- ಮಹಿಳಾ ಪ್ರಯಾಣಿಕರನ್ನು ಕಡೆಗಣಿಸಕೂಡದು: ಕಂಡಕ್ಟರ್‌ಗೆ ಗ್ರಾಹಕರ ಆಯೋಗ ತಾಕೀತು

- - -

ಕನ್ನಡಪ್ರಭ ವಾರ್ತೆ ಹರಿಹರ

ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಎಂಬ ಕಾರಣಕ್ಕೆ ಅವರ ಸುರಕ್ಷತೆ ಮತ್ತು ಘನತೆಗೆ ಧಕ್ಕೆ ತರುವುದನ್ನು ಸಹಿಸಲಾಗದು ಎಂದು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಎಚ್ಚರಿಸಿದೆ.

ಮಹಿಳಾ ಪ್ರಯಾಣಿಕರೊಬ್ಬರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಎಚ್.ಎನ್. ಮೀನಾ ಹಾಗೂ ಸದಸ್ಯ ತ್ಯಾಗರಾಜನ್ ಸಿ.ಎಸ್. ಅವರು ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಪಡೆಯುವುದರಿಂದ ವ್ಯಕ್ತಿಯ ಯಾವುದೇ ಹಕ್ಕು ಮೊಟಕಾಗುವುದಿಲ್ಲ ಎಂದು ಸ್ಪಷ್ಟಪಡಿಸಿ, ಉಚಿತ ಪ್ರಯಾಣದ ಬಗ್ಗೆ ಟೀಕಿಸಿ, ನಿರ್ಲಕ್ಷ ತೋರಿದ ಬಸ್‌ ನಿರ್ವಾಹಕನಿಗೆ ₹5 ಸಾವಿರ ಪರಿಹಾರ ನೀಡಲು ಕಳೆದ ಸೋಮವಾರ ಆದೇಶದಲ್ಲಿ ಸೂಚಿಸಿದ್ದಾರೆ.


ಪ್ರಕರಣದ ಹಿನ್ನೆಲೆ:

ಶಿವಮೊಗ್ಗದ ರೇಷ್ಮಾ ಬಾನು ಮೇ 15, 2024ರಂದು ತಮ್ಮ 10 ವರ್ಷದ ವಿಕಲಚೇತನ ಮಗನೊಂದಿಗೆ ಹರಿಹರದಿಂದ ಶಿವಮೊಗ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೊರಟಿದ್ದರು. ಶಕ್ತಿ ಯೋಜನೆಯಡಿ ತಮಗೆ ಉಚಿತ ಟಿಕೆಟ್ ಹಾಗೂ ಮಗನಿಗೆ ಅರ್ಧ ದರದ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದರು.

ಮಲೇಬೆನ್ನೂರು ಬಳಿ ನಿರ್ವಾಹಕ ಸೈಫುಲ್ಲಾ ಟೈರ್ ಪಂಕ್ಚರ್ ಆಗಿದೆ ಎಂದು ಬಸ್‌ ನಿಲ್ಲಿಸಿ, ಹಲವು ಪ್ರಯಾಣಿಕರನ್ನು ಕೆಳಗಿಳಿಸಿದ್ದು, ಈ ವೇಳೆ ಫ್ರೀ ಬಸ್‌ ಅಂತಾ ಬಂದುಬಿಡ್ತೀರಿ, ನಿಮ್ಮಿಂದಲೇ ಎಲ್ಲ ಸಮಸ್ಯೆ ನಮಗೆʼ ಎಂದು ಮೂದಲಿಸಿ ತಾಯಿ-ಮಗನನ್ನು ಸಹ ಕೆಳಗಿಳಿಸಿದ್ದರು.

