ಬೆಳಗಾವಿಯ ಸುವರ್ಣಸೌಧದಲ್ಲಿ ಬುಧವಾರ ಕೋರ್ಟ್ ವೃತ್ತದಿಂದ ನಿರ್ಮಾಣವಾಗುತ್ತಿರುವ ಪ್ಲೈಓವರ್‌ನ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಯಿತು.

ಸುವರ್ಣಸೌಧ: ಹುಬ್ಬಳ್ಳಿ ಕೋರ್ಟ್‌ ವೃತ್ತದಿಂದ ನಿರ್ಮಾಣವಾಗುತ್ತಿರುವ ಫ್ಲೈಓವರ್‌ ಸಂಬಂಧಿಸಿದಂತೆ ಪರಿಷ್ಕೃತ ಪ್ರಸ್ತಾವನೆಯನ್ನು ಜನವರಿ ಅಂತ್ಯದೊಳಗೆ ನೀಡುವಂತೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಧಿಕಾರಿ ವರ್ಗಕ್ಕೆ ಸೂಚಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಪ್ಲೈಓವರ್ ನಿರ್ಮಾಣದ ಕುರಿತು ಏರ್ಪಡಿಸಿದ್ದ ಪ್ರಾತ್ಯಕ್ಷಿಕೆ ವೀಕ್ಷಿಸಿ ಬಳಿಕ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೋರ್ಟ್ ವೃತ್ತದಿಂದ ನಿರ್ಮಾಣವಾಗುತ್ತಿರುವ ಪ್ಲೈಓವರ್‌ನ್ನು ದೇಸಾಯಿ ಕ್ರಾಸ್‌ ವರೆಗೆ ಮುಂದುವರೆಸಬೇಕೋ, ಸದ್ಯ ಅಲ್ಲಿರುವ ಅಂಡರ್‌ ಪಾಸನ್ನು ತೆಗೆದು ಹಾಕಿ ಈ ಹಿಂದೆ ಇದ್ದಂತೆ ರಸ್ತೆ ನಿರ್ಮಿಸಬೇಕೋ ಎಂಬುದರ ಕುರಿತು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಯಿತು.

ರಸ್ತೆ ವ್ಯವಸ್ಥೆ ಸರಿಯಾಗಿಲ್ಲದೇ ಈ ಪ್ರದೇಶದ ಜನರು ಅನೇಕ ತೊಂದರೆಗಳಿಂದಾಗಿ ಹೈರಾಣಾಗಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಎಂಜಿನಿಯರ್ ಗಮನ ಹರಿಸಬೇಕು ಎಂದರು.

ಈ ರಸ್ತೆ ರಾಣಿ ಚೆನ್ನಮ್ಮ ವೃತ್ತ, ಕೋರ್ಟ್ ವೃತ್ತದಿಂದ ಸರ್ಕ್ಯೂಟ್ ಹೌಸ್ ಮತ್ತು ರೈಲ್ವೆ ಸೇತುವೆ ಬಳಸಿ ಕೇಶ್ವಾಪುರಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಗೆ ಪ್ಲೈಓವರ್ ಅಗತ್ಯವಿದೆಯೇ? ಎಂಬುದರ ಬಗ್ಗೆ ವೈಜ್ಞಾನಿಕವಾಗಿ ಯೋಚಿಸಿ ನಿರ್ಣಯಿಸಬೇಕು. ಪ್ಲೈಓವರ್ ನಿರ್ಮಾಣವಾಗಲೇಬೇಕು ಎಂದಾದಲ್ಲಿ ಇದರಿಂದಾಗುವ ಸಾಧಕ- ಬಾಧಕಗಳ ಬಗ್ಗೆ ಅರಿಯಬೇಕು. ಪ್ರೈಓವರ್ ಬದಲಿಗೆ ಪ್ರಸ್ತುತ ಅಲ್ಲಿರುವ ಅಂಡರ್‌ ಪಾಸ್‌ನ್ನು ತೆಗೆದುಹಾಕಿ ಈ ಹಿಂದೆ ಇದ್ದ ರಸ್ತೆಯನ್ನು ನಿರ್ಮಾಣ ಮಾಡುವುದು ಸೂಕ್ತ ಎಂದಾದರೆ ಪರಿಷ್ಕೃತ ಪ್ರಸ್ತಾವನೆಯನ್ನು ಜನವರಿ ಅಂತ್ಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.

ಹುಬ್ಬಳ್ಳಿ ನಗರದ ರಾಣಿ ಚೆನ್ನಮ್ಮ ಸರ್ಕಲ್‌ನಿಂದ ನವಲಗುಂದ ಪಟ್ಟಣದ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಅಧಿಕಾರಿಗಳು, ಎಂಜಿನಿಯರ್‌ಗಳು ಇಲ್ಲಿನ ವಾಸ್ತವ ಪರಿಸ್ಥಿತಿ ಅರಿಯಬೇಕು. ನವಲಗುಂದ, ಬಾಗಲಕೋಟೆ, ವಿಜಯಪುರಕ್ಕೆ ಸಾರ್ವಜನಿಕರು ಈ ರಸ್ತೆ ಬಳಸಿಯೇ ಪ್ರತಿನಿತ್ಯ ಸಂಚರಿಸುತ್ತಾರೆ. ಆದರೂ ಈ ಬಗ್ಗೆ ಗಮನಹರಿಸುತ್ತಿಲ್ಲ. ಇನ್ನಾದರೂ ಈ ಭಾಗದ ಜನರ ಸಮಸ್ಯೆ ಅರಿತು ವಿಳಂಬ ಮಾಡದೇ ಅಧಿಕಾರಿಗಳು ಪರಿಷ್ಕೃತ ಪ್ರಸ್ತಾವನೆಯನ್ನು ಕಾಲಮಿತಿಯೊಳಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ, ಕಾರ್ಯದರ್ಶಿ ಸತ್ಯನಾರಾಯಣ, ಜಿಲ್ಲಾಧಿಕಾರಿ ದಿವ್ಯಪ್ರಭು, ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಶಶಿಕುಮಾರ, ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಲೋಕೋಪಯೋಗಿ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.