ಮೀಸಲಾತಿ ಪ್ರಮಾಣ 75%ಗೆ ಹೆಚ್ಚಿಸಲು ಆಸಕ್ತಿ: ಸಿಎಂ

| Published : Nov 20 2025, 12:30 AM IST

ಸಾರಾಂಶ

ರಾಜ್ಯದಲ್ಲಿ ನಡೆಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು(ಜಾತಿ ಸಮೀಕ್ಷೆ) ಒಪ್ಪಿಕೊಂಡು ಜಾರಿ ಮಾಡಲು ನಮ್ಮ ಸರ್ಕಾರ ಸಿದ್ಧವಿದೆ. ಜೊತೆಗೆ ಮೀಸಲಾತಿ ಪ್ರಮಾಣವನ್ನು ಶೇ.70-75ಕ್ಕೆ ಹೆಚ್ಚಿಸುವ ಆಸಕ್ತಿಯೂ ನಮಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ನಡೆಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು(ಜಾತಿ ಸಮೀಕ್ಷೆ) ಒಪ್ಪಿಕೊಂಡು ಜಾರಿ ಮಾಡಲು ನಮ್ಮ ಸರ್ಕಾರ ಸಿದ್ಧವಿದೆ. ಜೊತೆಗೆ ಮೀಸಲಾತಿ ಪ್ರಮಾಣವನ್ನು ಶೇ.70-75ಕ್ಕೆ ಹೆಚ್ಚಿಸುವ ಆಸಕ್ತಿಯೂ ನಮಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಎಲ್‌.ಜಿ.ಹಾವನೂರು ವರದಿಯ ಸುವರ್ಣ ಮಹೋತ್ಸವ’ ಉದ್ಘಾಟಿಸಿ ಮಾತನಾಡಿದರು.

ನನಗೂ ಈ ಕೆಟ್ಟ ಜಾತಿ ವ್ಯವಸ್ಥೆ, ನಿಂದನೆ, ಅಸಮಾನತೆ, ಹಸಿವು ಎಲ್ಲವುಗಳ ಅನುಭವವಿದೆ. ಹಾಗಾಗಿ ನಾನು ರಾಜಕೀಯದಲ್ಲಿ ಇರುವವರೆಗೂ, ನನ್ನ ಕೊನೆಯ ಉಸಿರಿರುವವರೆಗೂ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತೇನೆ. ಮೊದಲು ಮುಖ್ಯಮಂತ್ರಿ ಆಗಿದ್ದಾಗ ಪರಿಶಿಷ್ಟರು, ಹಿಂದುಳಿದವರು, ಬಡವರ ಕಲ್ಯಾಣಕ್ಕಾಗಿ ಅನೇಕ ಭಾಗ್ಯ ಯೋಜನೆಗಳನ್ನು ಕೊಟ್ಟಿದ್ದೆ. ಈಗ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇನೆ. ಸಮಾನತೆಯ ಸಮಾಜ ನಿರ್ಮಾಣ ಆಗಬೇಕು. ಅದಕ್ಕಾಗಿ ನಾವೆಲ್ಲ ಪ್ರಯತ್ನ ಮಾಡೋಣ. ಈ ನಿಟ್ಟಿನಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಒಪ್ಪಿಕೊಂಡು ಜಾರಿಗೊಳಿಸಲು ನಮ್ಮ ಸರ್ಕಾರ ಸಿದ್ಧವಿದೆ. ಮೀಸಲಾತಿ ಪ್ರಮಾಣವನ್ನೂ ಶೇ.70-75ಕ್ಕೆ ಹೆಚ್ಚಿಸುವ ಆಲೋಚನೆಯೂ ಇದೆ. ಸರ್ಕಾರಿ ವ್ಯವಸ್ಥೆಯಲ್ಲಿ ಮಾತ್ರ ಮೀಸಲಾತಿ ಇದ್ದರೆ ಸಾಲದು, ಖಾಸಗಿ ವ್ಯವಸ್ಥೆಯಲ್ಲೂ ಮೀಸಲಾತಿ ಇರಬೇಕು ಎಂದು ಅವರು ಪ್ರತಿಪಾದಿಸಿದರು.

ಕಳೆದ ಚುನಾವಣೆ ವೇಳೆ ನಡೆಸಿದ ಪಾದಯಾತ್ರೆಯಿಂದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಜಾತಿ ವ್ಯವಸ್ಥೆ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿತು. ಅವರಿಗೆ ಸ್ಪಷ್ಟತೆ ಇರುವುದರಿಂದಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಜಾತಿ ಗಣತಿ ನಡೆಸುವಂತೆ ಮಾಡಿದ್ದಾರೆ. ಇತ್ತೀಚಿನ ಭೇಟಿ ವೇಳೆ ಅವರು ಕರ್ನಾಟಕದಲ್ಲಿ ನಡೆಯುತ್ತಿದ್ದ ಜಾತಿ ಸಮೀಕ್ಷೆ ಏನಾಯ್ತು? ಎಂದು ಕೇಳಿದರು. ಈ ತಿಂಗಳ ಕೊನೆಗೆ ಮುಗಿಯಬಹುದು ಎಂದು ಹೇಳಿದ್ದೇನೆ. ನಮ್ಮ ಸರ್ಕಾರ ಕೂಡ ಈ ಗಣತಿಯನ್ನು ಒಪ್ಪಿಕೊಂಡು ಜಾರಿ‌ಮಾಡಲು ಬದ್ಧವಾಗಿದೆ ಎಂದು ಸಿಎಂ ತಿಳಿಸಿದರು.