ಮಕ್ಕಳಲ್ಲಿ ಡಿಜಿಟಲ್‌ ಸೇಫ್ಟಿ ಅರಿವು ಮೂಡಿಸಿ: ಪುಷ್ಪಲತಾ

| Published : Dec 19 2024, 12:32 AM IST

ಮಕ್ಕಳಲ್ಲಿ ಡಿಜಿಟಲ್‌ ಸೇಫ್ಟಿ ಅರಿವು ಮೂಡಿಸಿ: ಪುಷ್ಪಲತಾ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್‌, ಸೋಷಿಯಲ್ ಮೀಡಿಯಾಗಳ ಚಟುವಟಿಕೆಗಳಿಂದಾಗಿ ಮಕ್ಕಳು, ಯುವಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪಾಲಕರು, ಶಿಕ್ಷಕರು, ಬೋಧಕರು ಸಾಕಷ್ಟು ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದು ಬೆಂಗಳೂರಿನ ಎನ್‌ಫೋಲ್ಡ್ ಪ್ರೋಆಕ್ಟಿವ್ ಹೆಲ್ತ್ ಟ್ರಸ್ಟ್‌ ನಿರ್ದೇಶಕಿ ಎಂ.ಪುಷ್ಪಲತಾ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದಾವಣಗೆರೆ ವಿವಿಯಲ್ಲಿ ಮಕ್ಕಳು-ಡಿಜಿಟಲ್ ಸುರಕ್ಷತೆ ಮಾಹಿತಿ ಕಾರ್ಯಾಗಾರ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್‌, ಸೋಷಿಯಲ್ ಮೀಡಿಯಾಗಳ ಚಟುವಟಿಕೆಗಳಿಂದಾಗಿ ಮಕ್ಕಳು, ಯುವಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪಾಲಕರು, ಶಿಕ್ಷಕರು, ಬೋಧಕರು ಸಾಕಷ್ಟು ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದು ಬೆಂಗಳೂರಿನ ಎನ್‌ಫೋಲ್ಡ್ ಪ್ರೋಆಕ್ಟಿವ್ ಹೆಲ್ತ್ ಟ್ರಸ್ಟ್‌ ನಿರ್ದೇಶಕಿ ಎಂ.ಪುಷ್ಪಲತಾ ಹೇಳಿದರು.

ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿ.ವಿ.ಯ ಪತ್ರಿಕೋದ್ಯಮ ವಿಭಾಗದಲ್ಲಿ ಯುನಿಸೆಫ್‌ ಸಹಯೋಗದಲ್ಲಿ ಬುಧವಾರ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದ 2ನೇ ದಿನದ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಡಿಜಿಟಲ್ ಸುರಕ್ಷತೆ ವಿಷಯ ಕುರಿತು ಅವರು ಮಾತನಾಡಿದರು. ಮಕ್ಕಳು, ಯುವಜನರ ಭವಿಷ್ಯ ರೂಪಿಸುವತ್ತ ಪೋಷಕರು, ಶಿಕ್ಷಕರು ಗಮನಹರಿಸಬೇಕು. ಡಿಜಿಟಲ್ ಸೇಫ್ಟಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮೊದಲು ಆಗಬೇಕು ಎಂದರು.

ಮಾನಸಿಕ, ದೈಹಿಕವಾಗಿ ಮಕ್ಕಳ ಮೇಲೆ ಡಿಜಿಟಲ್ ವ್ಯವಸ್ಥೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಹೆಚ್ಚು ಹೆಚ್ಚು ಕುತೂಹಲ ಹುಟ್ಟು ಹಾಕುತ್ತಿದೆ. ಮಕ್ಕಳು ತಮ್ಮ ಒಂಟಿತನ ದೂರ ಮಾಡಿಕೊಳ್ಳಲು, ಕುತೂಲಹದಿಂದಾಗಿ ಹೆಚ್ಚು ಹೆಚ್ಚಿನದಾಗಿ ಸಾಮಾಜಿಕ ಜಾಲತಾಣಗಳತ್ತ ವಾಲುತ್ತಿದ್ದಾರೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಮನೆಯಲ್ಲಿ ಪಾಲಕರು, ಶಾಲೆ-ಕಾಲೇಜಿನಲ್ಲಿ ಶಿಕ್ಷಕರು, ಬೋಧಕರು ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ಮಾಹಿತಿ ನೀಡಬೇಕು. ಕಾಲಕಾಲಕ್ಕೆ ಅರಿವು ಮೂಡಿಸಬೇಕು. ಇದರಿಂದ ಯಾವುದೇ ತೊಂದರೆಗಳಾಗುವುದಿಲ್ಲ. ಆದರೆ, ಮಕ್ಕಳಲ್ಲಿ ಕುತೂಹಲ ಹೆಚ್ಚಾದಾಗ ಡಿಜಿಟಲ್ ವ್ಯವಸ್ಥೆ ಕಡೆ ವಾಲುತ್ತಾರೆ. ಸಾಮಾಜಿಕ ಜಾಲತಾಣಗಳಿಂದ ಎಷ್ಟು ಅನುಕೂಲವಿದೆಯೋ, ಅದಕ್ಕಿಂತ ಹಲವಾರು ಪಟ್ಟು ಅನಾನುಕೂಲ, ಅಪಾಯಗಳೂ ಇವೆ ಎಂಬುದು ಮರೆಯಬಾರದು ಎಂದು ಎಚ್ಚರಿಸಿದರು.

