ಶಿವಮೊಗ್ಗದಲ್ಲಿ ಶೀಘ್ರ ಫೌಂಡ್ರಿ ಕ್ಲಸ್ಟರ್‌ ಸ್ಥಾಪನೆ

| Published : Sep 15 2025, 01:00 AM IST

ಶಿವಮೊಗ್ಗದಲ್ಲಿ ಶೀಘ್ರ ಫೌಂಡ್ರಿ ಕ್ಲಸ್ಟರ್‌ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಅತಿ ಶೀಘ್ರದಲ್ಲಿ ಶಿವಮೊಗ್ಗದಲ್ಲಿ ಫೌಂಡ್ರಿ ಕ್ಲಸ್ಟರ್‌ ಸ್ಥಾಪಿಸಲಾಗುತ್ತಿದ್ದು, ಕ್ಲಸ್ಟರ್‌ ಸ್ಥಾಪನೆಗೆ 21 ಕೋಟಿ ರು. ಕೇಂದ್ರ ಸರ್ಕಾರ ಒದಗಿಸಲಿದೆ ಎಂದು ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಶಿವಮೊಗ್ಗ: ಅತಿ ಶೀಘ್ರದಲ್ಲಿ ಶಿವಮೊಗ್ಗದಲ್ಲಿ ಫೌಂಡ್ರಿ ಕ್ಲಸ್ಟರ್‌ ಸ್ಥಾಪಿಸಲಾಗುತ್ತಿದ್ದು, ಕ್ಲಸ್ಟರ್‌ ಸ್ಥಾಪನೆಗೆ 21 ಕೋಟಿ ರು. ಕೇಂದ್ರ ಸರ್ಕಾರ ಒದಗಿಸಲಿದೆ ಎಂದು ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಮಾಚೇನಹಳ್ಳಿ ಕೈಗಾರಿಕಾ ವಲಯಕ್ಕೆ ಭಾನುವಾರ ಭೇಟಿ ನೀಡಿ ಕೈಗಾರಿಕೋದ್ಯಮಿಗಳು, ಕಾರ್ಮಿಕರ ಜೊತೆ ಮಾತನಾಡಿದ ಅವರು, 2.5 ಕೋಟಿ ರು. ಗಿಂತಲು ಹೆಚ್ಚು ವಹಿವಾಟು ನಡೆಸುವ ಉದ್ದಿಮೆಗಳು ಸೂಕ್ಷ್ಮ ಕೈಗಾರಿಕೆ ವಿಭಾಗದಿಂದ ಹೊರಗುಳಿಯುತ್ತವೆ. ಇದರಿಂದ ಹಲವರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ಮಾನದಂಡ ಬದಲು ಮಾಡುವಂತೆ ಮನವಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಂಎಸ್‌ಎಂಇಗಳ ವರ್ಗೀಕರಣ ಮಾಡಲಾಗುತ್ತದೆ ಎಂದು ಹೇಳಿದರು.

ದೇಶಾದ್ಯಂತ ಉದ್ದಿಮೆಗಳ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಒಂದೇ ಬಗೆಯ ಉದ್ದಿಮೆಯನ್ನು ನಡೆಸುತ್ತಿರುವವರು ಒಂದೇ ಕಡೆಯಲ್ಲಿ ಕಾರ್ಯನಿರ್ವಹಣೆ ಮಾಡುವಂತಾಗಬೇಕು ಎಂಬುದು ಇದರ ಉದ್ದೇಶ. ಅಸಂಘಟಿತ ಕಾರ್ಮಿಕರಿಗೂ ಇಎಸ್‌ಐ, ಪಿಎಫ್‌ ಸೌಲಭ್ಯ ದೊರೆಯಬೇಕು ಎಂಬುದು ಕೇಂದ್ರ ಸರ್ಕಾರದ ಯೋಚನೆ. ಆದರೆ, ಬ್ರಿಟೀಷ್‌ ಕಾಲದ ಕಾನೂನುಗಳಲ್ಲಿ ಇದಕ್ಕೆ ಅವಕಾಶವಿಲ್ಲ. ಬ್ರಿಟೀಷರು ಕಾರ್ಮಿಕರನ್ನು ಗುಲಾಮರು ಎಂಬಂತೆ ಭಾವಿಸಿದ್ದರು. ಇದೇ ಕಾರಣಕ್ಕೆ ಆ ಕಾಯ್ದೆಗಳನ್ನು ಬದಲಿಸಲಾಗುತ್ತಿದೆ. ಇವತ್ತಿನ ಪರಿಸ್ಥಿತಿಗೆ ಅನುಗುಣವಾಗಿ ಕಾನೂನು ಸಿದ್ಧಪಡಿಸಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೂ ಅನುಕೂಲವಾಗಲಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕೊಡೇಸ್‌ ಕಂಪನಿಯ ಜಮೀನು ಖಾಲಿ ಉಳಿದಿದೆ. ಇದರ ಸದುಪಯೋಗಕ್ಕೆ ಗಮನ ಹರಿಸಬೇಕು. ಪ್ರತಿ ವರ್ಷ ಏಳು ಲಕ್ಷ ಟನ್‌ ವೇಸ್ಟ್‌ ಸ್ಯಾಂಡ್‌ ಶುದ್ಧೀಕರಣ ಮಾಡಲಾಗುವುದು. ಇಲ್ಲಿ ಸ್ಕಿಲ್‌ ಡೆವಲಪ್‌ಮೆಂಟ್‌ ಸೆಂಟರ್‌ ಸ್ಥಾಪಿಸಲಾಗಿದೆ. ಇದರಿಂದ ಉದ್ದಿಮೆಗಳಿಗೆ ಅನುಕೂಲವಾಗುತ್ತಿದೆ ಎಂದರು.

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಸಂಘದ ಅಧ್ಯಕ್ಷ ಬೆನಕಪ್ಪ ಮಾತನಾಡಿ, ವೇಸ್ಟ್‌ ಸ್ಯಾಂಡ್‌ ಮರುಬಳಕೆ ಮಾಡುವ ಯೋಜನೆ ಸಿದ್ಧಪಡಿಸಬೇಕು. ಕ್ಲಸ್ಟರ್‌ಗೆ ₹30 ಕೋಟಿ ರು. ವೆಚ್ಚವಾಗಲಿದೆ. ₹ 21 ಕೋಟಿಯನ್ನು ಕೇಂದ್ರ ಸರ್ಕಾರ, ₹4 ಕೋಟಿಯನ್ನು ರಾಜ್ಯ ಸರ್ಕಾರ ಭರಿಸಲಿದೆ. ಉಳಿಕೆ ಹಣವನ್ನು ಕ್ಲಸ್ಟರ್‌ ಸದಸ್ಯರು ತೊಡಗಿಸಬೇಕು. ಕ್ಲಸ್ಟರ್‌ಗೆ ಕೇಂದ್ರ ಸರ್ಕಾರ ಬೇಗ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಉದ್ಯಮಿ ಎಸ್‌.ರುದ್ರೇಗೌಡ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ರಮೇಶ್ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮತ್ತಿತರರಿದ್ದರು.