ಮಂಗಳೂರು: ಅಳಿವಿನಂಚಿನಲ್ಲಿರುವ ಮಲೆನಾಡು ಗಿಡ್ಡ ಗೋವುಗಳನ್ನು ಸಂರಕ್ಷಿಸಿ ಸಂವರ್ಧನೆ ಮಾಡುತ್ತಿರುವ ಯುವ ಗೋಪಾಲಕ ಪ್ರವೀಣ್‌ ಬೆಳ್ಳಾರೆ ಅವರಿಂದ ತಮಿಳುನಾಡಿನ ಪ್ರಸಿದ್ಧ ತಿರುವಣ್ಣಾಮಲೈ ಶಿವ ದೇವಸ್ಥಾನಕ್ಕೆ ದೇವರ ನೈವೇದ್ಯಕ್ಕೆ ಎರಡು ಮಲೆನಾಡು ಗಿಡ್ಡ ಕಪಿಲ ಗೋವುಗಳ ಕಳುಹಿಸಲಾಗಿದೆ.

ಪ್ರವೀಣ್‌ ಬೆಳ್ಳಾರೆ ಅವರು ಮಲೆನಾಡು ಗಿಡ್ಡ ಗೋವುಗಳ ಸಂತತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದು, ಈಗಾಗಲೇ ಅವರಲ್ಲಿ 40ಕ್ಕೂ ಅಧಿಕ ಮಲೆನಾಡು ಗಿಡ್ಡ ಕಪಿಲ ಗೋತಳಿಗಳು ಇವೆ. ಇದಕ್ಕಾಗಿ ಪ್ರವೀಣ್‌ ಬೆಳ್ಳಾರೆ ಅವರಿಗೆ ‘ಗೋಪಾಲ್ಸ್‌’ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿತ್ತು.

ಪ್ರವೀಣ್‌ ಬೆಳ್ಳಾರೆ ಅವರು ದೇಶೀಯ ಕಪಿಲಾ ತಳಿ ಸಾಕಿ ಅಭಿವೃದ್ಧಿಪಡಿಸುವ ಮಾಹಿತಿ ಪಡೆದ ದೆಹಲಿಯ ಉದ್ಯಮಿ ನವನೀತ್‌ ಸಿಂಗ್‌ ಅವರು ಇವರಲ್ಲಿಂದ ಮಲೆನಾಡು ಗಿಡ್ಡ ಕಪಿಲ ಹಸುಗಳನ್ನು ತನ್ನ ಆರಾಧ್ಯ ದೇವ ಶಿವನ ನೈವೇದ್ಯಕ್ಕೆ ಈ ದೇಶೀ ತಳಿ ಹಸುವನ್ನು ಕಳುಹಿಸಿಕೊಟ್ಟಿದ್ದಾರೆ.

ಮಂಗಳವಾರ ಪ್ರವೀಣ್‌ ಬೆಳ್ಳಾರೆ ಅವರ ಮನೆಯಿಂದ ಪಶುವೈದ್ಯರ ದೃಢಪತ್ರದೊಂದಿಗೆ ಎರಡು ಹಸು ಮತ್ತು ಒಂದು ಕರುವನ್ನು ತಮಿಳುನಾಡಿಗೆ ಕರೆದೊಯ್ಯಲಾಗಿದೆ. ಇದು ಎರಡು ದಿನಗಳಲ್ಲಿ ತಿರುವಣ್ಣಾಮಲೈ ಶಿವ ದೇವಸ್ಥಾನ ತಲುಪಲಿದೆ. ಅಲ್ಲಿ ಈ ಹಸುಗಳನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ಭಟ್ ಕುರುಂಬುಡೇಲು, ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ, ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪೆರುವಾಜೆಗುತ್ತು, ಬೆಳ್ಳಾರೆ ಪಶು ವೈದ್ಯಕೀಯ ಕೇಂದ್ರದ ಪಶು ವೈದ್ಯಾ ಧಿಕಾರಿ ಬಿ. ಕೆ. ಸೂರ್ಯನಾರಾಯಣ ಭಟ್, ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಗೌಡ ಪಡ್ಪು, ಅಜೇಯ ಪೊಯ್ಯಮಜಲು-ಪೆರುಮುಂಡ, ಬೆಳ್ಳಾರೆ ಪಶು ವೈದ್ಯಕೀಯ ಕೇಂದ್ರದ ಸಿಬ್ಬಂದಿಗಳಾದ ಪವಿತ್ರ ಎಂ, ಪ್ರತಿಮಾ ತಡಗಜೆ ಮತ್ತಿತರರಿದ್ದರು.