ಸಾರಾಂಶ
ಹಿರೇಕೆರೂರು: ಸಹಕಾರಿ ರಂಗ ಮತ್ತು ಪಂಚಾಯತರಾಜ್ ವ್ಯವಸ್ಥೆ ಉತ್ತಮವಾಗಿ ಆಡಳಿತ ನಿರ್ವಹಿಸಿದಾಗ ಮಹಾತ್ಮ ಗಾಂಧೀಜಿ ಅವರ ರಾಮರಾಜ್ಯದ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ಗುರುಭವನದಲ್ಲಿ ಏರ್ಪಡಿಸಿದ್ದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರಿಗೆ ಸಕಾಲಕ್ಕೆ ಸಾಲ ಸಿಗಲಿ ಎಂಬ ಸುದುದ್ದೇಶದಿಂದ ಹಿರಿಯರು ಸ್ಥಾಪಿಸಿದ ಪಿಎಲ್‌ಡಿ ಬ್ಯಾಂಕಿನ ಉದ್ದೇಶ ಸಫಲವಾಗಬೇಕು. ಸಹಕಾರ ಕ್ಷೇತ್ರ ರೈತರಿಗೆ ಕಾಮಧೇನು ಇದ್ದಂತೆ. ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಹಿರಿಯರ ಆಶಯ ಈಡೇರುತ್ತದೆ. ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಇನ್ನು ಉತ್ತಮವಾಗಿ ಕಾರ್ಯನಿರ್ವಹಿಸಿ ರೈತರಿಗೆ ಇನ್ನು ಹೆಚ್ಚಿನ ಅನುಕೂಲ ಕಲ್ಪಿಸುವಂತಾಗಬೇಕು ಎಂದರು.ಈಗಾಗಲೇ ರಟ್ಟೀಹಳ್ಳಿಯಲ್ಲಿ ಪಿಎಲ್‌ಡಿ ಬ್ಯಾಂಕ್ ತನ್ನ ಕಾರ್ಯವನ್ನು ಪ್ರಾರಂಭಿಸಿದ್ದು, ರಟ್ಟೀಹಳ್ಳಿ ತಾಲೂಕು ವ್ಯಾಪ್ತಿಯ ಶೇರುದಾರರನ್ನು ಸಂಪೂರ್ಣವಾಗಿ ಆ ಬ್ಯಾಂಕಿಗೆ ಸೇರಿಸುವ ಕಾರ್ಯವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ ಪುಟ್ಟಪ್ಪಗೌಡ್ರ, ಬ್ಯಾಂಕ್ ತಾಲೂಕಿನ ರೈತರ ಸಮುದಾಯಕ್ಕೆ ಹಾಗೂ ಜನತೆಗೆ ಕೃಷಿ, ಕೈಗಾರಿಕೆ ಮತ್ತು ಸಣ್ಣ ಸಾರಿಗೆ ವಾಹನ, ದ್ವಿಚಕ್ರ ವಾಹನಗಳಿಗೆ ಅಲ್ಲದೇ ರೈತ ಸಮುದಾಯಕ್ಕೆ ಗೋದಾಮು ಕಟ್ಟಲು, ಟ್ರ್ಯಾಕ್ಟರ್ ಸಾಲಗಳು ಹಾಗೂ ವಿವಿಧ ತರಹದ ಸಾಲಗಳನ್ನು ಈ ಸಂಸ್ಥೆ ಪೊರೈಸುತ್ತಾ ಬಂದಿದೆ. ಬ್ಯಾಂಕ್‌ನ ಒಟ್ಟು ಶೇರು ಬಂಡವಾಳ ₹ ೨೪೮.೩೧ ಲಕ್ಷ, ಕಾಯ್ದಿರಿಸಿದ ನಿಧಿ ₹ ೪೯.೩೭ ಲಕ್ಷ, ಇತರೆ ನಿಧಿ ₹ ೨೨೪.೯೬ ಲಕ್ಷ ಇವೆ. ಬ್ಯಾಂಕ್‌ನ ದೀರ್ಘಾವಧಿ ಸಾಲ ₹ ೯೨೦.೫೫ ಲಕ್ಷ ಆಗಿದ್ದು, ವರದಿ ವರ್ಷದಲ್ಲಿ ₹ ೧೬೭.೪೩ ಲಕ್ಷ ದೀರ್ಘಾವಧಿ ಸಾಲ ನೀಡಲಾಗಿದೆ. ಒಟ್ಟಾರೆ ಶೇ.೭೬.೦೫ ಸಾಲ ವಸೂಲಾತಿಯಾಗಿದೆ. ₹ ೧೯.೫೨ ಲಕ್ಷ ಕ್ರೋಢೀಕೃತ ಲಾಭ ಹೊಂದಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಭೀಮಪ್ಪ ದೊಡ್ಡಗೌಡ್ರ, ವ್ಯವಸ್ಥಾಪಕ ಕರಬಸಪ್ಪ ಭಜಂತ್ರಿ, ನಿರ್ದೇಶಕರಾದ ಮಂಜಪ್ಪ ಗಿಡ್ಡಣ್ಣನವರ, ಷಣ್ಮುಖಯ್ಯ ಮಳಿಮಠ, ಮಲ್ಲಿಕಾರ್ಜುನ ಬುರಡೀಕಟ್ಟಿ, ಗಣೇಶಗೌಡ ಪಾಟೀಲ, ಜಗದೀಶ ಕಡೇಮನಿ, ಸುಶೀಲಾ ಕಾರಗಿ, ಆನಂದಪ್ಪ ಹಾದಿಮನಿ, ಸಂತೋಷ ಬಾಸೂರ, ಕರಿಯಪ್ಪ ದೊಡ್ಡಕ್ಕನವರ, ತ್ಯಾಗರಾಜ ಹರಿಜನ ಬ್ಯಾಂಕ್ ಸಿಬ್ಬಂದಿಗಳಾದ ಜೆ.ಬಿ. ಕೋರಿ, ಎಸ್.ಸಿ. ಬಾರ್ಕಿ, ಜೆ.ಎ. ಜಮಖಾನಿ, ಎಂ.ಆರ್. ಹನುಮಂತಗೌಡ್ರ, ಪವಿತ್ರಾ ಶಿರಸಂಗಿ, ಮೋಹನ ಜಾಲಿಮರದ ಸೇರಿದಂತೆ ಸದಸ್ಯರು ಹಾಜರಿದ್ದರು.