ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿನಿತ್ಯ ಯೋಗ, ಧ್ಯಾನ ಮಾಡಿದರೆ ದೇಹ ಮತ್ತು ಮನಸ್ಸಿನ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.ನಗರದ ಅವಧೂತ ದತ್ತಪೀಠದ ನಾದ ಮಂಟಪದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಕ್ಕಳೊಂದಿಗೆ ಮಕ್ಕಳಾಗಿ ಯೋಗಾಸನ ಮಾಡಿದ ನಂತರ ಮಾತನಾಡಿದ ಅವರು, ಪ್ರತಿನಿತ್ಯ ಯೋಗ ಮಾಡಿ, ಕನಿಷ್ಠ 40 ನಿಮಿಷ ಧ್ಯಾನ ಮಾಡಿ. ಅದರಿಂದ ಆಗುವ ಅನುಭವ ಅದ್ಭುತ. ಅಂತಹ ಸಮಯವನ್ನು ಮಿಸ್ ಮಾಡದೆ ಸದುಪಯೋಗ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
40 ನಿಮಿಷ ಕಣ್ಣು ಮುಚ್ಚಿ ಉಸಿರನ್ನು ಒಂದೇ ತರ ಸಮತುಷ್ಟಿಯಲ್ಲಿ ತೆಗೆದುಕೊಳ್ಳಬೇಕು, ಮುಖದಲ್ಲಿ ನಗು ಇರಬೇಕು, ಕೋಪ, ಹಸಿವು ತೋರಬಾರದು. ಬೇರೆ ಯಾವುದೇ ಯೋಚನೆಯನ್ನು ಮಾಡಬಾರದು. ಯಾವ ಕೆಟ್ಟ ಶಬ್ದವನ್ನಾಗಲಿ ಅಥವಾ ಹಾಡು, ಮಾತುಗಳನ್ನು ಆಲಿಸದೆ ತದೇಕಚಿತ್ತರಾಗಿ ಧ್ಯಾನ ಮಾಡಬೇಕು ಎಂದರು.ಯೋಗ ಮಾಡುವುದರಿಂದ ದೇಹ ಸದೃಢವಾಗುತ್ತದೆ, ಮನಸು ತಿಳಿಯಾಗಿರುತ್ತದೆ. ದೇಹ ರಬ್ಬರ್ ನಂತೆ ಹೇಗೆ ಬೇಕಾದರೂ ಬೆಂಡ್ ಮಾಡಬಹುದು. ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಯೋಗ ಧ್ಯಾನದ ಜೊತೆಗೆ ಹಠಯೋಗ ಕೂಡ ಮಾಡಬೇಕು. ನಮ್ಮ ಆಶ್ರಮದ ಮಕ್ಕಳು ಹೀಗೆ ಹಠಯೋಗ ಮಾಡಿ ಸದೃಢರಾಗಿದ್ದಾರೆ. ಹೇಗೆ ಬೇಕಾದರೂ ದೇಹ ಬೆಂಡ್ ಮಾಡುತ್ತಾರೆ ಎಂದು ಅವರು ಶ್ಲಾಘಿಸಿದರು.
ಇಂದಿನ ಯೋಗ ದಿನಾಚರಣೆಯಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಿಶೇಷ ಮಕ್ಕಳು ಪಾಲ್ಗೊಂಡು ಯೋಗಭ್ಯಾಸ ಮಾಡಿದ್ದು ವಿಶೇಷವಾಗಿತ್ತು. ಅವಧೂತಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಇದ್ದರು.ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಅಂತಾರಾಷ್ಟ್ರೀಯ ಯೋಗದಿನದ ಸಂಭ್ರಮ
ಕನ್ನಡಪ್ರಭ ವಾರ್ತೆ ಮೈಸೂರುವಿಜಯನಗರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಿತು.ಮೊದಲಿಗೆ ಶಾಲೆಯ ವಿದ್ಯಾರ್ಥಿಗಳಿಂದ ಅನಾವರಣಗೊಂಡ ಯೋಗವ್ಯೂಹ ರಚನಾ ಪ್ರದರ್ಶನವನ್ನು ಕಣ್ತುಂಬಿಕೊಂಡ ಪೋಷಕರು ಹಾಗೂ ಗಣ್ಯರು ಮೆಚ್ಚುಗೆಯಿಂದ ತಲೆದೂಗಿದರು.ತದನಂತರ ದೀಪ ಪ್ರಜ್ವಲನೆ ಹಾಗೂ ಶಾಲಾ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವರ್ಷದ ಧ್ಯೇಯ ವಾಕ್ಯವಾದ ಮಹಿಳಾ ಸಬಲೀಕರಣ ಎಂಬ ಪರಿಕಲ್ಪನೆಯ ಆಶಯದಂತೆ, ವಿದ್ಯಾರ್ಥಿಗಳೊಂದಿಗೆ ಮಹಿಳಾ ಪೋಷಕರು ಕೂಡಾ ಯೋಗ ಮಾಡುವ ಮೂಲಕ ಉತ್ಸಾಹದಿಂದ ಯೋಗ ದಿನದ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಆಯ್ದ ವಿದ್ಯಾರ್ಥಿ - ವಿದ್ಯಾರ್ಥಿನಿಯರ ಪ್ರತ್ಯೇಕ ತಂಡಗಳು ನೀಡಿದ ಯೋಗ ಪಿರಾಮಿಡ್ ಪ್ರದರ್ಶನವು ಮನಮೋಹಕವಾಗಿತ್ತು.ಮುಖ್ಯಅತಿಥಿಗಳಾಗಿ ಎ. ಶಂಕರಚೆಟ್ಟಿ ಅಂಡ್ ಸನ್ಸ್ ನಿರ್ದೇಶಕಿ ಪಲ್ಲವಿ ಆದರ್ಶ್ ಮಾತನಾಡಿ, ಆಧ್ಯಾತ್ಮಿಕ ಉನ್ನತೀಕರಣದಲ್ಲಿ ಯೋಗದ ಪಾತ್ರ, ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಷ್ಟಾಂಗ ಯೋಗದ ಅವಶ್ಯಕತೆಯನ್ನು ಕುರಿತು ಸರಳ ಸುಂದರವಾಗಿ ವಿವರಿಸಿದರು. ಶಾಲೆಯ ಕಾರ್ಯದರ್ಶಿ ಎ.ಆರ್. ಮಲ್ಲರಾಜೇ ಅರಸ್, ಆಡಳಿತಾಧಿಕಾರಿ ಕೆ.ಎಲ್. ಚಂದ್ರಶೇಖರ್, ಶೈಕ್ಷಣಿಕ ಸಂಯೋಜಕಿ ದಿವ್ಯಾ ಗಣೇಶ್, ಬೋಧಕ - ಬೋಧಕೇತರ ವರ್ಗ ಹಾಗೂ ಪೋಷಕರು ಇದ್ದರು.