ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಸೆಕ್ಟರ್ ಸಂಖ್ಯೆ 25ರಲ್ಲಿ ನೂತನವಾಗಿ ನಿರ್ಮಿಸಿರುವ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನೂತನ ಪ್ರಧಾನ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ಜೂ.23ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಆರ್. ಪಾಟೀಲ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲ್ಲಾಪುರ ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ದೇವರು ಸಾನ್ನಿಧ್ಯ ವಹಿಸಲಿದ್ದು, ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಟ್ಟಡ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಹಾತ್ಮ ಗಾಂಧೀಜಿ ಪುತ್ಥಳಿ ಅನಾವರಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.ಕರ್ನಾಟಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಪಿ.ಎಸ್. ಗದ್ದಿಗೌಡರ ನಾಮಫಲಕ ಅನಾವರಣ, ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಸಭಾಭವನ ಉದ್ಘಾಟಿಸುವರು. ಶಾಸಕ ಎಚ್.ವೈ. ಮೇಟಿ ಸೇಫ್ ಲಾಕರ್, ಮಾಜಿ ಶಾಸಕ ವೀರಣ್ಣ ಚರಂತಿಮಠ ಸಭಾಭವನ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಗಣಕಯಂತ್ರ, ರಾಜ್ಯ ಸಂಯುಕ್ತ ಸೌಹಾರ್ದ ಅಧ್ಯಕ್ಷ ಜಿ.ನಂಜನಗೌಡ ಕ್ಯಾಶ್ ಕೌಂಟರ್ ಉದ್ಘಾಟಿಸಲಿದ್ದಾರೆ. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಉಪಾಧ್ಯಕ್ಷ ಎಸ್.ಆರ್. ಪ್ರಸನ್ನಕುಮಾರ, ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ದೇವರಾಜ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
₹ 12.28 ಲಕ್ಷ ಷೇರು ಬಂಡವಾಳದಿಂದ ಆರಂಭ:2008ರಲ್ಲಿ 1702 ಸದಸ್ಯರಿಂದ ₹ 12.28 ಲಕ್ಷ ಷೇರು ಬಂಡವಾಳದಿಂದ ಬಾಗಲಕೋಟೆಯಲ್ಲಿ ಪ್ರಧಾನ ಕಚೇರಿ ಹಾಗೂ 3 ಶಾಖೆಗಳೊಂದಿಗೆ ಪ್ರಾರಂಭಿಸಲಾಯಿತು. ಸಹಕಾರಿ ಸಂಘದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಒಂದು ವರ್ಷದಲ್ಲಿ 25 ಶಾಖೆಗಳು, ₹ 20 ಕೋಟಿ ಠೇವಣಿ ಸಂಗ್ರಹ ಮಾಡುವುದಾಗಿ ವಾಗ್ದಾನ ಮಾಡಿ, ನುಡಿದಂತೆ ನಡೆದು ಒಂದು ವರ್ಷದಲ್ಲಿ 27 ಶಾಖೆ ಹಾಗೂ ₹ 20.52 ಕೋಟಿ ಠೇವಣಿ ಸಂಗ್ರಹಣೆ ಮಾಡಿ ದಾಖಲೆ ನಿರ್ಮಣ ಮಾಡಲಾಯಿತು. ಪ್ರಸಕ್ತ ಸಹಕಾರಿ ಸಂಘದಲ್ಲಿ 59182 ಸದಸ್ಯರು, ₹ 6.72 ಕೋಟಿ ಷೇರು ಬಂಡವಾಳ, 975 ಕೋಟಿ ದುಡಿಯುವ ಬಂಡವಾಳ ಹೊಂದಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಎಸ್.ಆರ್. ಪಾಟೀಲ ತಿಳಿಸಿದರು.
ಪ್ರಸಕ್ತ ಸಹಕಾರಿ ಸಂಘ 61 ಶಾಖೆಗಳನ್ನು ಹೊಂದಿ, 310 ಜನರಿಗೆ ಉದ್ಯೋಗ ಅವಕಾಶ ನೀಡಿದ್ದು, ಜನಸಾಮಾನ್ಯರ ಪ್ರಗತಿ ಹಾಗೂ ಆರ್ಥಿಕ ಸೌಲಭ್ಯಕ್ಕಾಗಿ ₹ 900 ಕೋಟಿ ಸಾಲ ನೀಡಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ₹ 15.06 ಕೋಟಿ ನಿವ್ವಳ ಲಾಭ ಗಳಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ ₹ 25 ಕೋಟಿಗೂ ಅಧಿಕ ಲಾಭ ಗಳಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.₹ 11 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ:
ಬಾಗಲಕೋಟೆ ಪಟ್ಟಣಅಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ಸೆಕ್ಟರ್ ನಂ.25ರ 16000 ಚದರ ಅಡಿ ಜಾಗದಲ್ಲಿ ಅಂದಾಜು ₹ 11 ಕೋಟಿ ವೆಚ್ಚದಲ್ಲಿ ಸುಸಜ್ಜಿತ, ಎಲ್ಲ ಸೌಲಭ್ಯಗಳನ್ನು ಹೊಂದಿದ ಗಣಕೀಕೃತ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.ಬ್ಯಾಂಕ್ ಉಪಾಧ್ಯಕ್ಷ ಜಿ.ಎನ್. ಪಾಟೀಲ, ನಿರ್ದೇಶಕರಾದ ಎ.ಎಂ. ಶೆಟ್ಟರ, ಸುಶೀಲಕುಮಾರ ಬೆಳಗಲಿ ಹಾಗೂ ಎಂ.ಎಸ್. ಪವಾರ, ಸಿಇಒ ಎಸ್.ಸಿ. ಮೊಟಗಿ, ಸಾಹಿತಿಗಳಾದ ಸತ್ಯಾನಂದ ಪಾತ್ರೋಟಿ, ಕರಿಯಪ್ಪ ಭಂಗಿ ಸೇರಿದಂತೆ ಇತರರಿದ್ದರು.
ರಾಷ್ಟ್ರಮಟ್ಟಕ್ಕೆ ವಿಸ್ತರಿಸುವ ಗುರಿ:ಸಹಕಾರಿಯ ಕಾರ್ಯಕ್ಷೇತ್ರವನ್ನು ಬಾಗಲಕೋಟೆ ಜಿಲ್ಲೆಯ ಕಾರ್ಯವ್ಯಾಪ್ತಿಯಿಂದ ರಾಜ್ಯಮಟ್ಟಕ್ಕೆ ವಿಸ್ತರಿಸಿದ್ದು, ರಾಜ್ಯಾದ್ಯಂತ 61 ಶಾಖೆಗಳನ್ನು ಪ್ರಾಂಭಿಸಿ ರಾಜ್ಯದ 6150 ಸೌಹಾರ್ದ ಸಹಕಾರಿಗಳಲ್ಲಿ ಬೃಹತ್ ಸೌಹಾರ್ದ ಸಹಕಾರಿ ಸಂಘವಾಗಿದೆ. ಇದನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸಿ (ಸಹಕಾರಿ ಸಂಘವನ್ನು ಬಹುರಾಜ್ಯ ಪತ್ತಿನ ಸಹಕಾರಿ ಸಂಘವನ್ನಾಗಿ ಪರಿವರ್ತಿಸುವುದು) ರಾಷ್ಟ್ರವ್ಯಾಪ್ತಿಯಲ್ಲಿ 60 ಹೊಸ ಶಾಖೆಗಳನ್ನು
ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.