ಸಾರಾಂಶ
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ । ಪಿಎಸ್ ಐ ವಸಂತ್ ಕುಮಾರ್ ರಿಂದ ವಿದ್ಯಾರ್ಥಿನಿಯರಿಗೆ ಪಾಠ
ಕನ್ನಡಪ್ರಭ ವಾರ್ತೆ ಮಾಲೂರುಶಾಲಾ ಕಾಲೇಜುಗಳು ನಿಮ್ಮ ಭವಿಷ್ಯ ರೂಪಿಸುವ ಕೇಂದ್ರವಾಗಿದ್ದು, ಹದಿಹರೆಯ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಎಂಬ ಬಲೆಗೆ ಬೀಳದೆ ಭವಿಷ್ಯ ರೂಪಿಸಿಕೊಳ್ಳುವ ಕಡೆ ನಿಮ್ಮ ಗಮನ ಇರಲಿ ಎಂದು ಪೋಲೀಸ್ ಇನ್ಸ್ ಪೆಕ್ಟರ್ ವಸಂತ್ ಕುಮಾರ್ ಹೇಳಿದರು.
ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ಸಹಕಾರದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚಾರಣೆ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವ್ಯಾಸಂಗಕ್ಕಾಗಿ ಕಾಲೇಜಿಗೆ ಬರುವ ನೀವು ಎಚ್ಚರವಾಗಿ ನಡೆದುಕೊಳ್ಳಬೇಕಾಗಿದೆ. ನಿಮ್ಮನ್ನು ನಿತ್ಯ ಯಾರಾದರೂ ಹಿಂಬಾಲಿಸುವರ ಬಗ್ಗೆ ಶಿಕ್ಷಕರಿಗೆ ಅಥವಾ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ. ಹದಿಹರಯತನ ನಿಮ್ಮನ್ನು ತಪ್ಪು ದಾರಿಗೆ ಎಳೆಯುತ್ತದೆ. ಆದರೆ ನೀವು ಏಕಾಗ್ರತೆ ವಹಿಸಿ, ಅನ್ಯರ ಆಕರ್ಷಣೆಗೆ ಒಳಗಾಗಬೇಡಿ. ಅದು ನಿಮ್ಮ ಸುಂದರ ಜೀವನವನ್ನೇ ಹಾಳುಮಾಡಬಹುದು ಎಂದು ಎಚ್ಚರಿಸಿದರು.ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ, ಮೊಬೈಲ್,ಸಾಮಾಜಿಕ ಜಾಲ ತಾಣದಿಂದಲೂ ದೂರ ಇರಿ. ತಾಲೂಕಿನಲ್ಲಿ ಗಾಂಜಾ ವ್ಯಸನಿಗಳ ಪ್ರಕರಣ ಜಾಸ್ತಿಯಾಗಿದ್ದು,ನಿಮ್ಮ ಕಾಲೇಜು ಬಳಿ ಅಂತಹ ಮಾದಕ ವಸ್ತುಗಳನ್ನು ಮಾರಾಟ ದಂಧೆ ನಡೆಯುತ್ತಿದ್ದರೆ,ತಕ್ಷಣ ಪೊಲೀಸರಿಗೆ ತಿಳಿಸಿ ಎಂದರು.ನಿಮ್ಮ ಭವಿಷ್ಯ ರೂಪಗೊಳ್ಳಿಸಲು ಇರುವ ಶಾಲಾ –ಕಾಲೇಜುಗಳಲ್ಲಿ ಓದುವ ಕಡೆ ಗಮನ ನೀಡಿ, ಏಕೆಂದರೆ ೧೮ ವರ್ಷದೊಳಗಿನ ಹೆಣ್ಣು ಮಕ್ಕಳ ಪ್ರೇಮ-ಪರಾರಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೋಷಕರು ಸಹ ಮಕ್ಕಳ ನಡೆ ಬಗ್ಗೆ ಗಮನ ನೀಡಬೇಕು ಎಂದರು.
ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಸರ್ಕಾರ ಶಕ್ತಿಶಾಲಿ ಪೋಕ್ಸೋ ಕಾಯ್ದೆ ಜಾರಿ ತಂದಿದ್ದು, ಹೆಣ್ಣು ಮಕ್ಕಳು ಬಾಲ್ಯ ವಿವಾಹವಾದರೂ ಗಂಡು ಮಕ್ಕಳನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಲಾಗುವುದು. ಅಪರಾಧ ಮಾಸಾಚರಣೆ ಅಂಗವಾಗಿ ತಾಲೂಕಿನಾದ್ಯಂತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಥಾ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.ಪೊಲೀಸ್ ಎಸೈ ವರಲಕ್ಷ್ಮಿ ರವೀಂದ್ರ ಗೌಡ ಮಾತನಾಡಿದರು, ಕಾಲೇಜಿನ ಉಪಪ್ರಾಂಶುಪಾಲ ವಿಜಯಕುಮಾರ್,ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್,ಪೊಲೀಸ್ ಕ್ರೆಡಿಟ್ ಅಧಿಕಾರಿ ಜ್ಯೋತಿಲಕ್ಷ್ಮಿ,ಶಿಕ್ಷಕರಾದ ಯಶವಂತರಾವ್ ,ರೆಡ್ಡಿ .ನಾರಾಯಣಸ್ವಾಮಿ,ವೆಂಕಟೇಶ್,ಮೋಹನ್,ನಾಗೇಶ್,ಮಂಜುನಾಥ್ ,ಆನಂದ್ ಇನ್ನಿತರಿದ್ದರು.ವೇದಿಕೆ ಕಾರ‍್ಯಕ್ರಮ ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಂದ ಅಪರಾಧ ತಡೆ ಮಾಸಾಚಾರಣೆ ಜಾಥ ನಡೆಸಿದರು.