ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸಿ: ಲಕ್ಕೋಳ

| Published : Feb 12 2024, 01:33 AM IST / Updated: Feb 12 2024, 03:27 PM IST

ಸಾರಾಂಶ

ವ್ಯಕ್ತಿ ತಾನು ಉನ್ನತ ಪದವಿ, ಹುದ್ದೆ, ಹಣ, ಅಂತಸ್ತು ಹೊಂದಿದರೆ ಸಾಲದು, ತನ್ನಲ್ಲಿ ಉತ್ತಮ ಸಂಸ್ಕಾರ ಇರಬೇಕು. ಅಂತಹ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು.

ರೋಣ: ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ, ಸದ್ಗುಣಗಳನ್ನು ಬೆಳೆಸುವುದು ಶಿಕ್ಷಕರ ಗುರುತರವಾದ ಜವಾಬ್ದಾರಿಯಾಗಿದೆ. ಅಂದಾಗ ಶಿಕ್ಷಣ ಪರಿಣಾಮಕಾರಿಯಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘ ರಾಜ್ಯಾಧ್ಯಕ್ಷ ಡಾ. ಎಸ್.ಬಿ. ಲಕ್ಕೋಳ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ರೋಣ ತಾಲೂಕು ಶಿಕ್ಷಣ ಸಮಿತಿಯ ವಿ.ಎಫ್. ಪಾಟೀಲ ಪ್ರೌಢಶಾಲೆಯ 1994-95ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಭಾನುವಾರ ಜರುಗಿದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ವ್ಯಕ್ತಿ ತಾನು ಉನ್ನತ ಪದವಿ, ಹುದ್ದೆ, ಹಣ, ಅಂತಸ್ತು ಹೊಂದಿದರೆ ಸಾಲದು, ತನ್ನಲ್ಲಿ ಉತ್ತಮ ಸಂಸ್ಕಾರ ಇರಬೇಕು. ಅಂತಹ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. 

ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ, ಪ್ರಾಥಮಿಕ, ಪ್ರೌಢ ಶಾಲಾ ಹಂತದಲ್ಲಿಯೇ ಗುರುವಿನ ಮಾರ್ಗದರ್ಶನದಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕು. 

ಕಲಿಕಾ ಹಂತದಲ್ಲಿಯೇ ಸುಂದರ ಭವಿಷ್ಯ ರೂಪಿಸಿಕೊಳ್ಳಲು ಕ್ರಿಯಾಶೀಲರಾಗಬೇಕು. ಅಂದಾಗ ತಾನು ಕಲಿತ ಶಾಲೆ, ಗುರುಗಳ‌ ಶ್ರಮ ಸಾರ್ಥಕವಾಗುತ್ತದೆ. 

ಕಲಿಸಿದ ಗುರುವಿನ ನೆನೆದು, ವಂದನೆ ಸಲ್ಲಿಸುವಲ್ಲಿ ವಿ.ಎಫ್. ಪಾಟೀಲ ಪ್ರೌಢಶಾಲೆಯ 1994-95ನೇ ಸಾಲಿನ ವಿದ್ಯಾರ್ಥಿಗಳು ಗುರುವಂದನ ಸಮಾರಂಭ ಹಮ್ಮಿಕೊಂಡಿದ್ದು, ಸಂತಸ ಹಾಗೂ ಔಚಿತ್ಯಪೂರ್ಣವಾಗಿದೆ ಎಂದರು.

ಶಿಕ್ಷಕ ಎಸ್.ಐ. ದಿಂಡೂರ ಮಾತನಾಡಿ, ನಾವು ಮಕ್ಕಳಿಗೆ ಏನು ಕಲಿಸಿದ್ದೇವೆ, ನಾವು ಹೇಳಿ ಕೊಟ್ಟ ಪಾಠ ಮಕ್ಕಳ ಮೇಲೆ ಪರಿಣಾಮ ಬೀರಿದೆಯೋ ಇಲ್ಲವೋ? ಎಂಬುದನ್ನು ಓರೆಗಲ್ಲಿಗೆ ಹಚ್ಚದೆಯೇ, ಗುರುವಿನ ಮೀರಿಸಿದ ಶಿಷ್ಯರಾಗಿ ಬೆಳೆದದ್ದನ್ನು ಕಂಡಲ್ಲಿ ಶಿಕ್ಷಕರಿಗಿಂತ ಭಾಗ್ಯಶಾಲಿಗಳು ಮತ್ತೊಬ್ಬರಿಲ್ಲ ಎಂಬುದು ನನ್ನ ಭಾವನೆ. ಶಿಕ್ಷಣ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಪಾದಪೂಜೆಗೈದು ನಮನ: 1994-95ನೇ ಸಾಲಿನ ವಿ.ಎಫ್. ಪಾಟೀಲ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಎಲ್ಲ ಗುರುಗಳು, ಗುರುಮಾತೆಯರ ಪಾದಪೂಜೆ ಮಾಡಿ ನಮಿಸಿದರು. 

ಗುರುಗಳು ಶಿಷ್ಯರ ಕುಶಲೋಪರಿ ವಿಚಾರಿಸಿದರು. ನೆಚ್ಚಿನ ಗುರುಗಳೊಂದಿಗ ಸೆಲ್ಫಿ ತೆಗೆದುಕೊಂಡರು. ಸ್ನೇಹಿತರು ಪರಸ್ಪರ ಹರಟೆ, ತಮಾಷೆಗಳೊಂದಿಗೆ ಸಂಭ್ರಮಿಸಿ, ಗುರುಗಳೊಂದಿಗೆ ಸಿಹಿ ಭೋಜನಗೈದು ಖುಷಿಪಟ್ಟರು.

ಕೊತಬಾಳ ಅರುಣೋದಯ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸ್ನೇಹಿತರನ್ನು ಸನ್ಮಾನಿಸಲಾಯಿತು.

ತಾಲೂಕ ಶಿಕ್ಷಣ ಸಮಿತಿ ಅಧ್ಯಕ್ಷ ಬಿ.ವಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುತ್ತಣ್ಣ ಪ್ರಧಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಆರ್.ಎಚ್‌. ಬೂದಿಹಾಳ, ಬಿ.ಬಿ. ಜಕ್ಕಲಿ, ಎಂ.ಬಿ. ಕೊರ್ಲಹಳ್ಳಿ, ಎಸ್.ಐ. ದಿಂಡೂರ, ಎಂ.ವೈ. ಕಿತ್ತಲಿ, ಎಂ.ಎಸ್. ರಟ್ಟಿಹಳ್ಳಿಮಠ, ಡಿ.ವಿ. ಪಾಟೀಲ, ವಿ.ಎ. ಮತ್ತಿಕಟ್ಟಿ, ಎಂ.ವಿ. ಲಿಂಗನಗೌಡ್ರ, ಜೆ.ಎ. ಪಾಟೀಲ ಉಪಸ್ಥಿತರಿರುವರು. ಮಾರ್ಕಂಡೇಶ ಚಿತ್ತವಾಡಗಿ ಸ್ವಾಗತಿಸಿದರು. ಎಲ್.ಬಿ. ಬಸೆವಡೆಯರ ಕಾರ್ಯಕ್ರಮ ನಿರೂಪಿಸಿದರು.