ಕನ್ನಡಪ್ರಭ ವಾರ್ತೆ ಕಲಬುರಗಿಆಳಂದದ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿಯಂದು ಪೂಜೆ ಸಲ್ಲಿಸಲು ಹೈಕೋರ್ಟ್‌ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ.

ದರ್ಗಾದಲ್ಲಿನ ಶಿವಲಿಂಗಕ್ಕೆ ಶಿವರಾತ್ರಿ ದಿನ ಪೂಜೆ ಸಲ್ಲಿಸಲು ಅವಕಾಶ ಕೋರಿ ಆರ್‌ಟಿಐ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ಅವರು ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸಿಂಗ್‌ ನೇತೃತ್ವದ ಏಕಸದಸ್ಯ ಪೀಠ, ಸಿದ್ರಾಮಯ್ಯ ಹಿರೇಮಠ ಅವರಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಿದೆ. ಪೂಜೆಗೆ ಅವಕಾಶ ಕೋರಿರುವ ಅರ್ಜಿಯಲ್ಲಿ ಇತರ ಯಾರ ಹೆಸರೂ ಇಲ್ಲದ ಕಾರಣ, ಅರ್ಜಿ ಸಲ್ಲಿಸಿರುವ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತ ಬಯಸಿದರೆ ಹೆಚ್ಚಿನವರಿಗೂ ಅನುಮತಿ ನೀಡಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಫೆ. 15ರ ಶಿವರಾತ್ರಿಯಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಪೂಜೆ ಸಲ್ಲಿಸಲು ತೆರಳುವ ಅರ್ಜಿದಾರರಿಗೆ ಭದ್ರತೆ ಕಲ್ಪಿಸಬೇಕು. ಒಂದು ವೇಳೆ ಅವರು ಕಾನೂನು ಸುವ್ಯವಸ್ಥೆ ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಇದೇ ವೇಳೆ, ಸಾಮಾಜಿಕ ಕಾರ್ಯಕರ್ತೆ ದಿವ್ಯಾ ಹಾಗರಗಿ ಕೂಡಾ ಪೂಜೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್‌ ಅವರ ಅರ್ಜಿಯನ್ನು ವಜಾಗೊಳಿಸಿದೆ.

ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಕೆ:


ಈ ಮಧ್ಯೆ, ದರ್ಗಾದಲ್ಲಿರುವ ಶಿವಲಿಂಗಕ್ಕೆ ಶಿವರಾತ್ರಿಯಂದು ಪೂಜೆಗೆ ಅವಕಾಶ ನೀಡಬಾರದು ಹಾಗೂ ಸ್ಥಳದ ಧಾರ್ಮಿಕ ಸ್ವರೂಪ ಬದಲಿಸುವ ಯಾವುದೇ ಕಾಮಗಾರಿ ಅಥವಾ ಬದಲಾವಣೆಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ದರ್ಗಾ ಕಮಿಟಿ ಪರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಬುಧವಾರ ಸುಪ್ರೀಂಕೋರ್ಟ್‌ನ ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠದ ಎದುರು ಈ ಅರ್ಜಿಯ ವಿಚಾರಣೆ ನಡೆಯಿತು.

ದರ್ಗಾ ಕಮೀಟಿ ಪರ ಹಾಜರಾದ ಹಿರಿಯ ವಕೀಲೆ ವಿಭಾ ದತ್ತ ಮಖೀಜಾ, ಶಿವರಾತ್ರಿಗೂ ಮುನ್ನವೇ ಈ ಅರ್ಜಿಯ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಅರ್ಜಿದಾರರ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿತಾದರೂ, ಇಂತಹ ಪ್ರಕರಣಗಳ ಬಗ್ಗೆ ಸಂಬಂಧಿತ ಹೈಕೋರ್ಟ್‌ಗಳನ್ನು ಸಂಪರ್ಕಿಸದೆ ನೇರವಾಗಿ ಸುಪ್ರೀಂಕೋರ್ಟ್‌ಗೆ ತರುತ್ತಿರುವ ಬಗ್ಗೆ ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.

ಯುವಕರಿಂದ ಶಿವಮಾಲೆ ಧಾರಣೆ:

ಈ ಮಧ್ಯೆ, ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗೇಶ್ವರ ಶ್ರೀಗಳ ನೇತೃತ್ವದಲ್ಲಿ ಬುಧವಾರ ನಗರದ ರಾಮಮಂದಿರಲ್ಲಿ ಶಿವರಾತ್ರಿ ನಿಮಿತ್ತ ಶಿವಮಾಲೆ ಧಾರಣೆ ಪೂಜೆ, ಹೋಮ ನಡೆಸಲಾಯಿತು. ಅನೇಕ ಹಿಂದೂಪರ ಕಾರ್ಯಕರ್ತರು ಶಿವಮಾಲೆ ಧರಿಸಿ, ರಾಘವ ಚೈತನ್ಯ ಶಿವಲಿಂಗ ಪೂಜೆಯ ಸಂಕಲ್ಪ ಮಾಡಿದರು.