ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ನಾಲೆಗಳಿಗೆ ನೀರು ಹರಿಸದೆ ಕಾಮಗಾರಿ ಹೆಸರಿನಲ್ಲಿ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳು ಒಣಗುವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪಟ್ಟಣದ ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಮಾನವ ಸರಪಳಿ ರಚಿಸಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಸುಮಾರು ಅರ್ಧಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಯಿತು.
ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ ಮಾತನಾಡಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿ.ಸಿ.ನಾಲೆ ಮತ್ತು ಲೋಕಸರ ನಾಲೆ ಆಧುನೀಕರಣ ಕಾಮಗಾರಿ ನೆಪದಲ್ಲಿ ಕೊನೇ ಭಾಗದ ರೈತರಿಗೆ ನೀರು ನೀಡದೆ ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರಿಗೆ ಮುಂಗಾರು ಆರಂಭವಾಗಿದೆ, ಕೃಷಿ ಚಟುವಟಿಕೆಗಳಿಗೆ ತೊಡಗಿಸಲು ನೀರಿಲ್ಲ. ನಾಲಾ ವ್ಯಾಪ್ತಿಯಲ್ಲಿ ಈಗಾಗಲೇ ಬೆಳೆದಿರುವ ಕಬ್ಬಿಗೆ ನೀರಿಲ್ಲದೆ ಒಣಗುತ್ತಿದೆ. ಕೂಡಲೇ ಅಧಿಕಾರಿಗಳು ನೀರನ್ನು ಬಿಡಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಗತಿಪರ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಪ್ರೊ.ಬಿ.ಎಸ್.ಬೋರೇಗೌಡ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆ ಇತಿಹಾಸದಲ್ಲೇ ಅವಧಿಗೂ ಮುನ್ನವೇ ಭರ್ತಿಯಾಗಿದ್ದರೂ ರೈತರು ಕೃಷಿ ಚಟುವಟಿಕೆ ಉಪಯೋಗಕ್ಕೆ ನೀರು ಬಾರದಂತಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಾಮಗಾರಿ ಹೆಸರಿನಲ್ಲಿ ರೈತರಿಗೆ ಕೃತಕ ಬರಗಾಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳು ರೈತರ ಬೆಳೆಗಳಿಗೆ ನೀರು ಹರಿಸಲು ಸೂಚಿಸಿದ್ದರೂ ಅಧಿಕಾರಿಗಳು ನೀರು ಹರಿಸಲು ಮುಂದಾಗಿಲ್ಲ. ಬೆಳೆಗಳು ಒಣಗುತ್ತಿವೆ. ಮುಂಗಾರು ಕೃಷಿ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ. ಕೂಡಲೇ ವಿ.ಸಿ ನಾಲೆ ಹಾಗೂ ಲೋಕಸರ ನಾಲೆಗಳ ಮೂಲಕ ಕೊನೆಭಾಗಕ್ಕೆ ನೀರುಣಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ ಮಾತನಾಡಿ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ರೈತರ ಹಿತ ಕಾಯದ ಕಾರಣ ಬೆಳೆಗಳು ಒಣಗುತ್ತಿವೆ. ತಕ್ಷಣವೇ ನೀರು ಹರಿಸಲು ಮುಂದಾಗಬೇಕು. ಕಾಮಗಾರಿಗಳನ್ನು ನಿಗಧಿತ ವೇಳೆಯಲ್ಲಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಹಿತ ಕಾಯದೆ, ರೈತರ ಬೆಳೆಗಳಿಗೆ ನೀರುಣಿಸದೆ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ. ನೀರು ಬಿಡದಿದ್ದರೆ ಗಗನಚುಕ್ಕಿ ಜಲಪಾತೋತ್ಸವಕ್ಕೆ ಸಿಎಂ ಆಗಮಿಸಿದಾಗ ರೈತ ಸಂಘದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರ ವಿ.ಸಿ.ಉಮಾಶಂಕರ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ರೈತ ಮುಖಂಡ ಸೋ.ಶಿ ಪ್ರಕಾಶ್, ತಾಲೂಕು ಘಟಕದ ಅಧ್ಯಕ್ಷ ಪ್ರಭುಲಿಂಗ, ಪ್ರಗತಿಪರ ಸಂಘಟನೆಯ ಕೆ.ಪಿ.ದೊಡ್ಡಿ ಶಿವರಾಮು, ಕರಡಕೆರೆ ಯೋಗೇಶ್, ರಘು ವೆಂಕಟೇಗೌಡ, ಹಿಂದೂಪರ ಮುಖಂಡರಾದ ಅಣ್ಣೂರು ಮನೋಹರ್, ಗಿರೀಶ್, ರೈತ ಮುಖಂಡರಾದ ಅಣ್ಣೂರು ಸಿದ್ದೇಗೌಡ, ಬೋರೇಗೌಡ, ರಾಮಲಿಂಗೇಗೌಡ, ಕೆ.ಪಿ ದೊಡ್ಡಿ ಪುಟ್ಟಸ್ವಾಮಿ, ಕೀಳಗಟ್ಟ ನಂಜುಂಡಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.