- ಗುಡ್ಡದ ಕೆಳಗಿನ ಮನೆಗಳ ಜನ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳಬೇಕು

- - -

ಕನ್ನಡಪ್ರಭ ವಾರ್ತೆ ಶೃಂಗೇರಿ

ಸುಮಾರು ₹1.86 ಕೋಟಿ ಅನುದಾನದಲ್ಲಿ ನಿರ್ಮಾಣ ಆಗುತ್ತಿರುವ ತಡೆಗೋಡೆ ಬಿರುಕು ಬಿಟ್ಟಿದ್ದು, ಕುಸಿಯುವ ಹಂತಕ್ಕೆ ತಲುಪಿರುವ ಬಗ್ಗೆ ಕೂಲಂಕುಶ ಪರಿಶೀಲನೆ, ತನಿಖೆ ನಡೆಸಲು ಬೆಂಗಳೂರು ಹಾಗೂ ಕೊಡಗಿನ ತಜ್ಞರನ್ನು ಒಳನ್ನೊಂಡ ನಾಲ್ಕು ತಂಡಗಳನ್ನು ರಚಿಲಾಗಿದೆ. ವರದಿ ಬಂದ ಬಳಿಕ ಲೋಪದೋಷಗಳು ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಭಾರಿ ಮಳೆಯಿಂದ ಶೃಂಗೇರಿ ಪಟ್ಟಣದ ಗೋರಿಗುಡ್ಡದಲ್ಲಿ ಭೂಕುಸಿತ ಉಂಟಾಗುತ್ತಿತ್ತು. ಇದರಿಂದ ಇಲ್ಲಿರುವ ದರ್ಗಾ, ತಾಲುಕು ಕಚೇರಿ ಕಟ್ಟಡ, ನ್ಯಾಯಾಲಯ ಕಟ್ಟಡಗಳಿಗೆ ಹಾನಿ ಉಂಟಾಗುತ್ತಿದ್ದ ಹಿನ್ನೆಲೆ ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಎಲ್ಲ ಅಧಿಕಾರಿಗಳ ಅಭಿಪ್ರಾಯ ಪಡೆದು ನಿರ್ಮಾಣ ಕಾರ್ಯ ಆರಂಭವಾಗಿತ್ತು. ಅದೀಗ ಅಪಾಯದ ಸ್ಥಿತಿಯಲ್ಲಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೇನೆ ಎಂದರು.


ಪ್ರತಿಭಟನೆಯಲ್ಲಿ ಅನಗತ್ಯ ಆರೋಪ:

ಈಗಾಗಲೇ ಮಣ್ಣು ತೆರವು, ದುರಸ್ತಿ ಕೆಲಸ ನಡೆಯುತ್ತಿದೆ. ಅಲ್ಲಿಯವರೆಗೆ ಗುಡ್ಡದ ಕೆಳಗಿರುವ ಮನೆಗಳಲ್ಲಿರುವ ಜನರು ತಾತ್ಕಾಲಿಕವಾಗಿ ಅಲ್ಲಿಂದ ಸ್ಥಳಾಂತರಗೊಳ್ಳಬೇಕು. ತಾತ್ಕಾಲಿಕ ಪರಿಹಾರ ವ್ಯವಸ್ಥೆ ಮಾಡಲಾಗುವುದು. ಸರ್ಕಾರ ಎಲ್ಲ ರೀತಿಯಲ್ಲಿ ಅವರ ಸಹಾಯಕ್ಕೆ ನಿಲ್ಲಲಿದೆ. ಗುರುವಾರ ಸ್ಥಳೀಯರು, ಕೆಲ ರಾಜಕೀಯಪಕ್ಷಗಳು ಪ್ರತಿಭಟನೆ ಮಾಡಿದ್ದಾರೆ. ಅದು ಅವರ ಹಕ್ಕು. ಆದರೆ, ನನ್ನನ್ನು ಸೇರಿದಂತೆ ಅಧಿಕಾರಿಗಳ ವಿರುದ್ಧ ಅನಗತ್ಯ ಆರೋಪ ಮಾಡಿದ್ದಾರೆ. ಇದು ಸರಿಯಲ್ಲ. ಲಂಚ, ಪರ್ಸೆಂಟ್ ಇತ್ಯಾದಿ ಹೇಳಿದ್ದಾರೆ. ತನಿಖೆ ನಡೆಯುತ್ತದೆ. ಯಾರು ತಪ್ಪು ಮಾಡಿದ್ದಾರೆ ಎಂದು ಗೊತ್ತಾಗುತ್ತದೆ ಎಂದರು.

ನಾನು ಸರ್ಕಾರಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಇದು ಬಾಲಿಶ ಹೇಳಿಕೆ. ನನಗೆ ಅಗತ್ಯವಿಲ್ಲ. ಅವರ ಅವಧಿಯಲ್ಲಿ ಸಾಕಷ್ಟು ತಡೆಗೋಡೆಗಳು ಕುಸಿದುಬಿದ್ದಿವೆ. ಹಾಗಾದರೆ ಅವುಗಳೆಲ್ಲ ಕಳಪೆ ಕಾಮಗಾರಿಯೇ, ಭ್ರಷ್ಟಾಚಾರ ನಡೆದಿಲ್ಲವೇ? ಸರ್ಕಾರಿ ಹಣವನ್ನು ನನ್ನ ಮನೆ ಕೆಲಸಕ್ಕೆ ಬಳಸಿಕೊಂಡಿಲ್ಲ. ಇದರಲ್ಲಿ ರಾಜಕಾರಣ ಮಾಡಬಾರದು. ಆವೇಶ, ಆಕ್ರೋಶ ಅಗತ್ಯವಿಲ್ಲ. ಒಳ್ಳೆಯ ಮನಸ್ಸಿನಿಂದ ಹೇಳಬೇಕು. ನನ್ನ ಆಸ್ತಿ ರಾಜಕೀಯಕ್ಕೆ ಬಂದ ಮೇಲೆ ಜಾಸ್ತಿಯಾಗಿಲ್ಲ. ಐಟಿ., ಇಡಿ ದಾಳಿ ನಡೆಯಲಿ. ಒಂದುವೇಳೆ ನನ್ನ ಆಸ್ತಿ ರಾಜಕೀಯಕ್ಕೆ ಬಂದ ಮೇಲೆ ಜಾಸ್ತಿಯಾಗಿದೆ ಎಂದರೆ ನಾನು ರಾಜಿನಾಮೆ ನೀಡಿತ್ತೇನೆ ಎಂದರು.

ತಹಸೀಲ್ದಾರ್ ಅನೂಪ್ ಸಂಜೋಗ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಸುದೀಪ್, ಎಂಜಿನಿಯರ್‌ಗಳು, ಅಧಿಕಾರಿಗಳು ಇದ್ದರು.

- - -

-10ಶ್ರೀಚಿತ್ರ2: ಶೃಂಗೇರಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.