ಸಾರಾಂಶ
ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿವ ಮುನಿರತ್ನರವರು ಪರಿಶಿಷ್ಟ ಜಾತಿ ಮತ್ತು ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳ ಬಳಸಿ ನಿಂದಿಸಿರುವುದು ಖಂಡನೀಯ. ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಹನಿಟ್ರ‍್ಯಾಪ್ ಮಾಡಿ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಇಂತಹ ಘಟನೆಗಳಿಂದ ನಾಗರೀಕ ಸಮಾಜವೇ ತಲೆತಗ್ಗಿಸುವಂತಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಶಾಸಕ ಮುನಿರತ್ನ ಅವರು ಪರಿಶಿಷ್ಟ ಜಾತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿ ಎದುರು ಸೇರಿದ ಪದಾಧಿಕಾರಿಗಳು ಹಾಗೂ ಮುಖಂಡರು ಶಾಸಕ ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಪ್ರಭಾರ ತಹಸೀಲ್ದಾರ್ ಬಿ.ವಿ.ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಎಂ.ಎನ್.ಜಯರಾಮು, ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿವ ಮುನಿರತ್ನರವರು ಪರಿಶಿಷ್ಟ ಜಾತಿ ಮತ್ತು ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳ ಬಳಸಿ ನಿಂದಿಸಿರುವುದನ್ನು ಖಂಡಿಸಿದರು.ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಹನಿಟ್ರ‍್ಯಾಪ್ ಮಾಡಿ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಇಂತಹ ಘಟನೆಗಳಿಂದ ನಾಗರೀಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಕೂಡಲೇ ಮುನಿರತ್ನರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸಾಗ್ಯ ಕೆಂಪಯ್ಯ ಮಾತನಾಡಿ, ಕೆಟ್ಟ ಮನಸ್ಥಿತಿ ಹೊಂದಿರುವ ಮುನಿರತ್ನ ಎಂಬ ರಾಜಕಾರಣಿಗೆ ನ್ಯಾಯಾಲಯದ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಲಿಸದಂತೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.ಬಿಎಸ್‌ಪಿ ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಜನಪ್ರತಿನಿಧಿಯಾಗಿರುವ ಮುನಿರತ್ನ ದಲಿತ ಜನಾಂಗದ ಬಗ್ಗೆ ಜಾತಿ ನಿಂದನೆ ಮಾಡಿ ಮಹಿಳೆಯರ ಬಗ್ಗೆ ಅವಾಚ್ಯ ಪದ ಪ್ರಯೋಗ ಮಾಡಿರುವುದು ಸಮಾಜವೇ ತಲೆ ತಗ್ಗಿಸುವಂತಾಗಿದೆ. ನೀಚ ಮನಸ್ಥಿತಿಯುಳ್ಳವರು ಶಾಸಕನಾಗಿ ಮುಂದುವರೆಯಲು ಅನರ್ಹರಾಗಿದ್ದು, ರಾಜ್ಯಪಾಲರು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಾಡ್ಲಿ ಗ್ರಾಪಂ ಅಧ್ಯಕ್ಷ ಚಲುವರಾಜು, ಮುಖಂಡರಾದ ಮರಿಸ್ವಾಮಿ, ಬಸಪ್ಪ, ಎಸ್.ಮಲ್ಲು, ವೀರಭದ್ರಯ್ಯ, ಶಾಂತರಾಜು, ಕುಮಾರ್‌ಪ್ರಸಾದ್, ಯತೀಶ್, ಕುಮಾರ್, ರಾಜು, ಸುರೇಶ್, ಆನಂದ್ ಕುಮಾರ್, ಅಶೋಕ್, ಆನಂದ್, ಚಂದ್ರಹಾಸ್ ಇದ್ದರು.