ಅದೇ ಮಾರ್ಗದಲ್ಲಿ ಬಂದ ಬೇರೆ ಬಸ್‌ಗಳಲ್ಲಿ ಕೆಲವರು ಪ್ರಯಾಣಿಸಿದರಾದರೂ ಅಸ್ವಸ್ಥ ಮಗ ಮತ್ತು ಬ್ಯಾಗ್‌ ಇದ್ದುದರಿಂದ ರೇಷ್ಮಾ ಬಾನು ಅವರಿಗೆ ಹತ್ತಲಾಗಿರಲಿಲ್ಲ. ಆಗ ಮಳೆ ಬರುತ್ತಿದ್ದರಿಂದ ಸಮೀಪದ ಹಣ್ಣಿನಂಗಡಿ ಛಾವಣಿಯಡಿ ನಿಂತಿದ್ದರು.

ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತಿದ್ದಂತೆ ನಿರ್ವಾಹಕ ರೇಷ್ಮಾಬಾನು ಮತ್ತವರ ಮಗ ಓಡಿ ಬರುತ್ತಿರುವುದನ್ನು ಗಮನಿಸಿಯೂ ಅವರನ್ನು ಹತ್ತಿಸಿಕೊಳ್ಳದೇ, ಬಸ್‌ ತೆಗೆದುಕೊಂಡು ಹೋಗಿದ್ದರು. ಕತ್ತಲು ಮತ್ತು ನಿರ್ಜನ ಪ್ರದೇಶದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ರೇಶ್ಮಾ ಬಾನು ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಆಯೋಗ, ಘಟನೆ ಉದ್ದೇಶಪೂರ್ವಕವಾಗಿತ್ತೇ ಎಂಬ ಪ್ರಶ್ನೆಗಿಂತ ನಿರ್ವಾಹಕ ತನ್ನ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದಾನೆಯೇ ಎಂಬ ಪ್ರಶ್ನೆ ಮುಖ್ಯವಾಗುತ್ತೆ. ಶಕ್ತಿ ಯೋಜನೆಯಿಂದ ಬಸ್‌ಗಳಲ್ಲಿ ರಶ್ ಹೆಚ್ಚಿ ಸಿಬ್ಬಂದಿ ಅಸಹಾಯಕರಾದರೂ ಪ್ರಯಾಣಿಕರ ಸುರಕ್ಷತೆ ಕಡೆಗಣಿಸುವಂತಿಲ್ಲ ಎಂದು ತಿಳಿಸಿದೆ. ಸೇವಾ ನ್ಯೂನತೆ ಎಸಗಿರುವ ನಿರ್ವಾಹಕ 30 ದಿನದೊಳಗೆ ದೂರುದಾರರಿಗೆ ₹3 ಸಾವಿರ ಪರಿಹಾರ, ₹2 ಸಾವಿರ ವ್ಯಾಜ್ಯದ ಖರ್ಚು ನೀಡಲು ಆದೇಶಿಸಿದೆ.

ಆದರೆ ವಿಭಾಗೀಯ ನಿಯಂತ್ರಕ ಮತ್ತು ಘಟಕ ವ್ಯವಸ್ಥಾಪಕರ ಸೇವಾನ್ಯೂನತೆ ಸಾಬೀತಾಗಿಲ್ಲ ಎಂದು ತಿಳಿಸಿ, ಚಾಲಕ ಹಾಗೂ ನಿರ್ವಾಹಕರಿಗೆ ಪ್ರಯಾಣಿಕರ ಸುರಕ್ಷತೆ ಮತ್ತು ಸೌಜನ್ಯದ ನಡವಳಿಕೆಯ ಬಗ್ಗೆ ತರಬೇತಿ ನೀಡಿ, ಎಚ್ಚರಿಸಬೇಕು ಎಂದು ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೆಶಿಸಿದೆ.

