ಇಂದು ಸಹಕಾರ ಸಪ್ತಾಹ ಸಮಾರೋಪ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

| Published : Nov 20 2025, 12:30 AM IST

ಇಂದು ಸಹಕಾರ ಸಪ್ತಾಹ ಸಮಾರೋಪ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ: ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದ ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ. ೨೦ರಂದು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಬುಧವಾರ ಸಿದ್ದತೆ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಗುರುವಾರ ಚಾಮರಾಜನಗರದಲ್ಲಿ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

ನ. 20ರ ಬೆಳಗ್ಗೆ 11 ಗಂಟೆಗೆ ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಮಾರೋಪ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಶುಸಂಗೋಪನೆ, ರೇಷ್ಮೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ , ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ. ದೇವೇಗೌಡ ಭಾಗವಹಿಸಲಿದ್ದಾರೆ.

ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವ ನಾವೀನ್ಯತೆಯ ಸಹಕಾರಿ ವ್ಯವಹಾರ ಮಾದರಿಗಳು ವಿಷಯ ಕುರಿತು ಡಾ. ಕೆ.ಪಿ. ರಮೇಶ್ ಉಪನ್ಯಾಸ ನೀಡಲಿದ್ದು ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.

25ಸಾವಿರಕ್ಕು ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು 25 ಸಾವಿರ ಆಸನ ವ್ಯವಸ್ಥೆ ಹಾಗೂ ಜರ್ಮನ್ ಟೆಂಟ್‌ನಿಂದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದ್ದು 25 ಸಾವಿರ ಮಂದಿಗೆ ಪಲಾವ್ ಹಾಗೂ ಮೊಸರನ್ನ, 25 ಸಾವಿರ ಮಜ್ಜಿಗೆ ಪ್ಯಾಕೇಟ್ ಹಾಗೂ ವಾಟರ್ ಬಾಟಲ್ ವ್ಯವಸ್ಥೆ ಮಾಡಲಾಗಿದೆ. ಚಾಮರಾಜನಗರದ ಬಗ್ಗೆ ವಿಶೇಷ ಮಮತೆ ಇಟ್ಟುಕೊಂಡಿರುವ ಸಿದ್ದರಾಮಯ್ಯ ಮೊದಲ ಸಿಎಂ ಅವಧಿಯಲ್ಲಿ 17 ಕ್ಕೂ ಅಧಿಕ ಬಾರಿ ಭೇಟಿ ಕೊಟ್ಟಿದ್ದರು. ಎರಡನೇ ಅವಧಿಯಲ್ಲಿ ಇದು ಮುಂದುವರಿದಿದೆ. ಒಟ್ಟಾರೆ ಸಿದ್ದರಾಮಯ್ಯ ಸಿಎಂ ಅವಧಿಯಲ್ಲಿ 20 ಕ್ಕೂ ಅಧಿಕ ಬಾರಿ ಗಡಿಜಿಲ್ಲೆಗೆ ಭೇಟಿ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಿಂದ ಸಿದ್ದತೆಗಳ ಪರಿಶೀಲನೆ

ಚಾಮರಾಜನಗರ: ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದ ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ. ೨೦ರಂದು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಬುಧವಾರ ಸಿದ್ದತೆ ಪರಿಶೀಲಿಸಿದರು.

ಸಮಾರೋಪ ಸಮಾರಂಭ ಆಯೋಜನೆಯಾಗಿರುವ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಬೃಹತ್ ವೇದಿಕೆ, ನೆರಳಿನ ವ್ಯವಸ್ಥೆ, ಗಣ್ಯರ ಆಸನಗಳು, ಸಭಿಕರ ಆಸನಗಳು, ಬ್ಯಾರಿಕೇಡ್ ಅಳವಡಿಕೆ, ಉಪಹಾರ, ಕುಡಿಯುವ ನೀರು ವಿತರಣೆಗಾಗಿ ನಿರ್ಮಿಸಲಾಗಿರುವ ಕೌಂಟರ್‌ಗಳು, ಆರೋಗ್ಯ ಸಿಬ್ಬಂದಿ ನಿಯೋಜನೆ, ಭದ್ರತಾ ವ್ಯವಸ್ಥೆಗಳನ್ನು ವೀಕ್ಷಿಸಿದರು.

ಸಮಾರಂಭದ ಸ್ಥಳದ ಪಕ್ಕದಲ್ಲಿಯೇ ಸಾರ್ವಜನಿಕರಿಗಾಗಿ ಉಪಹಾರ ಸಿದ್ದಪಡಿಸಲು ಮಾಡಿರುವ ವ್ಯವಸ್ಥೆ ಸಂಪೂರ್ಣವಾಗಿ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ಸಚಿವರು ನೀಡಿದರು.

ಮುಖ್ಯಮಂತ್ರಿ, ಗಣ್ಯರು ಬರಲಿರುವ ಮಾರ್ಗಗಳು, ಸಾರ್ವಜನಿಕರು ಪ್ರವೇಶಿಸುವ ಮುಖ್ಯ ದ್ವಾರ, ವಾಹನಗಳ ನಿಲುಗಡೆ, ಗಣ್ಯರ ಊಟೋಪಾಚಾರಕ್ಕೆ ಕೈಗೊಂಡಿರುವ ವ್ಯವಸ್ಥೆ ವೀಕ್ಷಿಸಿ ಸೂಕ್ತ ಮಾರ್ಗದರ್ಶನ ಮಾಡಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೆಂಕಟೇಶ್ ಅವರು, ಸಮಾರಂಭಕ್ಕೆ ಅಂದಾಜು ೩೦ರಿಂದ ೪೦ ಸಾವಿರ ಜನರು ಬರುವ ನಿರೀಕ್ಷೆಯಿದೆ. ಈಗಾಗಲೇ ೨೫ ಸಾವಿರ ಆಸನಗಳನ್ನು ಹಾಕಲಾಗಿದೆ. ಇನ್ನೂ ೧೦ ಸಾವಿರ ಜನರಿಗೆ ಆಗುವಷ್ಟು ಹೆಚ್ಚುವರಿ ಆಸನಗಳನ್ನು ಇಟ್ಟುಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಬರುವ ಜನರಿಗೆ ಉಪಹಾರ, ಕುಡಿಯುವ ನೀರು, ಹಾಲು ಒಕ್ಕೂಟದಿಂದ ಮಜ್ಜಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ನಂತರವ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳೊಂದಿಗೆ ಕಾರ್ಯಕ್ರಮ ಸಂಬಂಧ ಸಮಾಲೋಚನೆ ನಡೆಸಿದರು.

ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ವಿ. ಚಂದ್ರು, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷರಾದ ಎಚ್.ಎಸ್. ನಂಜುಂಡಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ತಹಸೀಲ್ದಾರ್‌ ಗಿರಿಜಾ, ಇತರರು ಇದ್ದರು.