ಡಿಜಿಟಲ್ ವ್ಯವಸ್ಥೆಯಿಂದ ಅನೇಕ ಉಪಯುಕ್ತ ಮಾಹಿತಿ ಪಡೆಯಬಹುದು. ಮಕ್ಕಳಿಗೆ ಸರಿ, ತಪ್ಪು ಯಾವುದೆಂದು ತಿಳಿಸುವ ಅವಶ್ಯಕತೆ ಇದೆ. ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ನಾವೇನೇ ಮಾಡಿದರೂ ಅದು ಉಳಿಯುತ್ತದೆ. ಈ ಪ್ರಕ್ರಿಯೆಯನ್ನೇ ಡಿಜಿಟಲ್ ಫುಟ್ ಪ್ರಿಂಟ್ ಎನ್ನಲಾಗುತ್ತದೆ. ಯಾವುದೇ ಕಾರಣಕ್ಕೂ ಮಕ್ಕಳ ಶಿಕ್ಷಣ, ಭವಿಷ್ಯದ ವಿಚಾರದಲ್ಲಿ ಪಾಲಕರಾಗಲೀ, ಶಿಕ್ಷಕರಾಗಲೀ ಮೈಮರೆಯಬಾರದು. ಸೋಷಿಯಲ್ ಮೀಡಿಯಾದಲ್ಲಿ ಅವರ ಚಲನವಲನಗಳ ಮೇಲೆ ಸದಾ ಕಣ್ಣಿಟ್ಟಿರಬೇಕು ಎಂದರು.

ಯುನಿಸೆಫ್‌ನ ಹೈದರಾಬಾದ್‌ನ ಪ್ರಸುನ್‌ ಸೇನ್‌, ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗ ಮುಖ್ಯಸ್ಥೆ ಸ್ವಪ್ನಾ ನಾಯ್ಕ, ದಾವಣಗೆರೆ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ ಇತರರು ಇದ್ದರು. ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಾಧ್ಯಮ ಪ್ರತಿನಿಧಿಗಳು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದ್ದರು.

- - -

ಟಾಪ್‌ ಕೋಟ್‌

13ರಿಂದ 17 ವರ್ಷ ವಯಸ್ಸಿನೊಳಗಿನ ಮಕ್ಕಳ ಬಗ್ಗೆ ಇತ್ತೀಚೆಗೆ ಸಮೀಕ್ಷೆ ಕೈಗೊಂಡಾಗ ಶೇ.6.6ರಷ್ಟು ಮಕ್ಕಳು ಟ್ವಿಟರ್ ಖಾತೆ ಹೊಂದಿದ್ದಾರೆ. ಶೇ.8ರಷ್ಟು ಮಕ್ಕಳು ಇನ್‌ಸ್ಟಾಗ್ರಾಂ ಬಳಸುತ್ತಿದ್ದಾರೆ. ಜನಸಂಖ್ಯೆಯ ಶೇ.16ರಷ್ಟು ಮಕ್ಕಳು ಯೂಟೂಬ್ ನೋಡುತ್ತಾರೆ. ಇದು ಆತಂಕಕಾರಿ ಬೆಳವಣಿಗೆ ಎನ್ನದೇ ವಿಧಿಯಿಲ್ಲ

- ಎಂ.ಪುಷ್ಪಲತಾ, ನಿರ್ದೇಶಕಿ

- - -

-18ಕೆಡಿವಿಜಿ3.ಜೆಪಿಜಿ:

ದಾವಿವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಬುಧವಾರ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಕ್ಕಳು ಮತ್ತು ಡಿಜಿಟಲ್ ಸುರಕ್ಷತೆ ಕುರಿತು ಎಂ.ಪುಷ್ಪಲತಾ ಮಾತನಾಡಿದರು.