- - -

(ಕೋಟ್-1) * ಪರಿಹಾರ ಸಾಲದು: ರೇಷ್ಮಾ ಬಾನು ಉಚಿತ ಪ್ರಯಾಣಿಕರೆಂದು ಮಹಿಳೆಯರನ್ನು ಅವಮಾನ, ನಿರ್ಲಕ್ಷ್ಯ ಮತ್ತು ತಾರತಮ್ಯದಿಂದ ಕಾಣುವವರ ವಿರುದ್ಧದ ನನ್ನ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಇದು ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ದಿನನಿತ್ಯ ಪ್ರಯಾಣಿಸುವ ರಾಜ್ಯದ ಎಲ್ಲ ಮಹಿಳೆಯರ ಗೆಲುವು. ಆದರೆ, ಆಯೋಗವು ಕೇವಲ ₹5 ಸಾವಿರ ಪರಿಹಾರ ನೀಡಿರುವುದು ತೀವ್ರ ನಿರಾಸೆ ತರಿಸಿದೆ. ಶಿವಮೊಗ್ಗದಿಂದ ದಾವಣಗೆರೆಯ ಆಯೋಗಕ್ಕೆ ಓಡಾಡಿದ ಸಮಯ, ಶ್ರಮ ಮತ್ತು ಹಣರೂಪಿ ವೆಚ್ಚಗಳನ್ನು ಈ ಮೊತ್ತ ಭರಿಸುವುದಿಲ್ಲ. ಅಂದು ನಾನು ಅನುಭವಿಸಿದ ಅವಮಾನ, ಆತಂಕಕ್ಕೆ ಹೋಲಿಸಿದರೆ ಈ ಮೊತ್ತ ತೀರಾ ಕಡಿಮೆ. ಹೆಚ್ಚಿನ ಪರಿಹಾರ ಕೋರಿ ರಾಜ್ಯ ಗ್ರಾಹಕರ ಆಯೋಗದಲ್ಲಿ ಅಪೀಲು ಸಲ್ಲಿಸುತ್ತೇನೆ.

- ರೇಷ್ಮಾ ಬಾನು, ದೂರುದಾರರು.

- - -

(ಕೋಟ್‌-2)

* ಕೆಳ ಹಂತದ ಸಿಬ್ಬಂದಿ ಮಾತ್ರ ಗುರಿ: ಬಿಎಂಎಸ್ ಶಕ್ತಿ ಯೋಜನೆಗೆ ತಕ್ಕಂತೆ ಬಸ್‌ಗಳ ಸಂಖ್ಯೆ ಹಾಗೂ ಸಿಬ್ಬಂದಿಯನ್ನು ಹೆಚ್ಚಿಸದಿರುವುದು, ಬಸ್ ಕೆಟ್ಟುನಿಂತಾಗ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ಮೊದಲಾದ ಆಡಳಿತಾತ್ಮಕ ವೈಫಲ್ಯಗಳಿಗೆ ಕೆಳ ಹಂತದ ಸಿಬ್ಬಂದಿಯನ್ನು ಮಾತ್ರ ಹೊಣೆ ಮಾಡಲಾಗದು ಎಂದು ದೂರುದಾರರ ಪರ ವಕೀಲರಾದ ಬಿ.ಎಂ. ಸಿದ್ದಲಿಂಗ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ತನ್ನ ಪ್ರತಿನಿಧಿಯಾದ ನಿರ್ವಾಹಕನ ನಿರ್ಲಕ್ಷ್ಯಕ್ಕೆ ಸಂಸ್ಥೆಯೇ ಪರೋಕ್ಷ ಹೊಣೆಗಾರಿಕೆ ಹೊರಬೇಕಾಗುತ್ತದೆ. ಕೇವಲ ನಿರ್ವಾಹಕನಿಗೆ ಮಾತ್ರ ಹೊಣೆಗಾರಿಕೆ ನಿಗದಿಪಡಿಸಿ, ವಿಭಾಗೀಯ ನಿಯಂತ್ರಕ ಹಾಗೂ ಘಟಕ ವ್ಯವಸ್ಥಾಪಕರನ್ನು ಮುಕ್ತಗೊಳಿಸಿರುವುದು ಕಾನೂನಾತ್ಮಕವಾಗಿ ಸಮರ್ಥನೀಯವಲ್ಲ. ಅಲ್ಲದೆ ನೀಡಿರುವ ಪರಿಹಾರವೂ ಪ್ರಕರಣದ ಗಂಭೀರತೆಗೆ ತಕ್ಕಂತೆ ಇಲ್ಲ. ಆದ್ದರಿಂದ ಮೇಲ್ಮನವಿ ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ.

- - -