರ ಸಂಘ ತನ್ನ 109ನೇ ವರ್ಷದ ಸವಿನೆನಪಿಗಾಗಿ ನಬಾರ್ಡ್ ನೆರವಿನೊಂದಿಗೆ 2.05 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಸಂಘದ ನೂತನ ಕಟ್ಟಡವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.ರೈತರ ಏಳಿಗೆಗಾಗಿ ಜಾರಿಗೆ ಬಂದಿರುವ ಉಚಿತ ವಿದ್ಯುತ್ ಯೋಜನೆಯ ನಂತರದಲ್ಲಿ ಕೃಷಿ ಚಟುವಟಿಕೆಗೆ ಹೆಚ್ಚಿನ ಉತ್ತೇಜನ ದೊರೆತಿದೆ. ಗ್ರಾಮೀಣ ಬದುಕನ್ನು ಹಸನುಗೊಳಿಸಿರುವ ಸಹಕಾರಿ ವ್ಯವಸ್ಥೆ ಜನರ ವಿಶ್ವಾಸವನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿರುವುದು ಗಮನಾರ್ಹವಾಗಿದೆ. ಸಹಕಾರಿ ವ್ಯವಸ್ಥೆಯ ಈ ಪರಂಪರೆಯ ವಿಶ್ವಾಸರ್ಹತೆ ಮುಂದುವರಿಯಬೇಕಿದೆ ಎಂದು ಹೇಳಿದರು.ವ್ಯಾಪಾರ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಟಿ.ಡಿ.ರಾಜೇಗೌಡ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಮಹಾತ್ಮ ಗಾಂಧಿಯವರ ಕನಸಾಗಿದ್ದು, ಸ್ವಾತಂತ್ರ್ಯ ನಂತರದಲ್ಲಿ ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅದಕ್ಕೆ ಚಾಲನೆ ನೀಡಿದ್ದರು. ಸಹಕಾರಿ ಕ್ಷೇತ್ರದ ಬೆಳವಣಿಗೆಯಿಂದಾಗಿ ದೇಶದ ಹಲವಾರು ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತಿದೆ ಎಂದರು.

ಸಭಾಭವನ ಉದ್ಘಾಟಿಸಿದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ವ್ಯಕ್ತಿ ಮತ್ತು ವಿಶ್ವಾಸರ್ಹತೆಯ ಆಧಾರದಲ್ಲಿ ನಡೆಯುತ್ತಿರುವ ಸಹಕಾರಿ ಕ್ಷೇತ್ರದ ಮೇಲೆ ಸರ್ಕಾರ ಮೀಸಲಾತಿ ಹೇರಿಕೆ ಮಾಡುವ ಮೂಲಕ ಹಸ್ತಕ್ಷೇಪ ಮಾಡಬಾರದು ಎಂದು ಆಗ್ರಹಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಊಟದ ಹಾಲ್ ಉದ್ಘಾಟಿಸಿದರು. ಸಂಘದ ನಿರ್ದೇಶಕ ಬಸವಾನಿ ವಿಜಯದೇವ್ ಅಧ್ಯಕ್ಷತೆ ವಹಿಸಿದ್ದರು.

ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ತಹಸೀಲ್ದಾರ್ ಎಸ್.ರಂಜಿತ್, ಸಂಘದ ಅಧ್ಯಕ್ಷ ಬಿ.ಎನ್.ಸುರೇಶ್, ಭಾಸ್ಕರ ಭಟ್, ಡಾ.ಚಂದನಾ, ನಾಗರಾಜ ಭಟ್, ರವಿ ಕುಪ್ಪಳಿ, ರಮೇಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಸಂದೀಪ್ ಇದ್ದರು.