ಸಾರಾಂಶ
ಯಲ್ಲಾಪುರ: ರಾಜ್ಯ ಸರ್ಕಾರ ಸಹಕಾರ ಸಂಘಗಳ ಮೇಲೆ ತೀವ್ರ ಹಸ್ತಕ್ಷೇಪ ಮಾಡುತ್ತಿದ್ದು, ಇದರಿಂದ ಸಂಘಗಳ ಪ್ರಗತಿಗೆ ಮಾರಕವಾಗುತ್ತಿದೆ. ಆ ದೃಷ್ಟಿಯಿಂದ ಜಿಲ್ಲೆಯ ಸಹಕಾರಿ ಕ್ಷೇತ್ರ ದೇಶಕ್ಕೇ ಮಾದರಿಯಾಗಿದೆ. ಈ ಕ್ಷೇತ್ರವನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಮುನ್ನಡೆಯದಿದ್ದರೆ ಕೃಷಿಕರ ಜೀವಾಳಕ್ಕೆ ಧಕ್ಕೆಯಾಗುತ್ತದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಸೆ. ೧೯ರಂದು ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ೫೯ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು.ಸಹಕಾರಿ ಕ್ಷೇತ್ರದಲ್ಲಿರುವ ಎಲ್ಲರೂ ಸಂಘಟಿತರಾಗಿ ಸರ್ಕಾರದ ನೀತಿಯ ವಿರುದ್ಧ ಹೋರಾಡಬೇಕು. ಕೇಂದ್ರ ಸರ್ಕಾರ ಇಡೀ ದೇಶಕ್ಕೇ ಒಂದು ಸಹಕಾರಿ ತತ್ವ ಅಳವಡಿಸುವ ಉದ್ದೇಶದಿಂದ ಪ್ರತ್ಯೇಕ ಇಲಾಖೆ ರಚಿಸಿ, ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಪ್ರಕೃತಿಯ ಮುನಿಸಿನಿಂದ ಅಡಕೆ ಬೆಳೆಗಾರರಿಗೆ ಸದಾ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ಇದನ್ನು ಸಹಕಾರಿ ರಂಗ ಮತ್ತು ಸರ್ಕಾರ ಗಮನಿಸಿ, ರೈತರ ಪರ ನಿಲ್ಲಬೇಕಾಗುತ್ತದೆ ಎಂದರು. ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಮಲೆನಾಡಿನ ಈ ಪ್ರದೇಶದ ಜನರಿಗೆ ಕಸ್ತೂರಿರಂಗನ್ ವರದಿ ತೀವ್ರ ಆತಂಕ ಉಂಟುಮಾಡಿದೆ. ಅದನ್ನು ನಿಯಂತ್ರಿಸುವ ಕಾರ್ಯವನ್ನು ಕಾಗೇರಿಯವರು ಮಾಡಬೇಕಾಗಿದೆ. ಸಿಆರ್‌ಜೆಡ್ ಕಾರ್ಯ ಕೂಡಾ ನಿಲ್ಲಬೇಕು. ಅಲ್ಲದೇ ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ಗಮನ ಹರಿಸಬೇಕು. ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ದಿಶಾ ಸಭೆಯನ್ನು ಕಾಗೇರಿಯವರು ನಡೆಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕೆಂದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ಮಾತನಾಡಿ, ಕಾಫಿ, ಟೀ ಸೇರಿದಂತೆ ಹಲವು ಉತ್ಪನ್ನಗಳಿಗೆ ಬೋರ್ಡ್ ಇದೆ. ಅಡಕೆಗೆ ಈವರೆಗೂ ಇಲ್ಲ. ನಮ್ಮೆಲ್ಲರ ಹೋರಾಟದ ಪರಿಣಾಮವಾಗಿ ಟಾಸ್ಕ್‌ಫೋರ್ಸ್ ಮಾತ್ರ ಮಾಡಲಾಗಿತ್ತು. ಅಡಕೆ ಬೆಳೆಗಾರರು ಲಾಬಿ ಮಾಡುವಲ್ಲಿ ಹಿಂದೆ ಬಿದ್ದಿದ್ದಾರೆ. ಟಾಸ್ಕ್‌ಫೋರ್ಸ್ ನಾಮ ಕೆ ವಾಸ್ತೆ ಮಾಡಲಾಗಿದೆ. ವಿದೇಶದಿಂದ ಕಳ್ಳಸಾಗಣೆ ಮೂಲಕ ಅಡಕೆ ಆಮದಾಗುತ್ತಿರುವುದು ಬೆಳೆಗಾರರಿಗೆ ಆತಂಕದ ವಿಷಯ ಎಂದರು. ರಾಮಕೃಷ್ಣ ಹೆಗಡೆಯವರ ನಂತರ ಮೌಲ್ಯಾಧಾರಿತ ರಾಜಕಾರಣದಲ್ಲಿ ಕಾಗೇರಿಯವರು ಕಪ್ಪುಚುಕ್ಕೆಯಿಲ್ಲದೆ ಛಾಪನ್ನು ಒತ್ತಿದ್ದಾರೆ ಎಂದು ಶ್ಲಾಘಿಸಿದರು.ಟಿಎಂಎಸ್ ಪ್ರಧಾನ ವ್ಯವಸ್ಥಾಪಕ ಸಿ.ಎಸ್. ಹೆಗಡೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಮಾತನಾಡಿದರು. ಉಪಾಧ್ಯಕ್ಷ ನರಸಿಂಹ ಕೋಣೆಮನೆ ಸ್ವಾಗತಿಸಿದರು. ವೆಂಕಟ್ರಮಣ ಭಟ್ಟ ಕಿರುಕುಂಭತ್ತಿ ನಿರ್ವಹಿಸಿದರು. ಸುಬ್ಬಣ್ಣ ಬೋಳ್ಮನೆ, ಟಿ.ಎನ್. ಭಟ್ಟ ಹಾಗೂ ಸಂಸ್ಥೆಯ ನಿರ್ದೇಶಕರು ವೇದಿಕೆಯಲ್ಲಿದ್ದರು. ನಿರ್ದೇಶಕ ವೆಂಕಟ್ರಮಣ ಬೆಳ್ಳಿ ವಂದಿಸಿದರು.