ಗ್ರಾಮಾಂತರ ಭಾಗಕ್ಕೆ ಕುಡಿಯುವ ನೀರನ್ನು ಪೂರೈಸುವ ಯೋಜನೆ ಜಾರಿಗೊಳಿಸುವ ಇಚ್ಛಾಶಕ್ತಿಯು ಇರದ ಕಾರಣ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ನೀಡುವುದು ಉತ್ತಮ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಶಾಸಕ ದೇಶಪಾಂಡೆಯವರೇ ನಿಮ್ಮಿಂದ ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗಿದೆ, ತಾವು ಕ್ಷೇತ್ರದ ರೈತರ ಋಣ ತೀರಿಸುವ ಬದಲು ರಾಜಕಾರಣವನ್ನೇ ಮಾಡುತ್ತಿರುವಿರಿ. ಗ್ರಾಮಾಂತರ ಭಾಗಕ್ಕೆ ಕುಡಿಯುವ ನೀರನ್ನು ಪೂರೈಸುವ ಯೋಜನೆ ಜಾರಿಗೊಳಿಸುವ ಇಚ್ಛಾಶಕ್ತಿಯು ಇರದ ಕಾರಣ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ನೀಡುವುದು ಉತ್ತಮ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಳಿಯಾಳ ತಾಲೂಕಿನಲ್ಲಿ ಕೈಗೊಳ್ಳಲಾಗುತ್ತಿರುವ ಕಾಳಿನದಿ ನೀರಾವರಿ ಯೋಜನೆಗೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಾದ್ಯಂತ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದೆ ಅಲ್ಲದೇ, ಅಂದಿನ ಸರ್ಕಾರವು ₹ 200 ಕೋಟಿ ಯೋಜನೆಗೆ ಅನುದಾನ ಮಂಜೂರಿ ಮಾಡಿತ್ತು ಎಂದು ತಿಳಿಸಿದ್ದಾರೆ.

ಅಂದೂ ನಾನು ಆಗ್ರಹಿಸಿದ ಕಾಳಿ ನದಿ ನೀರಾವರಿ ಯೋಜನೆಯೇ ಭಿನ್ನವಾಗಿತ್ತು. ದಾಂಡೇಲಿಯ ಕಾಳಿನದಿಯಿಂದ ಕೆನಾಲ್ ಮೂಲಕವೇ ನೀರಾವರಿ ಯೋಜನೆ ಜಾರಿಗೊಳಿಸಿ ಕ್ಷೇತ್ರದ ಎಲ್ಲಾ ಕೆರೆ ಸೇರಿದಂತೆ ಎಲ್ಲಾ ಬಾಂದಾರುಗಳನ್ನು ತಂಬಿಸುವುದು ಮತ್ತು ಕೆನಾಲ್ ಹಾದು ಹೋಗುವ ಮಾರ್ಗಗಳಲ್ಲಿ ಪೈಪ್ ಲೈನ್ ಅಳವಡಿಸಿ ಪ್ರತಿಯೊಂದು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಸಮಗ್ರ ನೀರಾವರಿ ಯೋಜನೆಯ ರೂಪರೇಷೆಯನ್ನು ಹೊಂದಿತ್ತು. 2013ರಲ್ಲಿ ಶಾಸಕರಾಗಿ ಆಯ್ಕೆಯಾದ ದೇಶಪಾಂಡೆಯವರು ಮಂಜೂರಿಯಾಗಿದ್ದ ಈ ನೀರಾವರಿ ಯೋಜನೆಯನ್ನು ಸಂಪೂರ್ಣ ರದ್ದುಗೊಳಿಸಿ ರೂಪರೇಷೆಯನ್ನೇ ಬದಲಾಯಿಸಿ ಕೇವಲ ಆಯ್ದ ಕೆರೆ ಮತ್ತು ಬಾಂದಾರುಗಳಿಗೆ ವರ್ಷಕ್ಕೆ ಒಂದು ಬಾರಿ ಮಾತ್ರ ನೀರು ತುಂಬಿಸುವ ಯೋಜನೆಯಾಗಿ ಮಾರ್ಪಾಡು ಮಾಡುವ ಮೂಲಕ ಕ್ಷೇತ್ರದ ರೈತರಿಗೆ ಮಹಾಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಸ್ತುತ ಆಮೆಗತಿಯಲ್ಲಿ ನಡೆಯುತ್ತಿರುವ ಈಗಿನ ಕಾಳಿ ನದಿಯಿಂದ ಆಯ್ದ ಕೆರೆಗಳನ್ನು ತುಂಬಿಸುವ ಯೋಜನೆಯೇ ಬೇರೆಯಾಗಿದ್ದು, ಇದೊಂದು ಬೋಗಸ್ ಯೋಜನೆಯಾಗಿದೆ. ಇದರಿಂದ ರೈತರಿಗೆ ಲಾಭವಾಗುವುದಿಲ್ಲ ಎಂದು ದೂರಿದ್ದಾರೆ.